ADVERTISEMENT

ಭಯೋತ್ಪಾದಕರ ಹುಡುಕಿ ಹೊಡೆದು ಹಾಕಿ: ಖರ್ಗೆ

ನವದೆಹಲಿಯಲ್ಲಿ ಸಿಡಬ್ಲ್ಯುಸಿ ಸಭೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2025, 15:51 IST
Last Updated 23 ಏಪ್ರಿಲ್ 2025, 15:51 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ಬೆಂಗಳೂರು: ‘ಉಗ್ರರ ದಾಳಿಗೆ ಸಂಬಂಧಿಸಿದಂತೆ, ಕೇಂದ್ರ ಸರ್ಕಾರ ತಕ್ಷಣ ಸರ್ವಪಕ್ಷ ಸಭೆ ಕರೆದು ಎಲ್ಲರ ಅಭಿಪ್ರಾಯ ಪಡೆಯುವುದರ ಜತೆಗೆ ಭಯೋತ್ಪಾದಕರನ್ನು ಹುಡುಕಿ ಹೊಡೆದು ಹಾಕಬೇಕು’ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕರೂ ಆಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷವು ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡಲಿದೆ’ ಎಂದರು.

‘ಉಗ್ರರ ದಾಳಿ ವಿಚಾರವಾಗಿ ಚರ್ಚಿಸಲು ನವದೆಹಲಿಯ ಎಐಸಿಸಿ ಕಚೇರಿಯಲ್ಲಿ ಗುರುವಾರ (ಏಪ್ರಿಲ್‌ 24) ಬೆಳಿಗ್ಗೆ 11 ಗಂಟೆಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆ ಕರೆಯಲಾಗಿದೆ’ ಎಂದರು.

ADVERTISEMENT

‘ಇದು ದೇಶದ ಮೇಲೆ ನಡೆದ ದಾಳಿ. ಇಡೀ ದೇಶ ಆಘಾತಕ್ಕೆ ಒಳಗಾಗಿದ್ದು, ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಈ ದಾಳಿಯ ಹೊಣೆ ಹೊತ್ತಿದೆ. ಅಮಾಯಕ ನಾಗರಿಕರ ಮೇಲೆ ದಾಳಿ ಮಾಡುವವರು ಮನುಷ್ಯರಲ್ಲ. ನಾವು ತಕ್ಕ ತಿರುಗೇಟು ನೀಡಬೇಕು. ಆದರೆ, ಈ ವಿಚಾರದಲ್ಲಿ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸದೆ ಪ್ರಚಾರ ಪಡೆಯಬಾರದು. ಇಂತಹ ಸಂದರ್ಭದಲ್ಲಿ ಯಾರು ಹೆಚ್ಚು ಕೆಲಸ ಮಾಡಿದರು, ಯಾರು ಮಾಡಿಲ್ಲ ಎಂಬ ಚರ್ಚೆಗಳು ಬರಬಾರದು’ ಎಂದರು.

‘ಇದು ಎಲ್ಲರೂ ಒಗ್ಗಟ್ಟಾಗಿ ಮೃತರ ಕುಟುಂಬಗಳಿಗೆ ನ್ಯಾಯ ದೊರಕಿಸಿಕೊಡುವ ಸಮಯ. ಈ ಹೀನ ಕೃತ್ಯ ಮಾಡಿದವರಿಗೆ ಕಠಿಣ ಶಿಕ್ಷೆ ನೀಡುವ ಸಮಯ. ಭಯೋತ್ಪಾದನೆ ಸವಾಲಿನ ಕುರಿತು ಸರ್ಕಾರ ಎಲ್ಲ ಪಕ್ಷಗಳ ಜತೆ ಚರ್ಚೆ ಮಾಡಬೇಕು. ವಿರೋಧ ಪಕ್ಷಗಳ ಉತ್ತಮ ಸಲಹೆಗಳನ್ನು ಸ್ವೀಕರಿಸಲಿ, ಸಾಧ್ಯವಾಗದ್ದನ್ನು ತಿರಸ್ಕರಿಸಲಿ. ಸರ್ವಪಕ್ಷ ಸಭೆ ಮಾಡಿದಾಗ ಎಲ್ಲರೂ ಒಂದೇ ಎಂಬ ಭಾವನೆ ಮೂಡುತ್ತದೆ’ ಎಂದರು.

‘ಅಮರನಾಥ ಯಾತ್ರೆ ವೇಳೆಯೂ ಹಿಂದೆ ಇಂತಹ ದಾಳಿ ನಡೆದಿತ್ತು. ಹೀಗಾಗಿ ಕೇಂದ್ರ ಸರ್ಕಾರ ಹಾಗೂ ಅಲ್ಲಿನ ರಾಜ್ಯ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಅಮರನಾಥ ಯಾತ್ರೆಗೆ ತೆರಳುವ ಪ್ರವಾಸಿಗರಿಗೆ ಅಗತ್ಯ ಭದ್ರತೆ ಒದಗಿಸಿಕೊಡಬೇಕು’ ಎಂದರು.

‘ಜಮ್ಮು ಕಾಶ್ಮೀರದಲ್ಲಿ ಪದೇ ಪದೇ ಭದ್ರತಾ ವೈಫಲ್ಯ ಆಗುತ್ತಿರುವುದಕ್ಕೆ ಕಾರಣವೇನು’ ಎಂದು ಕೇಳಿದಾಗ, ‘ನಾನು ವಾಸ್ತವಾಂಶಗಳನ್ನು ಹೇಳಲು ಬಂದಿದ್ದೇನೆಯೇ ಹೊರತು, ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸಲು ಅಲ್ಲ. ಇಂತಹ ವಿಚಾರಗಳನ್ನು ನಮ್ಮ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಸರ್ವಪಕ್ಷ ಸಭೆ ಕರೆದರೆ ಅಲ್ಲಿ ‌ಚರ್ಚೆ ಮಾಡುತ್ತೇವೆ’ ಎಂದರು.

ರಾಜಕೀಯ ಮಾಡುವ ಸಮಯ ಇದಲ್ಲ. ನಾವು ಕೇಂದ್ರ ಸರ್ಕಾರದ ಜತೆ ನಿಲ್ಲುತ್ತೇವೆ. ದೇಶದ ಏಕತೆ ಹಾಗೂ ಸಮಗ್ರತೆಯ ರಕ್ಷಣೆಗೆ ನಾವು ಒಂದಾಗುತ್ತೇವೆ
ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ

ಕೇಂದ್ರ ಗುಪ್ತಚರ ಇಲಾಖೆಯ ವೈಫಲ್ಯ– ಸಿಎಂ

‘ಉಗ್ರರ ದಾಳಿಯ ಮಾಹಿತಿ ಕೊರತೆಯು ಕೇಂದ್ರದ ಗುಪ್ತಚರ ಇಲಾಖೆಯ ವೈಫಲ್ಯ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು. ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು ‘ಕಾಶ್ಮೀರಕ್ಕೆ ತೆರಳಿರುವ ಕನ್ನಡಿಗರ ರಕ್ಷಣೆ ಹಾಗೂ ಇನ್ನಿತರ ವ್ಯವಸ್ಥೆಗಳಿಗಾಗಿ ಅಧಿಕಾರಿಗಳ ತಂಡವನ್ನು ರವಾನಿಸಲಾಗಿದೆ. ಅಲ್ಲದೇ 40ಕ್ಕೂ ಹೆಚ್ಚು ಕನ್ನಡಿಗರನ್ನು ವಿಶೇಷ ವಿಮಾನದ ಮೂಲಕ ಸುರಕ್ಷಿತವಾಗಿ ಕರೆತರಲು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರನ್ನೂ ಕಾಶ್ಮೀರಕ್ಕೆ ಕಳುಹಿಸಲಾಗಿದೆ’ ಎಂದರು. ‘ಉಗ್ರರ ದಾಳಿ ಪೂರ್ವಯೋಜಿತ ಸಂಚು. ಈ ದಾಳಿ ನಡೆಯುವ ಮಾಹಿತಿ ಮೊದಲೇ ತಿಳಿಯುವಲ್ಲಿ ಕೇಂದ್ರದ ಗುಪ್ತಚರ ಇಲಾಖೆ ವಿಫಲವಾಗಿದೆ. ಈ ಹಿಂದೆ ನಡೆದಿದ್ದ ಪುಲ್ವಾಮಾ ದಾಳಿಯ ವೇಳೆಯೂ ವೈಫಲ್ಯ ಇತ್ತು’ ಎಂದರು. ಕೇಂದ್ರ ಭದ್ರತೆ ಒದಗಿಸಬೇಕು: ‘ಭಯೋತ್ಪಾದಕರನ್ನು ನಿರ್ಮೂಲನೆಗೊಳಿಸುವ ಜೊತೆಗೆ ದೇಶದ ಜನರಿಗೆ ಭದ್ರತೆ ನೀಡುವ ಕಾರ್ಯವನ್ನು ಕೇಂದ್ರ ಸರ್ಕಾರ ಸಮರ್ಥವಾಗಿ ನಿರ್ವಹಿಸಬೇಕು’ ಎಂದೂ ಮುಖ್ಯಮಂತ್ರಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.