ADVERTISEMENT

‘ಆಪರೇಷನ್‌ ಕಮಲ’ ತಡೆಯಲು ಸುಳ್ಳು ಹೇಳಿಕೆ ನೀಡಿದ್ದೆ: ಶ್ರೀನಿವಾಸಗೌಡ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2019, 4:57 IST
Last Updated 22 ಮಾರ್ಚ್ 2019, 4:57 IST
ಶ್ರೀನಿವಾಸಗೌಡ
ಶ್ರೀನಿವಾಸಗೌಡ   

ಬೆಂಗಳೂರು: ‘ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸಲು ಬಿಜೆಪಿ ನಾಯಕರು ನನಗೆ ₹ 5 ಕೋಟಿ ಮುಂಗಡ ನೀಡಿರಲಿಲ್ಲ. ಆಪರೇಷನ್‌ ಕಮಲ ಪ್ರಯತ್ನವನ್ನು ವಿಫಲಗೊಳಿಸಲು ಸುಳ್ಳು ಹೇಳಿದೆ’ ಎಂದು ಕೋಲಾರದ ಶ್ರೀನಿವಾಸಗೌಡ ಉಲ್ಟಾ ಹೊಡೆದಿದ್ದಾರೆ.

‘ನಾನು ಜೆಡಿಎಸ್‌ನ ನಿಷ್ಠಾವಂತ ಕಾರ್ಯಕರ್ತ. ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರವನ್ನು ಬೀಳಿಸುವುದನ್ನು ತಡೆಯುವ ಉದ್ದೇಶದಿಂದ ಮಾಧ್ಯಮಗಳ ಮುಂದೆ ಸುಳ್ಳು ಹೇಳಿದೆ’ ಎಂದು ಶ್ರೀನಿವಾಸಗೌಡ ಎಸಿಬಿ ಅಧಿಕಾರಿಗಳಿಗೆ ಗುರುವಾರ ತಿಳಿಸಿದ್ದಾರೆ.

ತಮ್ಮ ಪುತ್ರನ ಜೊತೆ ಎಸಿಬಿ ಕಚೇರಿಗೆ ಬಂದಿದ್ದ ಕೋಲಾರದ ಶಾಸಕ ಒಂದೂವರೆ ಗಂಟೆ ತನಿಖಾಧಿಕಾರಿಗಳ ಮುಂದೆ ಇದ್ದರು. ‘ಬಿಜೆಪಿ ನಾಯಕರು ನಮ್ಮ ಶಾಸಕರಿಗೆ ಆಮಿಷವೊಡ್ಡುತ್ತಿದ್ದರು. ನನ್ನ ಸ್ಥಾನಕ್ಕೆ ರಾಜೀನಾಮೆ ಕೊಡಿಸಲು ₹ 25 ಕೋಟಿ ಆಮಿಷವೊಡ್ಡಿ, ₹ 5 ಕೋಟಿ ಮುಂಗಡ ನೀಡಿದ್ದರು ಎಂದು ಸುಳ್ಳು ಹೇಳಿದ್ದರಿಂದ ಸರ್ಕಾರ ಉಳಿಯಿತು’ ಎಂದರು.

ADVERTISEMENT

ಆರೋಪವೇನು?: ‘ಶಾಸಕ ಸ್ಥಾನಕ್ಕೆ ನನ್ನಿಂದ ರಾಜೀನಾಮೆ ಕೊಡಿಸಲು ಬಿಜೆಪಿ ಶಾಸಕರಾದ ಅಶ್ವತ್ಥ ನಾರಾಯಣ, ಎಸ್‌.ಆರ್‌. ವಿಶ್ವನಾಥ, ಮಾಜಿ ಶಾಸಕ ಸಿ.ಪಿ.ಯೋಗೀಶ್ವರ ಅವರು ₹5 ಕೋಟಿ ಮುಂಗಡ ನೀಡಿದ್ದರು’ ಎಂದು ಶ್ರೀನಿವಾಸಗೌಡ ಆರೋಪಿಸಿದ್ದರು.

‘ಮನೆಯಲ್ಲಿದ್ದ ಈ ಹಣವನ್ನು ಎರಡು ತಿಂಗಳ ಬಳಿಕ ಹಿಂತಿರುಗಿಸಿದ್ದೆ’ ಎಂದಿದ್ದರು. ಈ ಹೇಳಿಕೆ ಆಧರಿಸಿ ಸಾಮಾಜಿಕ ಕಾರ್ಯಕರ್ತರಾದ ಹನುಮೇಗೌಡ, ಪ್ರಶಾಂತ್‌, ‘ಭ್ರಷ್ಟಾಚಾರ ಮುಕ್ತ ಕರ್ನಾಟಕ ವೇದಿಕೆ’ ಅಧ್ಯಕ್ಷ ರವಿಕೃಷ್ಣರೆಡ್ಡಿ ಎಸಿಬಿಗೆ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.