ADVERTISEMENT

ಅಗತ್ಯ ಇದ್ದಾಗ ಸಿ.ಎಂ, ಡಿಸಿಎಂಗೆ ಬುಲಾವ್‌: ಮಲ್ಲಿಕಾರ್ಜುನ ಖರ್ಗೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 16:13 IST
Last Updated 12 ಜನವರಿ 2026, 16:13 IST
   

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಬೂದಿ ಮುಚ್ಚಿದ ಕೆಂಡದಂತಿದೆ. ಈ ನಡುವೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ ಮಾಡಿ ಚರ್ಚೆ ನಡೆಸಿರುವುದು ಕಾಂಗ್ರೆಸ್‌ ಪಾಳಯದಲ್ಲಿ ಮತ್ತೆ ಚರ್ಚೆಗೆ ಕಾರಣವಾಗಿದೆ.

ಸದಾಶಿವ ನಗರದಲ್ಲಿರುವ ಖರ್ಗೆಯವರ ನಿವಾಸಕ್ಕೆ ಸೋಮವಾರ ಬೆಳಿಗ್ಗೆ ತೆರಳಿದ ಡಿ.ಕೆ. ಶಿವಕುಮಾರ್, ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ.

ಭೇಟಿ ಬಳಿಕ ಸುದ್ದಿಗಾರರು,  ‘ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರನ್ನು ದೆಹಲಿಗೆ ಯಾವಾಗ ಕರೆಸಿಕೊಳ್ಳುತ್ತೀರಿ’ ಎಂದು ಪ್ರಶ್ನಿಸಿದರು.  ‘ನಮಗೆ ಯಾವಾಗ ಅಗತ್ಯ ಇರುತ್ತದೊ ಆವಾಗ ರಾಜ್ಯ ನಾಯಕರನ್ನು ದೆಹಲಿಗೆ ಕರೆಸಿಕೊಳ್ಳುತ್ತೇವೆ’ ಎಂದು ಖರ್ಗೆಯವರು ಪ್ರತಿಕ್ರಿಯಿಸಿದರು.

ADVERTISEMENT

ಬಳಿಕ ಕಲಬುರಗಿಗೆ ಪ್ರಯಾಣ ಬೆಳೆಸಲು ಒಂದೇ ಕಾರಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ಶಿವಕುಮಾರ್‌ ವಿಮಾನ ನಿಲ್ದಾಣಕ್ಕೆ ತೆರಳಿದರು.

16ರಂದು ಡಿಕೆಶಿ ದೆಹಲಿಗೆ: ಅಸ್ಸಾಂ ವಿಧಾನಸಭಾ ಚುನಾವಣೆಗೆ ಹಿರಿಯ ವೀಕ್ಷಕರಾಗಿ ಡಿ.ಕೆ. ಶಿವಕುಮಾರ್ ಅವರನ್ನು ಎಐಸಿಸಿ ನೇಮಿಸಿದ್ದು, ಚುನಾವಣೆಗೆ ಸಂಬಂಧಿಸಿದಂತೆ ಚರ್ಚಿಸಲು ಇದೇ 16ರಂದು ದೆಹಲಿಯಲ್ಲಿ ವೀಕ್ಷಕರ ಸಭೆ ನಡೆಯಲಿದೆ. ಆ ಸಭೆಯಲ್ಲಿ ಶಿವಕುಮಾರ್‌ ಭಾಗವಹಿಸಲಿದ್ದಾರೆ. ಅದೇ ದಿನ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಲು ಶಿವಕುಮಾರ್‌ ಸಮಯ ಕೇಳಿದ್ದಾರೆ ಎಂದು ಹೇಳಲಾಗಿದೆ. ಸಮಯ ಕೊಟ್ಟರೆ ಪ್ರತ್ಯೇಕವಾಗಿ ಭೇಟಿ ಮಾಡುವ ಸಾಧ್ಯತೆ ಇದೆ.

ಅಲ್ಲದೆ, ‘ನರೇಗಾ ಬಚಾವ್‌ ಸಂಗ್ರಾಮ್‌’ ಕಾರ್ಯಕ್ರಮದ ರೂಪುರೇಷೆ ಕುರಿತು ಚರ್ಚಿಸಲು ಎಐಸಿಸಿಯು, ಇದೇ  22ರಂದು ಎಲ್ಲ ರಾಜ್ಯಗಳ ಪ್ರದೇಶ ಕಾಂಗ್ರೆಸ್‌ ಸಮಿತಿ (ಪಿಸಿಸಿ) ಅಧ್ಯಕ್ಷರ ಮತ್ತು ಕಾಂಗ್ರೆಸ್‌ ಪ್ರತಿನಿಧಿಸುವ ಮುಖ್ಯಮಂತ್ರಿಗಳ ಸಭೆಯನ್ನು ದೆಹಲಿಯಲ್ಲಿ ಆಯೋಜಿಸಿದೆ. ಈ ಸಭೆಯಲ್ಲಿಯೂ ಶಿವಕುಮಾರ್ ಭಾಗವಹಿಸುವ ಸಾಧ್ಯತೆಯಿದೆ.

ಭೇಟಿಗೆ ಸಿಗದ ಅವಕಾಶ: ನಾಯಕತ್ವ ಗೊಂದಲ ನಿವಾರಿಸುವಂತೆ ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡಲು ನವೆಂಬರ್‌ನಲ್ಲಿ ಡಿ.ಕೆ. ಶಿವಕುಮಾರ್‌ ದೆಹಲಿಗೆ ತೆರಳಿದ್ದರು. ಆದರೆ, ಬಿಹಾರ ಚುನಾವಣೆ ಕಾರಣಕ್ಕೆ ರಾಹುಲ್‌ ಗಾಂಧಿ ಭೇಟಿಗೆ ಅವಕಾಶ ನೀಡಿರಲಿಲ್ಲ. ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗದೆ ವಾಪಸ್‌ ಆಗಿದ್ದರು. ಈ ಬಾರಿ ವರಿಷ್ಠರ ಭೇಟಿಗೆ ಸಮಯ ಕೊಡಿಸುವಂತೆ ಮತ್ತು ಭೇಟಿ ಮಾಡಿಸುವಂತೆ ಖರ್ಗೆ ಬಳಿ ಶಿವಕುಮಾರ್ ಮನವಿ ಮಾಡಿದ್ದಾರೆ ಎಂದು ಗೊತ್ತಾಗಿದೆ.