ADVERTISEMENT

ಖಾದಿ ಬಟ್ಟೆ | ಶೀಘ್ರ ಸುತ್ತೋಲೆ; ಷಡಾಕ್ಷರಿ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 16:12 IST
Last Updated 29 ಜನವರಿ 2026, 16:12 IST
ಶಾಲಿನಿ ರಜನೀಶ್‌ ಜೊತೆ ಸಿ.ಎಸ್‌. ಷಡಾಕ್ಷರಿ ಚರ್ಚೆ ನಡೆಸಿದರು
ಶಾಲಿನಿ ರಜನೀಶ್‌ ಜೊತೆ ಸಿ.ಎಸ್‌. ಷಡಾಕ್ಷರಿ ಚರ್ಚೆ ನಡೆಸಿದರು   

ಬೆಂಗಳೂರು: ಖಾದಿ ಉತ್ಪನ್ನಗಳನ್ನು ಉತ್ತೇಜಿಸುವ ಉದ್ದೇಶದಿಂದ ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯದ ನಿಗಮ-ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯ, ಅನುದಾನಿತ ಸಂಸ್ಥೆಗಳ ಅಧಿಕಾರಿ‌, ನೌಕರರು ಪ್ರತಿ ತಿಂಗಳ ಮೊದಲ ಶನಿವಾರ ಸ್ವಯಂ ಪ್ರೇರಣೆಯಿಂದ ಖಾದಿ ಬಟ್ಟೆಗಳನ್ನು ಧರಿಸಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಈ ಕುರಿತಂತೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅಧ್ಯಕ್ಷತೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಜತೆ ಗುರುವಾರ ಸಭೆ ನಡೆಯಿತು.

‘ಉದ್ದೇಶಿತ ಈ ಯೋಜನೆಗೆ ಸರ್ಕಾರಿ ನೌಕರರ ದಿನಾಚರಣೆಯಂದು (ಏಪ್ರಿಲ್‌ 21) ಚಾಲನೆ ನೀಡಲಾಗುವುದು’ ಎಂದು ಸಭೆಯ ಬಳಿಕ ಸಂಘದ ಅಧ್ಯಕ್ಷ ಸಿ.ಎಸ್‌. ಷಡಾಕ್ಷರಿ ತಿಳಿಸಿದ್ದಾರೆ.

ADVERTISEMENT

‘ಪುರುಷ ನೌಕರರು ಖಾದಿ ಬಟ್ಟೆಯ ಶರ್ಟ್-ಪ್ಯಾಂಟ್, ಓವರ್ ಕೋಟ್ ಹಾಗೂ ಇತರೆ ಶಿಸ್ತಿನ ಉಡುಗೆಯನ್ನು, ಮಹಿಳಾ ನೌಕರರು ಖಾದಿ ಹಾಗೂ ಖಾದಿ ಸಿಲ್ಕ್ ಬಟ್ಟೆಯ ಸೀರೆ, ಚೂಡಿದಾರ್ ಹಾಗೂ ಇತರೆ ಶಿಸ್ತಿನ ಉಡುಗೆ ಧರಿಸಬೇಕು. ಸರ್ಕಾರಿ ಸ್ವಾಮ್ಯದ ಖಾದಿ ಗ್ರಾಮೋದ್ಯೋಗ ಮಂಡಳಿಯ ಮಳಿಗೆಗಳಿಂದ ಈ ಬಟ್ಟೆಗಳನ್ನು ಖರೀದಿಸಬೇಕು. ಮಂಡಳಿಯು ಹಾಲಿ ನೀಡುತ್ತಿರುವ ರಿಯಾಯಿತಿಯ ಹೊರತಾಗಿ ಅಧಿಕಾರಿ-ನೌಕರರಿಗೆ ಶೇ 5ರಷ್ಟು ಹೆಚ್ಚುವರಿ ರಿಯಾಯಿತಿ ನೀಡಲಿದೆ. ಈ ಕುರಿತಂತೆ ಸರ್ಕಾರ ಸುತ್ತೋಲೆ ಹೊರಡಿಸಲಿದೆ’ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.

‘ರಾಜ್ಯ ಸರ್ಕಾರಿ ನೌಕರರಿಗೆ ದಿನಬಳಕೆ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಪೂರೈಸಲು ಎಂಎಸ್‌ಐಎಲ್‌ ಸಂಸ್ಥೆಯ ಮೂಲಕ ಸೇನಾ ಕ್ಯಾಂಟೀನ್ ಮಾದರಿಯಲ್ಲಿ ‘ಸರ್ಕಾರಿ ನೌಕರರ ಕ್ಯಾಂಟೀನ್’ ಆರಂಭಿಸುವ ಯೋಜನೆಯನ್ನು 2026-27ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಬೇಕು. ಅಲ್ಲದೆ, ಕೆಎಸ್‌ಐಸಿ ಸಂಸ್ಥೆಯು ಐಎಎಸ್‌ ಅಧಿಕಾರಿಗಳು ಖರೀದಿಸುವ ರೇಷ್ಮೆ ಸೀರೆ ಮತ್ತು ರೇಷ್ಮೆ ವಸ್ತ್ರಗಳಿಗೆ ಹೆಚ್ಚುವರಿ ಶೇ 5ರಷ್ಟು ವಿಶೇಷ ರಿಯಾಯಿತಿ ನೀಡುತ್ತಿರುವ ಮಾದರಿಯಲ್ಲಿ ರಾಜ್ಯ ಸರ್ಕಾರದ ಎಲ್ಲ ಅಧಿಕಾರಿ, ನೌಕರರಿಗೂ ಹೆಚ್ಚುವರಿ ಶೇ 5ರಷ್ಟು ವಿಶೇಷ ರಿಯಾಯಿತಿ ನೀಡಬೇಕು’ ಎಂದೂ ಅವರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.