ADVERTISEMENT

ಭೂಸ್ವಾಧೀನ: ಸರ್ಕಾರಕ್ಕೆ ₹150 ಕೋಟಿ ವಂಚನೆ

ಕೆಐಎಡಿಬಿ. ಸರ್ವೆ ಇಲಾಖೆ ಅಧಿಕಾರಿಗಳ ವಿಚಾರಣೆಗೆ ಅನುಮತಿ ಕೋರಿದ ಲೋಕಾಯುಕ್ತ

ಚಂದ್ರಹಾಸ ಹಿರೇಮಳಲಿ
Published 1 ಜುಲೈ 2025, 0:29 IST
Last Updated 1 ಜುಲೈ 2025, 0:29 IST
   

ಬೆಂಗಳೂರು: ಕೈಗಾರಿಕಾ ವಲಯಗಳ ಸ್ಥಾಪನೆಗಾಗಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ರಾಜ್ಯದ ಹಲವೆಡೆ ನಡೆಸಿದ ರೈತರ ಜಮೀನುಗಳ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಭಾರಿ ವಂಚನೆ ಎಸಗಿರುವ ಮಾಹಿತಿಯನ್ನು ಲೋಕಾಯುಕ್ತ ಕಲೆ ಹಾಕಿದೆ.

ಭೂಸ್ವಾಧೀನ ಪ್ರಕ್ರಿಯೆಯಲ್ಲಿ ನಡೆದ ವಂಚನೆಗಳ ಕುರಿತು ಲೋಕಾಯುಕ್ತಕ್ಕೆ ಹಲವು ದೂರುಗಳು ಬಂದಿದ್ದವು.

ಇದರ ಬೆನ್ನಲ್ಲೇ, ಮೊದಲ ಭಾಗವಾಗಿ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ಭಾವನಹಳ್ಳಿ ಕೈಗಾರಿಕಾ ಪ್ರದೇಶಕ್ಕಾಗಿ ಸ್ವಾಧೀನಪಡಿಸಿಕೊಂಡ 722 ಎಕರೆಗೆ ನೀಡಿದ ಪರಿಹಾರ ಮೊತ್ತದ ಪ್ರಾಥಮಿಕ ಮಾಹಿತಿ ಸಂಗ್ರಹಿಸಲಾಗಿದೆ. ಕೆಐಎಡಿಬಿ, ಸರ್ವೆ ಇಲಾಖೆಯ ಅಧಿಕಾರಿಗಳು ಮಧ್ಯವರ್ತಿಗಳು ಹಾಗೂ ಕೆಲ ರೈತರ ಜತೆ ಶಾಮೀಲಾಗಿ ಸರ್ಕಾರದ ಬೊಕ್ಕಸಕ್ಕೆ ₹150 ಕೋಟಿ ನಷ್ಟ ಮಾಡಿದ್ದಾರೆ ಎಂದು ಲೋಕಾಯುಕ್ತ ತನಿಖಾ ತಂಡ ಪತ್ತೆ ಹಚ್ಚಿತ್ತು. ಈ ಕುರಿತು ಸರ್ಕಾರಕ್ಕೆ ಪತ್ರ ಬರೆದಿರುವ ಲೋಕಾಯುಕ್ತ, ಮೂವರು ವಿಶೇಷ ಭೂಸ್ವಾಧೀನಾಧಿಕಾರಿಗಳೂ ಸೇರಿ ಪ್ರಕರಣದಲ್ಲಿ ಭಾಗಿಯಾದ ಅಧಿಕಾರಿಗಳ ವಿಚಾರಣೆಗೆ ಅನುಮತಿ ನೀಡುವಂತೆ ಕೋರಿದೆ.

ADVERTISEMENT

ಭಾವನಹಳ್ಳಿ ಬಳಿ ಕೈಗಾರಿಕಾ ವಸಾಹತು ಅಭಿವೃದ್ಧಿಗಾಗಿ, ಭೂಸ್ವಾಧೀನಪಡಿಸಿಕೊಳ್ಳಲು 2020ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಅಂದು ಹೊರಡಿಸಿದ್ದ ಅಧಿಸೂಚನೆ, 2022ರಲ್ಲಿ ರಾಜ್ಯಪತ್ರದಲ್ಲಿ ಪ್ರಕಟಿಸಿದ ಮಾಹಿತಿಯಂತೆ ಪ್ರತಿ ಎಕರೆ ಖಾಲಿ ಜಮೀನಿಗೆ ₹1.15 ಕೋಟಿ ನಿಗದಿ ಮಾಡಲಾಗಿತ್ತು. ಸ್ವಾಧೀನಪಡಿಸಿಕೊಳ್ಳುವ ಜಮೀನಿನಲ್ಲಿ ಇರುವ ಪ್ರತಿ ಗಿಡ, ಮರಗಳಿಗೆ ಪ್ರತ್ಯೇಕ ದರ (ಮರಮಾಲ್ಕಿ ಪರಿಹಾರ) ನೀಡಲು ಸೂಚಿಸಲಾಗಿತ್ತು. ತೋಟಗಾರಿಕಾ ಇಲಾಖೆ ಅಧಿಕಾರಿಗಳು ಸರ್ವೆ ಇಲಾಖೆ ಜತೆಗೆ ಜಂಟಿ ಸರ್ವೆ ನಡೆಸಿ, ಪ್ರತಿ ಮಾವಿನ ಮರಕ್ಕೆ ₹24,555 ಹಾಗೂ ಹುಣಸೆ ಮರಕ್ಕೆ ₹26,500 ನಿಗದಿಪಡಿಸಿ, ಸ್ವಾಧೀನವಾಗಲಿರುವ ಪ್ರದೇಶದ ತೋಟಗಾರಿಕಾ ಸಸಿ, ಮರಗಳಿಗೆ ತಗುಲುವ ಒಟ್ಟು ವೆಚ್ಚದ ಅಂದಾಜು ಪಟ್ಟಿಯನ್ನು ಕೆಐಎಡಿಬಿಗೆ ಸಲ್ಲಿಸಿತ್ತು.

‘ನಿಯಮದಂತೆ ಜಮೀನಿನ ಮೌಲ್ಯ ಹೊರತುಪಡಿಸಿ ಪ್ರತಿ ಜಮೀನಿನಲ್ಲಿ ಇರುವ ಗಿಡ, ಮರಗಳಿಗೆ ಪರಿಹಾರ ನೀಡುವಾಗ ಆ ಭಾಗದ ವಿಶೇಷ ಭೂಸ್ವಾಧೀನಾಧಿಕಾರಿ ಸ್ಥಳ ಪರಿಶೀಲನೆ ನಡೆಸಬೇಕು. ಅಧಿಸೂಚನೆ ಹೊರಡಿಸುವ ವೇಳೆ ತೋಟಗಾರಿಕಾ ಇಲಾಖೆ ನಡೆಸಿದ ಜಂಟಿ ಸರ್ವೆಯಲ್ಲಿ ಸರ್ವೆ ನಂಬರ್‌ವಾರು ನಮೂದಿಸಿದ ಗಿಡ, ಮರಗಳನ್ನು ವಾಸ್ತವದಲ್ಲಿನ ಸ್ಥಿತಿ ಗತಿಯ ಜತೆ ತಾಳೆ ಹಾಕಬೇಕು. ನಂತರ ಪರಿಹಾರದ ಮೊತ್ತವನ್ನು ಆಯಾ ರೈತರಿಗೆ ಬಿಡುಗಡೆ ಮಾಡಬೇಕು. ಆದರೆ, ಕೆಐಎಡಿಬಿ ಹಾಗೂ ಸರ್ವೆ ಇಲಾಖೆಯ ಅಧಿಕಾರಿಗಳು ಮಧ್ಯವರ್ತಿಗಳು, ಕೆಲ ರೈತರ ಜತೆ ಶಾಮೀಲಾಗಿ ದುಪ್ಪಟ್ಟು ಪರಿಹಾರ ನೀಡಿದ್ದಾರೆ’ ಎಂದು ಲೋಕಾಯುಕ್ತ ರಾಜ್ಯ ಸರ್ಕಾರಕ್ಕೆ ಬರೆದ ಪತ್ರದಲ್ಲಿ ಉಲ್ಲೇಖಿಸಿದೆ. 

ವಂಚನೆ ಪತ್ತೆ ಹೇಗೆ?

ರಾಜ್ಯದ ಯಾವುದೇ ಭಾಗದಲ್ಲಿ ಕೈಗಾರಿಕಾ ಪ್ರದೇಶಕ್ಕಾಗಿ ಭೂಸ್ವಾಧೀನದ ಅಧಿಸೂಚನೆ ಹೊರಡಿಸುವ ಮೊದಲು ಆ ಭಾಗದಲ್ಲಿ ಸರ್ವೆ ನಡೆಸಲಾಗುತ್ತದೆ. ಆಗ ಅಲ್ಲಿನ ಜಮೀನುಗಳ ವಿವರ, ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಮಾಹಿತಿ ಸಂಗ್ರಹಿಸಲಾಗುತ್ತದೆ. ಸ್ಯಾಟಲೈಟ್‌ ಮ್ಯಾಪ್‌, ಆಯಾ ವರ್ಷ ಗ್ರಾಮ ಲೆಕ್ಕಿಗರು ಸಲ್ಲಿಸಿದ ಬೆಳೆ ಸಮೀಕ್ಷಾ ವರದಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳ ವರದಿ, ಆಯಾ ವರ್ಷದ ಪಹಣಿಗಳನ್ನು ಸಂಗ್ರಹಿಸಲಾಗುತ್ತದೆ. ಪ್ರಾಥಮಿಕ ಜಂಟಿ ಸರ್ವೆಯ ನಂತರ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗುತ್ತದೆ. 

ಒಮ್ಮೆ ಅಧಿಸೂಚನೆಯಾದರೆ ನಂತರ ಜಮೀನುಗಳಲ್ಲಿ ನೆಡುವ ಗಿಡ, ಮರಗಳಿಗೆ ಪರಿಹಾರ ಸಿಗುವುದಿಲ್ಲ. ಭಾವನಹಳ್ಳಿ ಪ್ರಕರಣದಲ್ಲಿ ಹೆಚ್ಚಿನ ಪರಿಹಾರ ಪಡೆಯಲು ಸಂಚು ರೂಪಿಸಿದ ಮಧ್ಯವರ್ತಿಗಳು, ಅಧಿಸೂಚನೆಯ ನಂತರ ಆಂಧ್ರಪ್ರದೇಶದ ರಾಜಮಂಡ್ರಿಯಿಂದ ಸಾವಿರಾರು ಸಂಖ್ಯೆಯಲ್ಲಿ ಮಾವು, ಹುಣಸೆ ಮತ್ತಿತರ ತೋಟಗಾರಿಕಾ ಸಸಿಗಳನ್ನು ತರಿಸಿ, ನೆಟ್ಟಿದ್ದಾರೆ. ಪರಿಹಾರ ವಿತರಣೆಗೂ ಮೊದಲು ನಡೆಸುವ ಸಮೀಕ್ಷೆಯಲ್ಲಿ ಅಧಿಕಾರಿಗಳ ಜತೆ ಶಾಮೀಲಾಗಿ ನಿಗದಿಗಿಂತ ₹150 ಕೋಟಿಗೂ ಅಧಿಕ ಮೊತ್ತ ಪಡೆದಿದ್ದಾರೆ. ಅಧಿಸೂಚನೆಯ ಪೂರ್ವದ ಭೂ, ಬೆಳೆ ದಾಖಲೆಗಳಿಂದ ಈ ಅಂಶಗಳು ಸಾಬೀತಾಗಿವೆ ಎಂದು ಲೋಕಾಯುಕ್ತ ಮಾಹಿತಿ ನೀಡಿದೆ. 

ವಂಚನೆಯಲ್ಲೂ ಹಲವು ವಿಧಾನ

ಕೆಐಎಡಿಬಿ ಅಧಿಕಾರಿಗಳು, ಮಧ್ಯವರ್ತಿಗಳು, ಕೆಲ ರೈತರು ಶಾಮೀಲಾಗಿ ಹಲವು ವಿಧದಲ್ಲಿ ವಂಚನೆ ಎಸಗಿದ್ದಾರೆ.

ಮರ–ಗಿಡಗಳು ಇಲ್ಲದ ಖಾಲಿ ಜಮೀನಿನ ಮಾಲೀಕರಿಗೂ ಮರಮಾಲ್ಕಿ ಪರಿಹಾರ ನೀಡಿದ್ದಾರೆ. ಒಂದು ಎಕರೆಯಲ್ಲಿ ಇರಬಹುದಾದ ಗರಿಷ್ಠ ಮಾವು, ಹುಣಸೆ ಮರಗಳ ಮಾರ್ಗಸೂಚಿ (40ರಿಂದ 100 ಮರಗಳು) ಉಲ್ಲಂಘಿಸಿ ದುಪ್ಪಟ್ಟು ಗಿಡ, ಮರಗಳಿಗೆ ಪರಿಹಾರದ ಮೊತ್ತ ಜಮೆ ಮಾಡಿದ್ದಾರೆ.

ಆದರೆ, ಅಧಿಸೂಚನೆಗೂ ಮೊದಲೇ ತೋಟಗಾರಿಕಾ ಬೆಳೆ ಇರುವುದನ್ನು ದೃಢೀಕರಿಸಿದ್ದರೂ ತೋಟಗಾರಿಕಾ ಇಲಾಖೆ ನೀಡಿದ ಸರ್ವೆ ವರದಿಯಲ್ಲಿ ಮರ–ಗಿಡಗಳನ್ನು ನಮೂದಿಸಿದ್ದರೂ ಬಹುತೇಕ ರೈತರಿಗೆ ಕೆಐಎಡಿಬಿ ಮರಮಾಲ್ಕಿ ಪರಿಹಾರ ವಿತರಿಸಿಲ್ಲ ಎನ್ನುವ ಅಂಶಗಳನ್ನು ರೈತರು, ಸರ್ವೆ ನಂಬರ್‌, ಪಹಣಿಗಳ ಸಹಿತ ಪಟ್ಟಿ ಮಾಡಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.