ADVERTISEMENT

KIADB: ಒಂದೇ ಜಮೀನಿಗೆ 2 ಬಾರಿ ಪರಿಹಾರ- ₹1.80 ಕೋಟಿ ಮುಟ್ಟುಗೋಲು ಹಾಕಿಕೊಂಡ ಇ.ಡಿ

ಧಾರವಾಡದ ಗಾಮನಗಟ್ಟಿ ಕೈಗಾರಿಕಾ ಪ್ರದೇಶಕ್ಕಾಗಿ ಸ್ವಾಧೀನಪಡಿಸಿಕೊಂಡಿದ್ದ ಜಮೀನಿನ ಕೇಸ್

​ಪ್ರಜಾವಾಣಿ ವಾರ್ತೆ
Published 17 ಜೂನ್ 2025, 20:09 IST
Last Updated 17 ಜೂನ್ 2025, 20:09 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಧಾರವಾಡದ ಗಾಮನಗಟ್ಟಿ ಕೈಗಾರಿಕಾ ಪ್ರದೇಶಕ್ಕಾಗಿ ಸ್ವಾಧೀನಪಡಿಸಿಕೊಂಡಿದ್ದ ಜಮೀನಿಗೆ, ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು (ಕೆಐಎಡಿಬಿ) ಎರಡು ಬಾರಿ ಪರಿಹಾರ ನೀಡಿದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು (ಇ.ಡಿ) ಮಂಗಳವಾರ ₹1.80 ಕೋಟಿ ಮೊತ್ತವನ್ನು ಮುಟ್ಟುಗೋಲು ಹಾಕಿಕೊಂಡಿದೆ.

ಧಾರವಾಡದ ಗಾಮನಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ 2010–12ರ ಅವಧಿಯಲ್ಲಿ ಮಂಡಳಿಯು ಸ್ವಾಧೀನಪಡಿಸಿಕೊಂಡಿದ್ದ ಜಮೀನಿಗೆ 2012ರಲ್ಲೇ ಪರಿಹಾರ ಒದಗಿಸಲಾಗಿತ್ತು. ಆದರೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ, 2021–22ನೇ ಆರ್ಥಿಕ ವರ್ಷದಲ್ಲಿ ಹಲವು ಜಮೀನುಗಳಿಗೆ ಎರಡನೇ ಬಾರಿಗೆ ಒಟ್ಟು ₹19.99 ಕೋಟಿ ಪರಿಹಾರ ನೀಡಲಾಗಿತ್ತು. ಈ ಸಂಬಂಧ ಧಾರವಾಡದ ವಿದ್ಯಾಗಿರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ADVERTISEMENT

ಈ ಸಂಬಂಧ ಹಣ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿಕೊಂಡಿದ್ದ ಇ.ಡಿಯು, ಇದೇ ರೀತಿ ಒಟ್ಟು ₹72 ಕೋಟಿಯಷ್ಟು ಅಕ್ರಮ ಎಸಗಲಾಗಿದೆ ಎಂಬುದನ್ನು ಪತ್ತೆ ಮಾಡಿತ್ತು. ಅಕ್ರಮ ನಡೆದ ಅವಧಿಯಲ್ಲಿ ಕೆಐಎಡಿಬಿ ಧಾರವಾಡ ವಿಶೇಷ ಭೂಸ್ವಾಧೀನಾಧಿಕಾರಿ ಆಗಿದ್ದ, ನಿವೃತ್ತ ಅಧಿಕಾರಿ ವಸಂತಕುಮಾರ್ ದುರ್ಗಪ್ಪ ಸಜ್ಜನ್‌ ಮತ್ತು ಭೂ ದಲ್ಲಾಳಿ ಮೈಬೂಬ್‌ ಅಲ್ಲಾಬಕ್ಷ್‌ ದುಂಡಾಸಿ ಅವರನ್ನು ಬಂಧಿಸಿತ್ತು.

‘ಈ ಎಲ್ಲ ಅಕ್ರಮಗಳು ವಸಂತಕುಮಾರ್ ದುರ್ಗಪ್ಪ ಸಜ್ಜನ್‌ ಅಣತಿಯಂತೆಯೇ ನಡೆದಿದೆ. ಪರಿಹಾರ ಪಡೆದ ನೀಡಿದ ಪ್ರಕರಣಗಳಲ್ಲಿ ಅಕ್ರಮವಾಗಿ ತೆರಿಗೆ ಆದಾಯ ಹಿಂಪಾವತಿ ಪಡೆದಿರುವುದು ಪತ್ತೆಯಾಗಿದೆ’ ಎಂದು ಇ.ಡಿ ಮೂಲಗಳು ತಿಳಿಸಿವೆ.

‘ಕೆಐಎಡಿಬಿ ದಾಖಲೆಗಳಲ್ಲಿ ಇದ್ದ ಇತರರ ಪ್ಯಾನ್‌ ಬಳಸಿಕೊಂಡು, ಅದರ ಆಧಾರದಲ್ಲಿ ಬ್ಯಾಂಕ್‌ ಖಾತೆ ತೆರೆಯಲಾಗಿದೆ. ಪರಿಹಾರದ ಮೊತ್ತವನ್ನು ಆ ಖಾತೆಗೇ ಜಮೆ ಮಾಡಲಾಗಿತ್ತು, ಆದಾಯ ತೆರಿಗೆ ಹಿಂಪಾವತಿಯನ್ನೂ ಆ ಖಾತೆಗಳಿಗೇ ಪಡೆಯಲಾಗಿದೆ. ಆ ಮೊತ್ತದಲ್ಲಿ ಈಗ ₹1.80 ಕೋಟಿಯಷ್ಟನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ’ ಎಂದು ವಿವರಿಸಿವೆ.

ಈ ಪ್ರಕರಣದಲ್ಲಿ ಇ.ಡಿಯು ಈವರೆಗೆ ಒಟ್ಟು ₹12.80 ಕೋಟಿ ಮೊತ್ತದ ವಿವಿಧ ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಂಡಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.