ADVERTISEMENT

ಸಂಪುಟದಿಂದ ರಾಜಣ್ಣ ವಜಾ: ಹೈಕಮಾಂಡ್ ಕೆಂಗಣ್ಣಿಗೆ ಬಿದ್ದರೇ?

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 0:11 IST
Last Updated 12 ಆಗಸ್ಟ್ 2025, 0:11 IST
<div class="paragraphs"><p>&nbsp;ಕೆ.ಎನ್. ರಾಜಣ್ಣ</p></div>

 ಕೆ.ಎನ್. ರಾಜಣ್ಣ

   

-ಪ್ರಜಾವಾಣಿ ಚಿತ್ರ

ಕೆ.ಎನ್‌. ರಾಜಣ್ಣ ಅವರು ಸಚಿವ ಸ್ಥಾನಕ್ಕೆ ದಿಢೀರ್ ‘ರಾಜೀನಾಮೆ’ ನೀಡಿದ್ದಾರೆಂಬ ಸುದ್ದಿಯ ಹಿಂದಿನ ಕಾರಣಗಳು ಚರ್ಚೆಗೆ ಗ್ರಾಸವಾಗಿದೆ.

ADVERTISEMENT

ಲೋಕಸಭೆ ಚುನಾವಣೆಯಲ್ಲಿ ಮತ ಕಳ್ಳತನ ನಡೆದಿದೆ ಆರೋಪಕ್ಕೆ ಸಂಬಂಧಿಸಿದಂತೆ ರಾಜಣ್ಣ ಹೇಳಿಕೆ ಕಾಂಗ್ರೆಸ್‌ ವರಿಷ್ಠರನ್ನು ಕಂಗೆಡಿಸಿತ್ತು ಎನ್ನಲಾಗಿದೆ. 

ಸೋಮವಾರ ಬೆಳಿಗ್ಗೆ 11ರ ಸುಮಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರೆ ಮಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌, ‘ರಾಜಣ್ಣ ಅವರಿಂದ ರಾಜೀನಾಮೆ ಪಡೆಯುವಂತೆ ರಾಹುಲ್‌ ಸೂಚಿಸಿದ್ದಾರೆ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್‌ ಗಾಂಧಿ ಚರ್ಚಿಸಿ ಈ ತೀರ್ಮಾನ ತೆಗೆದುಕೊಂಡಿದ್ದಾರೆ’ ಎಂದಿದ್ದಾರೆ. ಅದಕ್ಕೆ ಸಿದ್ದರಾಮಯ್ಯ, ‘ಆಯಿತು’ ಎಂದಿದ್ದಾರೆ.

ಕೆಲಹೊತ್ತಿನ ಬಳಿಕ ಕೆ.ಸಿ ವೇಣುಗೋಪಾಲ್‌ ಅವರಿಗೆ ಕರೆ ಮಾಡಿದ ಸಿದ್ದರಾಮಯ್ಯ, ‘ಅಧಿವೇಶನ ನಡೆಯುತ್ತಿದೆ. ಈಗ ರಾಜೀನಾಮೆ ಪಡೆದರೆ ವಿರೋಧ ಪಕ್ಷಗಳು ಮುಗಿಬೀಳಲಿವೆ. ಅಧಿವೇಶನ ಮುಗಿದ ಬಳಿಕ ರಾಜಣ್ಣ ಜೊತೆ ಮಾತನಾಡಿ, ರಾಜೀನಾಮೆ ತೆಗೆದುಕೊಳ್ಳುತ್ತೇನೆ’ ಎಂದಿದ್ದಾರೆ. ಅದಕ್ಕೆ ವೇಣುಗೋಪಾಲ್‌, ‘ಇದು ಪಕ್ಷದ ತೀರ್ಮಾನ. ರಾಹುಲ್‌ ತೀರ್ಮಾನ’ ಎಂದಿದ್ದಾರೆ. ಅಲ್ಲದೆ, ರಾಹುಲ್‌ ಜೊತೆ ಮಾತನಾಡುವಂತೆ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದ್ದಾರೆ ಎಂದು ಗೊತ್ತಾಗಿದೆ.

ರಾಹುಲ್‌ ಗಾಂಧಿಗೆ ಕರೆ ಮಾಡಿದ ಸಿದ್ದರಾಮಯ್ಯ, ಅಧಿವೇಶನ ಮುಗಿದ ಬಳಿಕ ರಾಜಣ್ಣ ಅವರಿಂದ ರಾಜೀನಾಮೆ ಪಡೆಯುವುದಾಗಿ ಹೇಳಿದ್ದಾರೆ. ಅದಕ್ಕೆ ರಾಹುಲ್‌, ‘ರಾಜೀನಾಮೆ ಪಡೆಯುವುದಲ್ಲ, ಸಂಪುಟದಿಂದ ವಜಾ ಮಾಡಬೇಕು. ಸಚಿವರಾದವರು ಹೀಗೆ ಮಾತನಾಡುವುದು ಎಷ್ಟು ಸರಿ? ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೇ ಈ ರೀತಿ ಮಾತನಾಡುತ್ತಿದ್ದಾರೆ’ ಎಂದು ರಾಜಣ್ಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು ಎಂದು ಗೊತ್ತಾಗಿದೆ.

ಈ ಬೆಳವಣಿಗೆಯ ಬೆನ್ನಲ್ಲೆ, ಸಚಿವರಾದ ಸತೀಶ ಜಾರಕಿಹೊಳಿ ಮತ್ತು ಜಿ. ಪರಮೇಶ್ವರ ಜೊತೆ ಸಿದ್ದರಾಮಯ್ಯ ಚರ್ಚೆ ನಡೆಸಿದ್ದಾರೆ. ಆ ಬಳಿಕ, ರಾಜ್ಯಪಾಲರಿಗೆ ಪತ್ರ ಬರೆದು ಸಂಪುಟದಿಂದ ರಾಜಣ್ಣ ಅವರನ್ನು ಕೈಬಿಡುವ ತೀರ್ಮಾನದ ಮಾಹಿತಿಯನ್ನು ತಿಳಿಸಿದ್ದಾರೆ.

ಸುರ್ಜೇವಾಲಾಗೆ ದೂರು: 

ಮತ ಕಳ್ಳತನ ವಿರುದ್ಧ ರಾಹುಲ್‌ ಗಾಂಧಿ ಸೇರಿದಂತೆ ಪಕ್ಷದ ಎಲ್ಲ ನಾಯಕರು ಧ್ವನಿ ಎತ್ತಿರುವಾಗ, ಸಚಿವರಾದ ರಾಜಣ್ಣ ಅದನ್ನು ಪ್ರಶ್ನಿಸಿರುವುದು ಎಷ್ಟು ಸರಿ ಎಂದು ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿಯು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ ದೂರು ಕೂಡಾ ಸಲ್ಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.