ADVERTISEMENT

ಕೆಐಎಡಿಬಿ: ₹12 ಕೋಟಿ ಅಕ್ರಮ ವರ್ಗಾವಣೆ

13 ವರ್ಷ ಕಳೆದರೂ ಪಿಎನ್‌ಬಿಯಿಂದ ವಸೂಲಾಗದ ‘ನಿಶ್ಚಿತ ಠೇವಣಿ’

​ಪ್ರಜಾವಾಣಿ ವಾರ್ತೆ
Published 16 ಜುಲೈ 2024, 21:58 IST
Last Updated 16 ಜುಲೈ 2024, 21:58 IST
   

ಬೆಂಗಳೂರು: ಹದಿಮೂರು ವರ್ಷಗಳ ಹಿಂದೆ ಒಂದು ವರ್ಷಕ್ಕೆ ಪಂಜಾಬ್‌ ನ್ಯಾಷನಲ್‌ ಬ್ಯಾಂಕಿನಲ್ಲಿ (ಪಿಎನ್‌ಬಿ) ನಿಶ್ಚಿತ ಠೇವಣಿ ಇಟ್ಟಿದ್ದ ತನ್ನ ₹25 ಕೋಟಿಯಲ್ಲಿ, ₹12 ಕೋಟಿಯನ್ನು ಬಡ್ಡಿ ಸಹಿತ ವಾಪಸ್ ಪಡೆಯಲು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಹರಸಾಹಸ ಪಡುತ್ತಿದೆ.

ವಿಧಾನಮಂಡಲದ ಸಾರ್ವಜನಿಕ ಲೆಕ್ಕಪರಿಶೋಧನಾ ಸಮಿತಿಯ (ಪಿಎಸಿ) ಸಭೆಯಲ್ಲಿಯೂ ಈ ವಿಷಯ ಚರ್ಚೆಗೆ ಬಂದಿದ್ದು, ಹಣ ವಾಪಸ್ ಮಾಡುವಂತೆ ಪಿಎನ್‌ಬಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ.

ಅಲ್ಲದೆ, ಪಿಎನ್‌ಬಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅವರಿಗೆ ಪತ್ರ ಬರೆದಿರುವ ಆರ್ಥಿಕ ಇಲಾಖೆಯ ಕಾರ್ಯದರ್ಶಿ, ಪಿಎನ್‌ಬಿ ಅಧ್ಯಕ್ಷರ ಜೊತೆ ಚರ್ಚಿಸಿ ಕೆಐಎಡಿಬಿಗೆ ಬರಬೇಕಾದ ₹12 ಕೋಟಿಯನ್ನು ತಕ್ಷಣ ವಾಪಸ್ ಮಾಡಲು ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದ್ದಾರೆ.

ADVERTISEMENT

ಏನಿದು ಪ್ರಕರಣ?: ಕೆಐಎಡಿಬಿ 2011ರ ಸೆ. 14ರಂದು ₹25 ಕೋಟಿಯನ್ನು ಶೇ 9.75ರ ಬಡ್ಡಿ ದರದಲ್ಲಿ ರಾಜಾಜಿನಗರದ ಪಿಎನ್‌ಬಿ ಶಾಖೆಯಲ್ಲಿ ಒಂದು ವರ್ಷಕ್ಕೆ ನಿಶ್ಚಿತ ಠೇವಣಿ ಇಟ್ಟಿತ್ತು. ಠೇವಣಿ ಅವಧಿ ಪೂರ್ಣಗೊಂಡ ಬಳಿಕ ₹27.52 ಕೋಟಿ 2012ರ ಸೆ. 14ರಂದು ಕೆಐಎಡಿಬಿಗೆ ಮರು ಪಾವತಿಸಲಾಗುವುದು. ತಪ್ಪಿದರೆ, ಪಾವತಿ ಮಾಡುವ ದಿನಗಳಿಗೆ ಶೇ 18ರಂತೆ ಬಡ್ಡಿ ಪಾವತಿಸುವುದಾಗಿ ಬ್ಯಾಂಕಿನ ವ್ಯವಸ್ಥಾಪಕರು ಲಿಖಿತ ಭರವಸೆ ನೀಡಿದ್ದರು.

ಆದರೆ, ಈ ಹಣವನ್ನು ತಮಿಳುನಾಡಿನ ಸೇಲಂನ ಶಂಕರಿ ವೆಸ್ಟ್‌ನಲ್ಲಿ ಶಾಖೆಗೆ ಅಕ್ರಮವಾಗಿ ವರ್ಗಾವಣೆ ಮಾಡಿ, ಅಲ್ಲಿಂದ ₹13 ಕೋಟಿ ಮತ್ತು ₹12 ಕೋಟಿ ಎರಡು ನಿಶ್ಚಿತ ಠೇವಣಿಯ ಸ್ವೀಕೃತಿಗಳನ್ನು ಬ್ಯಾಂಕಿನ ವ್ಯವಸ್ಥಾಪಕರು ಕೆಐಎಡಿಬಿಗೆ ನೀಡಿದ್ದರು. ಒಂದು ಶಾಖೆಯಿಂದ ಮತ್ತೊಂದು ಶಾಖೆಗೆ ಹಣ ವರ್ಗಾವಣೆಯು ಬ್ಯಾಂಕಿನ ಆಂತರಿಗೆ ವಿಚಾರ ಎಂಬ ಕಾರಣಕ್ಕೆ ಕೆಐಎಡಿಬಿ ಯಾವುದೇ ತಗಾದೆ ಮಾಡಿರಲಿಲ್ಲ.

ಠೇವಣಿ ಅವಧಿ ಪೂರ್ಣಗೊಂಡ ಹಣವನ್ನು ಮರುಪಾವತಿಸುವಂತೆ ಕೆಐಎಡಿಬಿ ಅಧಿಕಾರಿಗಳು 2012ರ ಸೆ. 7ರಂದು ರಾಜಾಜಿನಗರ ಶಾಖೆಗೆ ತಿಳಿಸಿದ್ದರು. ಆಗ, ಸೇಲಂನ ಶಂಕರಿ ವೆಸ್ಟ್‌ ಶಾಖೆಯವರು ಸೆ. 17ರಂದು ₹13 ಕೋಟಿ ಮತ್ತು ಅದರ ಬಡ್ಡಿಯನ್ನು ಮರು ಪಾವತಿಸಿದ್ದಾರೆ. ₹12 ಕೋಟಿ ಮರು ಪಾವತಿಯಾಗದ ಕಾರಣ ಸೆ. 21ರಂದು ರಾಜಾಜಿನಗರ ಶಾಖೆಯ ವ್ಯವಸ್ಥಾಪಕರಿಗೆ ಪತ್ರ ಬರೆದಿದ್ದ ಕೆಐಎಡಿಬಿ, ಹಣ ಮರು ಪಾವತಿಸಬೇಕು, ತಪ್ಪಿದರೆ ಬಡ್ಡಿಯನ್ನು ದಂಡ ರೂಪದಲ್ಲಿ ಪಾವತಿಸಬೇಕು ಎಂದೂ ತಿಳಿಸಿತ್ತು.

ಆ ಪತ್ರಕ್ಕೆ ಸೆ. 29ರಂದು ಉತ್ತರಿಸಿದ್ದ ರಾಜಾಜಿನಗರ ಶಾಖೆಯ ವ್ಯವಸ್ಥಾಪಕರು, ₹12 ಕೋಟಿಯನ್ನು ಸೇಲಂನಲ್ಲಿ ಶಂಕರಿ ವೆಸ್ಟ್‌ ಶಾಖೆಗೆ ವರ್ಗಾವಣೆ ಮಾಡಿರುವುದರಿಂದ ಆ ಶಾಖೆಯ ಜೊತೆ ವ್ಯವಹರಿಸುವತೆ ಸಲಹೆ ನೀಡಿದ್ದರು.‌ ಅದಕ್ಕೆ ಒಪ್ಪದ ಕೆಐಎಡಿಬಿ, ರಾಜಾಜಿನಗರ ಶಾಖೆಯ ಹೆಸರಿನಲ್ಲಿ ₹25 ಕೋಟಿಯನ್ನು ಸ್ವೀಕರಿಸಿರುವುದರಿಂದ, ಅವರೇ ₹12 ಕೋಟಿ ಮತ್ತು ಬಡ್ಡಿ ಮರು ಪಾವತಿಸಬೇಕು ಎಂದು ಒತ್ತಾಯಿಸುತ್ತಲೇ ಬಂದಿದೆ.

ಕೆಐಎಡಿಬಿ ಪತ್ರಕ್ಕೆ ಉತ್ತರಿಸಿದ್ದ ರಾಜಾಜಿನಗರ ಶಾಖೆಯ ವ್ಯವಸ್ಥಾಪಕರು, ಶಂಕರಿ ವೆಸ್ಟ್ ಶಾಖೆಯು ಶೇ 9.75 ಬಡ್ಡಿಯ ಭರವಸೆ ನೀಡಿದ್ದರಿಂದ ಮಂಡಳಿಯ ಸೂಚನೆಯಂತೆ ಹಣವನ್ನು ಆ ಶಾಖೆಗೆ ವರ್ಗಾವಣೆ ಮಾಡಲಾಗಿದೆ ಎಂದೂ ಹೇಳಿದ್ದರು.

ಈ ಪ್ರಕರಣದ ತನಿಖೆಯನ್ನು ಪಿಎನ್‌ಬಿಯವರು ಸಿಬಿಐಗೆ ವಹಿಸಿದ್ದು, 2013ರಲ್ಲಿಯೇ ಸಿಬಿಐ ತನಿಖಾ ವರದಿಯನ್ನು ಕೆಐಎಡಿಬಿಗೆ ಕಳುಹಿಸಿದೆ. ₹12 ಕೋಟಿ ಮತ್ತು ಬಡ್ಡಿ ಮೊತ್ತದ ವಸೂಲಿಗೆ ಸಿಟಿ ಸಿವಿಲ್‌ ನ್ಯಾಯಾಲಯದಲ್ಲಿ ವಸೂಲಿ ದಾವೆ ದಾಖಲಿಸಿದ ಕೆಐಎಡಿಬಿಯು, ಹಣ ಮರಳಿ ಪಡೆಯಲು ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಪ್ರಕರಣ ಇನ್ನೂ ವಿಲೇವಾರಿ ಆಗಿಲ್ಲ.

‘ಹಣ ನಿರ್ವಹಣೆಯಲ್ಲಿ ಲೋಪ’

ಕೆಐಎಡಿಬಿಯ ಹಣ ನಿರ್ವಹಣೆ ಲೋಪದ ಕಾರಣದಿಂದ ನಿಶ್ಚಿತ ಠೇವಣಿಯ ಅವಧಿ ಮುಗಿದ ನಂತರವೂ ಹಣ ನಗದೀಕರಿಸಲು ಸಾಧ್ಯವಾಗಿಲ್ಲ ಎಂದು ಲೆಕ್ಕ ಪರಿಶೋಧನೆಯಲ್ಲಿ ಗೊತ್ತಾಗಿದೆ. ಬ್ಯಾಂಕಿನವರು ವಾರ್ಷಿಕ ಶೇ 9.60 ಬಡ್ಡಿ ನೀಡುವುದಾಗಿ ಹೇಳಿದರೂ ಶೇ 9.75 ಬಡ್ಡಿ ದರದ ನಿರೀಕ್ಷೆಯಲ್ಲಿ ₹25 ಕೋಟಿಯನ್ನು ರಾಜಾಜಿನಗರ ಶಾಖೆಯಲ್ಲಿ ಕೆಐಎಡಿಬಿ ಇಟ್ಟಿತ್ತು. ಆದರೆ, ನಿರೀಕ್ಷೆಗೆ ಪೂರಕವಾಗಿ ಬ್ಯಾಂಕ್‌ ಬದ್ಧತೆ ನೀಡಿರಲಿಲ್ಲ. ನಿಶ್ಚಿತ ಠೇವಣಿಯ ಅವಧಿ ಪೂರ್ಣಗೊಂಡ ಬಳಿಕ, ಹಣ ಪಾವತಿಸದೇ ಇದ್ದರೆ ವಾರ್ಷಿಕ ಶೇ 18ರಂತೆ ಬಡ್ಡಿ ದರ ನೀಡುವುದಾಗಿ ಯಾವುದೇ ಬ್ಯಾಂಕ್‌ ವಾಗ್ದಾನ ನೀಡುವುದಿಲ್ಲ. ಹೀಗಾಗಿ, ‘ಅಷ್ಟು ಬಡ್ಡಿ ನೀಡುತ್ತೇವೆ’ ಎಂದಿರುವುದೇ ಸಂದೇಹ ಮೂಡಿಸುವಂತಿದೆ. ಅಲ್ಲದೆ, ಇನ್ನೊಂದು ಬ್ಯಾಂಕಿನ ನಿಶ್ಚಿತ ಠೇವಣಿ ಸ್ವೀಕೃತಿಯನ್ನು ಕೆಐಎಡಿಬಿ ಒಪ್ಪಿಕೊಂಡಿರುವುದು ಯಾಕೆ ಎನ್ನುವುದಕ್ಕೆ ಯಾವುದೇ ಸ್ಪಷ್ಟತೆ ಇಲ್ಲ ಎಂದೂ ಲೆಕ್ಕ ಪರಿಶೋಧನಾ ವರದಿಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.