ADVERTISEMENT

ಕೋಗಿಲು ಒತ್ತುವರಿ ತೆರವು | ಸಿಎಂ ಸಭೆ ಇಂದು: ಸಚಿವ ಜಮೀರ್‌ ಅಹಮದ್‌ ಖಾನ್‌

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 23:30 IST
Last Updated 28 ಡಿಸೆಂಬರ್ 2025, 23:30 IST
ಕೋಗಿಲು ಗ್ರಾಮಕ್ಕೆ ಭೇಟಿ ನೀಡಿದ್ದ ಜಮೀರ್ ಅಹಮದ್‌ ಖಾನ್ ಅವರು ಸ್ಥಳೀಯರೊಂದಿಗೆ ಮಾತುಕತೆ ನಡೆಸಿದರು
ಕೋಗಿಲು ಗ್ರಾಮಕ್ಕೆ ಭೇಟಿ ನೀಡಿದ್ದ ಜಮೀರ್ ಅಹಮದ್‌ ಖಾನ್ ಅವರು ಸ್ಥಳೀಯರೊಂದಿಗೆ ಮಾತುಕತೆ ನಡೆಸಿದರು   

ಬೆಂಗಳೂರು: ‘ಕೋಗಿಲು ಗ್ರಾಮದಲ್ಲಿ ನಡೆಸಲಾದ ಒತ್ತುವರಿ ತೆರವು ಕಾರ್ಯದಲ್ಲಿ ಮನೆ ಕಳೆದುಕೊಂಡವರಿಗೆ ಪರಿಹಾರ ಕಲ್ಪಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು  ಸೋಮವಾರ ಬೆಳಿಗ್ಗೆ ಸಭೆ ಕರೆದಿದ್ದು, ಎಲ್ಲರಿಗೂ ಒಳ್ಳೆಯದಾಗುವ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆ ಇದೆ’ ಎಂದು ವಸತಿ ಸಚಿವ ಜಮೀರ್‌ ಅಹಮದ್‌ ಖಾನ್‌ ಹೇಳಿದರು.

ತೆರವು ಕಾರ್ಯಾಚರಣೆ ನಡೆದ ಪ್ರದೇಶದಲ್ಲೇ ಟೆಂಟ್‌ಗಳನ್ನು ನಿರ್ಮಿಸಿಕೊಂಡಿರುವವರನ್ನು ಭಾನುವಾರ ಭೇಟಿ ಮಾಡಿದ ಜಮೀರ್‌ ಅಹಮದ್‌, ಅವರ ಜತೆ ಮಾತುಕತೆ ನಡೆಸಿದರು. ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಜತೆಗಿದ್ದರು.

‘ಇಲ್ಲಿನ ನಿವಾಸಿಗಳಿಗೆ ಈಗಾಗಲೇ ಹಲವು ಬಾರಿ ನೋಟಿಸ್‌ ನೀಡಲಾಗಿತ್ತು. ತೆರವು ಕಾರ್ಯಾಚರಣೆ ವೇಳೆ ಇಲ್ಲಿನ ಎಲ್ಲ ನಿವಾಸಿಗಳಿಗೂ ಸುತ್ತಮುತ್ತಲ ಪ್ರದೇಶದಲ್ಲಿರುವ ಐದು ಕಲ್ಯಾಣ ಮಂಟಪಗಳಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ವಸತಿ ಮತ್ತು ಊಟದ ವ್ಯವಸ್ಥೆ ಮಾಡಿದ್ದರು. ಆದರೆ ನಿವಾಸಿಗಳ್ಯಾರೂ ಅಲ್ಲಿಗೆ ಹೋಗಿಲ್ಲ. ಈ ವಿಚಾರದಲ್ಲಿ ಕೇರಳ ರಾಜಕಾರಣಿಗಳು ಮಾಡುತ್ತಿರುವ ಆರೋಪದಲ್ಲಿ ಹುರುಳಿಲ್ಲ’ ಎಂದು ಜಮೀರ್‌ ಹೇಳಿದರು.

ADVERTISEMENT

‘ಈ ಜನರಿಗೆ ಶಾಶ್ವತವಾಗಿ ಮನೆ ಕಟ್ಟಿಕೊಡಲು ನಾಲ್ಕು ಎಕರೆ ಮಂಜೂರು ಮಾಡುವ ಬಗ್ಗೆ ಕಂದಾಯ ಸಚಿವರು ಕ್ರಮ ತೆಗೆದುಕೊಂಡಿದ್ದರು. ಅದಕ್ಕೆ ನಿವಾಸಿಗಳು ಒಪ್ಪಿಕೊಳ್ಳಲಿಲ್ಲ. ಈ ಎಲ್ಲ ಅಂಶಗಳನ್ನು ಗಮನದಲ್ಲಿ ಇರಿಸಿಕೊಂಡು, ಮುಖ್ಯಮಂತ್ರಿ ಅವರ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ’ ಎಂದರು.

‘ಕೇರಳದಲ್ಲಿ ಇನ್ನೇನು ಚುನಾವಣೆ ಬರಲಿದೆ. ಅದಕ್ಕಾಗಿಯೇ ಅಲ್ಲಿನ ಸಚಿವರು, ಶಾಸಕರು, ಸಂಸದರು ಇಲ್ಲಿಗೆ ಬರುತ್ತಿದ್ದಾರೆ. ಕೇರಳದಲ್ಲಿ ಪ್ರವಾಹದಲ್ಲಿ ಜನರು ನಿರ್ಗತಿಕರಾದಾಗ ಕರ್ನಾಟಕ ಸರ್ಕಾರದಿಂದ ನೂರು ಮನೆ ನಿರ್ಮಿಸಿಕೊಟ್ಟಿದ್ದೇವೆ. ಕೇರಳ ಮುಖ್ಯಮಂತ್ರಿಗೆ ಕಾಳಜಿ ಇದ್ದರೆ, ಇಲ್ಲಿ ಅವರು ಮನೆ ನಿರ್ಮಿಸಿಕೊಡಲಿ ಅಥವಾ ಆರ್ಥಿಕ ನೆರವು ನೀಡಲಿ. ಸುಮ್ಮನೆ ಇಲ್ಲಿಗೆ ಬಂದು ಹೋದರೆ ಉಪಯೋಗವಿಲ್ಲ’ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸರ್ಕಾರದ ಕ್ರಮ ಸಮರ್ಥಿಸಿಕೊಂಡು ಕೇರಳ ಮುಖ್ಯಮಂತ್ರಿಗೆ ಉತ್ತರ ನೀಡಿರುವ ನೀವು ಎಐಸಿಸಿಯ ನಿಮ್ಮ ಬಾಸ್‌ ವೇಣುಗೋಪಾಲ್ ಅವರಿಗೆ ಅದೇ ಧಾಟಿಯಲ್ಲಿ ಉತ್ತರ ನೀಡುವ ಧೈರ್ಯ ಇದೆಯಾ?
ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
ಕಾನೂನು ಪ್ರಕಾರ ಕ್ರಮ: ಡಿಕೆಶಿ
‘ಕೋಗಿಲು ಗ್ರಾಮದಲ್ಲಿ ಸ್ಥಳೀಯ ವ್ಯಕ್ತಿಯೊಬ್ಬ ಹಣ ಪಡೆದುಕೊಂಡು ಗುಡಿಸಲು ನಿರ್ಮಿಸಿಕೊಳ್ಳಲು ಬಿಟ್ಟಿದ್ದಾನೆ. ಈ ಬಗ್ಗೆ ವರದಿ ತರಿಸಿಕೊಂಡಿದ್ದೇನೆ. ಇಲ್ಲಿ ಎಲ್ಲ ಸಮುದಾಯದವರೂ ಇದ್ದು ಕಾನೂನು ಪ್ರಕಾರವೇ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು ‘ಕೆ.ಸಿ.ವೇಣುಗೋಪಾಲ್‌ ಅವರು ನಮ್ಮ ಪಕ್ಷದ ಪ್ರಧಾನ ಕಾರ್ಯದರ್ಶಿ. ಅವರು ನಮಗೆ ಸಲಹೆ ನೀಡಬಾರದೆ? ಬಿಜೆಪಿ ರಾಷ್ಟ್ರೀಯ ನಾಯಕರು ನೀಡುವ ಸಲಹೆಯನ್ನು ರಾಜ್ಯ ನಾಯಕರು ಕೇಳುವುದಿಲ್ಲವೇ’ ಎಂದು ಅವರು ಪ್ರಶ್ನಿಸಿದರು.
ಬುಲ್ಡೋಜರ್ ನೀತಿ: ಶಾಸಕ ಜಲೀಲ್
‘ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಅವರ ಸರ್ಕಾರದ ಬುಲ್ಡೋಜರ್‌ ನೀತಿಯನ್ನು ಕರ್ನಾಟಕ ಸರ್ಕಾರ ಅನುಸರಿಸುತ್ತಿದೆ’ ಎಂದು ಕೇರಳ ಆಡಳಿತಾರೂಢ ಎಲ್‌ಡಿಎಫ್‌ ಶಾಸಕ ಕೆ.ಟಿ.ಜಲೀಲ್‌ ಆಪಾದಿಸಿದರು. ಭಾನುವಾರ ಕೋಗಿಲು ಗ್ರಾಮಕ್ಕೆ ಭೇಟಿ ನೀಡಿ ನಿರಾಶ್ರಿತರ ಜತೆ ಮಾತುಕತೆ ನಡೆಸಿದ ಅವರು ಸುದ್ದಿಗಾರರ ಜತೆ ಮಾತನಾಡಿದರು. ರಾಜ್ಯಸಭೆಯ ಎಲ್‌ಡಿಎಫ್‌ ಸದಸ್ಯ ಎ.ಎ.ರಹೀಂ ಅವರು ಶನಿವಾರ ಇಲ್ಲಿಗೆ ಭೇಟಿ ನೀಡಿ ನಿರಾಶ್ರಿತರ ಜತೆ ಚರ್ಚೆ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.