ADVERTISEMENT

ಬಿಜೆಪಿ ಅಭ್ಯರ್ಥಿಯಿಂದ ಪೊಲೀಸರಿಗೆ ಧಮಕಿ: ವಿಡಿಯೊ ವೈರಲ್‌

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2019, 20:03 IST
Last Updated 9 ಏಪ್ರಿಲ್ 2019, 20:03 IST
ಕೆಜಿಎಫ್‌ ಬೆಮಲ್‌ ನಗರದಲ್ಲಿ ಮಂಗಳವಾರ ಬೆಮಲ್‌ ರೈಲ್ವೆ ಕೋಚ್‌ನ ಗುತ್ತಿಗೆ ನೌಕರರು ತಟ್ಟೆ ಹಿಡಿದು ಪ್ರತಿಭಟನೆ ನಡೆಸಿದರು.
ಕೆಜಿಎಫ್‌ ಬೆಮಲ್‌ ನಗರದಲ್ಲಿ ಮಂಗಳವಾರ ಬೆಮಲ್‌ ರೈಲ್ವೆ ಕೋಚ್‌ನ ಗುತ್ತಿಗೆ ನೌಕರರು ತಟ್ಟೆ ಹಿಡಿದು ಪ್ರತಿಭಟನೆ ನಡೆಸಿದರು.   

ಕೆಜಿಎಫ್‌:ಅನುಮತಿ ಪಡೆದು ಮುಷ್ಕರ ನಡೆಸುವಂತೆಬೆಮಲ್‌ ಗುತ್ತಿಗೆ ನೌಕರರಿಗೆ ತಾಕೀತು ಮಾಡಿದ ಪೊಲೀಸರ ಮೇಲೆ ಬಿಜೆಪಿ ಅಭ್ಯರ್ಥಿ ಎಸ್‌.ಮುನಿಸ್ವಾಮಿ ಧಮಕಿ ಹಾಕಿದ ವಿಡಿಯೊ ವೈರಲ್ ಆಗಿದೆ.

ಬೆಮಲ್‌ ರೈಲ್ವೆ ಕೋಚ್‌ ಗುತ್ತಿಗೆ ನೌಕರರು ಮಂಗಳವಾರ ಬೆಳಿಗ್ಗೆ 6.30ರ ಸಮಯದಲ್ಲಿ ಆಡಳಿತ ಮಂಡಳಿಯ ಧೋರಣೆ ವಿರುದ್ಧ ತಟ್ಟೆ ಹಿಡಿದುಕೊಂಡು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಬೆಮಲ್‌ ಪೊಲೀಸ್ ಠಾಣೆಯ ಸಿಬ್ಬಂದಿಯೊಬ್ಬರು ಮುಷ್ಕರ ನಡೆಸುವುದಿದ್ದರೆ ಅನುಮತಿ ಪಡೆದು ಮುಷ್ಕರ ನಡೆಸಬೇಕು ಎಂದು ಸೂಚಿಸಿದರು. ಮುಷ್ಕರದಿಂದಾಗಿ ರಸ್ತೆ ಸಂಚಾರಕ್ಕೆ ಅಡ್ಡಿಯಾಗಬಾರದು ಎಂದು ಎಚ್ಚರಿಸಿದರು.

ADVERTISEMENT

ಸ್ವಲ್ಪ ಸಮಯದಲ್ಲಿಯೇ ಮತ ಯಾಚನೆ ಮಾಡಲು ಕಾರ್ಖಾನೆ ಬಳಿಗೆ ಬಂದ ಬಿಜೆಪಿ ಅಭ್ಯರ್ಥಿ ಎಸ್‌.ಮುನಿಸ್ವಾಮಿ ಮತ್ತು ಮಾಜಿ ಶಾಸಕ ವೈ.ಸಂಪಂಗಿ ಅವರನ್ನು ಮುಷ್ಕರ ನಿರತ ಗುತ್ತಿಗೆ ನೌಕರರು ಭೇಟಿಯಾಗಿ ನ್ಯಾಯ ದೊರಕಿಸಿಕೊಡುವಂತೆ ಕೋರಿದರು.

ಈ ಸಂದರ್ಭದಲ್ಲಿ ನೌಕರರನ್ನು ಉದ್ದೇಶಿಸಿ ಮಾತನಾಡಿದ ಮುನಿಸ್ವಾಮಿ, ‘ಪೊಲೀಸ್ ಅಧಿಕಾರಿ ಗಾಡಿಯಲ್ಲಿ ಇದ್ದುಕೊಂಡು ಮಾತನಾಡುತ್ತಿದ್ದಾನೆ. ಕ್ಯಾಂಡಿಡೇಟ್ ಆಗದೆ ಇದ್ದಿದ್ದರೆ ಎರಡು ಬಿಡುತ್ತಿದ್ದೆ’ ಎಂದು ಹೇಳಿರುವುದು ವಿಡಿಯೊದಲ್ಲಿ ದಾಖಲಾಗಿದೆ. ಈ ಸಂದರ್ಭದಲ್ಲಿ ಪಕ್ಕದಲ್ಲಿಯೇ ಇದ್ದ ಮಾಜಿ ಶಾಸಕ ವೈ.ಸಂಪಂಗಿ ಮೌನವಾಗಿದ್ದರು.

‘ಪೊಲೀಸರ ಬಗ್ಗೆ ಅಭ್ಯರ್ಥಿ ಮಾತನಾಡಿರುವ ವಿಡಿಯೊ ಲಭ್ಯವಾಗಿದೆ. ಆದರೆ ವಿಡಿಯೊದ ಪೂರ್ಣ ಪ್ರತಿ ಬೇಕಾಗುತ್ತದೆ. ವಿಡಿಯೊದಲ್ಲಿ ಸ್ವಲ್ಪ ಭಾಗ ಮಾತ್ರ ಇದೆ. ಅದರಲ್ಲಿ ಅಭ್ಯರ್ಥಿ ಪೊಲೀಸರ ಬಗ್ಗೆ ಮಾತನಾಡಿರುವುದು ಕಂಡು ಬಂದಿದೆ. ಆದರೆ ಪೂರ್ಣ ಪ್ರತಿ ನೋಡದೆ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ವಿಡಿಯೊ ಚಿತ್ರೀಕರಿಸಿದ ವ್ಯಕ್ತಿಗೆ ಮೂಲ ವಿಡಿಯೊ ತಂದುಕೊಡುವಂತೆ ತಿಳಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‌ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.