ADVERTISEMENT

ಚನ್ನಮ್ಮ ವಿವಿ ಜೆಎನ್‌ಯು ಆಗುತ್ತಿದೆ: ಕೋಟ ಶ್ರೀನಿವಾಸ ಪೂಜಾರಿ ಆರೋಪ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2018, 18:44 IST
Last Updated 6 ಅಕ್ಟೋಬರ್ 2018, 18:44 IST
ಕೋಟಾ ಶ್ರೀನಿವಾಸ್ ಪೂಜಾರಿ
ಕೋಟಾ ಶ್ರೀನಿವಾಸ್ ಪೂಜಾರಿ   

ಬೆಂಗಳೂರು: ‘ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಕಾಂಗ್ರೆಸ್ ಪಕ್ಷದವರು ಗೂಂಡಾಗಿರಿ ನಡೆಸಿದ್ದಾರೆ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಆರೋಪಿಸಿದರು.

ವಿಧಾನಸೌಧದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಗೃಹ ಸಚಿವ ಪರಮೇಶರ್ ಕೂಡಲೇ ಸ್ಪಷ್ಟನೆ ನೀಡಬೇಕು’ ಎಂದು ಆಗ್ರಹಿಸಿದರು.

‘ಸಂಸದ ಹಾಗೂ ಬಿಜೆಪಿಯ ಹಿರಿಯ ಮುಖಂಡ ಬಿ.ಎಸ್. ಯಡಿಯೂರಪ್ಪನವರ ಮನೆಯ ಮುಂದೆಯೇ ಕಾಂಗ್ರೆಸ್ ಗೂಂಡಾಗಿರಿ ಮಾಡುವ ಮಟ್ಟಕ್ಕೆ ಬಂದಿದೆ’ ಎಂದು ಅವರು ಕಿಡಿಕಾರಿದರು.

ADVERTISEMENT

ವಿ.ವಿಯಲ್ಲಿ ಆತಂಕ: ‘ಕಾಂಗ್ರೆಸ್ ಗೂಂಡಾಗಿರಿಯಿಂದ ಚೆನ್ನಮ್ಮ ವಿ.ವಿಯಲ್ಲಿ ಆತಂಕ ಮನೆ ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ಕೊಟ್ಟರೂ ಪೊಲೀಸರುಈವರೆಗೂ ಒಬ್ಬರನ್ನೂ ಬಂಧಿಸಿಲ್ಲ. ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಆಕ್ಷೇಪಿಸಿದರು.

ತರಾಟೆ: ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಅವರನ್ನು ತರಾಟೆಗೆ ತೆಗೆದುಕೊಂಡ ಪೂಜಾರಿ, ‘ನಿಮಗೆ ಜವಾಬ್ದಾರಿ ಇಲ್ಲವಾ, ನಿಮ್ಮ ಶಾಸಕರು ಗೂಂಡಾಗಳಿರಬಹುದು, ಆದರೆ ಕಾನೂನಿಗೆ ಬೆಲೆಯೇ ಇಲ್ಲವೇನು’ ಎಂದು ಪ್ರಶ್ನಿಸಿದರು.

ವಿ.ವಿಯಲ್ಲಿ ಪೀಠೋಪಕರಣ ಹಾಳು ಮಾಡಲಾಗಿದೆ. ಹಲ್ಲೆ ನಡೆದಿದೆ. ಇದಕ್ಕೆ ಮುಖ್ಯಮಂತ್ರಿ ಉತ್ತರ ನೀಡಬೇಕು ಎಂದೂ ಅವರು ಆಗ್ರಹಿಸಿದರು.

‘ಗೂಂಡಾಗಿರಿಯನ್ನು ಸಮರ್ಥನೆ ಮಾಡಿಕೊಳ್ತಿರೊ ಅಥವಾ ಆರೋಪಿಗಳನ್ನು ಬಂಧಿಸುತ್ತೀರೋ ಹೇಗೆ’ ಎಂದರು.

ರೈತರಿಗೆ ಕಿರುಕುಳ: ಸಾಲಮನ್ನಾ ಮಾಡಲು ದಾಖಲೆಗಳನ್ನು ಕೊಡಿ ಎಂದು ಸರ್ಕಾರ ರೈತರಿಗೆ ಕಿರುಕುಳ ನೀಡುತ್ತಿದೆ ಎಂದು ಪೂಜಾರಿ ಆರೋಪಿಸಿದರು. ರೈತರು ದಾಖಲೆಗಳ ಸಂಗ್ರಹಕ್ಕಾಗಿ ಪರದಾಡುತ್ತಿದ್ದಾರೆ. ಸಾಲ ಮನ್ನಾಕ್ಕೆ ಸರ್ಕಾರ 12 ಷರತ್ತು ಹಾಕಿ ಕಿರುಕುಳ ಕೊಡುತ್ತಿದೆ ಎಂದರು.

ಸಾಲ ಮನ್ನಾಕ್ಕೆ ಯಾವುದೇ ಷರತ್ತು ವಿಧಿಸದೆ ಸರ್ಕಾರ, ತಕ್ಷಣ ಷರತ್ತುಗಳ ನಾಟಕ ನಿಲ್ಲಿಸಬೇಕು ಎಂದರು. ‘ಇದುವರೆಗೂ ಸಾಲ ಮನ್ನಾದ ಪ್ರಯೋಜನ ಒಬ್ಬನೇ ಒಬ್ಬ ರೈತನಿಗೆ ಸಿಕ್ಕಿಲ್ಲ’ ಎಂದರು.

ಋಣಮುಕ್ತ ಪತ್ರ ನೀಡಿ: ‘ಚುನಾವಣೆಯನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಜೆಡಿಎಸ್ ಈ ಸಾಲಮನ್ನಾ ಘೋಷಣೆ ಮಾಡಿದೆ’ ಎಂದ ಅವರು, ‘ರೈತರಿಗೆ ತಕ್ಷಣವೇ ಋಣಮುಕ್ತ ಪತ್ರ ನೀಡಬೇಕು’ ಎಂದು ಒತ್ತಾಯಿಸಿದರು.

ವೆಚ್ಚ ಲೆಕ್ಕ ಕೊಡಲಿ: ಈ ಸರ್ಕಾರ ಸೂಕ್ಷ್ಮತೆ ಇಲ್ಲದ ದಪ್ಪ ಚರ್ಮದ ಸರ್ಕಾರ ಎಂದು ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಇದೇ ವೇಳೆ ಟೀಕಿಸಿದರು.

‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಮುಚ್ಚಲು ಹೈಕೋರ್ಟ್ ಛೀಮಾರಿ ಹಾಕಿದ ನಂತರವೇ ಬಿಬಿಎಂಪಿ ಎಚ್ಚೆತ್ತುಕೊಂಡಿದೆ’ ಎಂದರು.

‘ರಸ್ತೆ ಗುಂಡಿ ಮುಚ್ವಲು ಬಿಬಿಎಂಪಿಗೆ ಬದ್ಧತೆಯಿಲ್ಲ. ಒಂದು ರಸ್ತೆ ಗುಂಡಿ ಮುಚ್ಚಲು ₹ 3 ಲಕ್ಷ ವೆಚ್ಚ ಮಾಡುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಇವರೇನು ಚಿನ್ನ-ಬೆಳ್ಳಿಯಿಂದ ರಸ್ತೆ ಗುಂಡಿ ಮುಚ್ಚಲು ಮುಂದಾಗಿದ್ದಾರೆಯೇ, ಒಂದು ರಸ್ತೆ ಗುಂಡಿ ಮುಚ್ಚಲು ₹ 3 ಲಕ್ಷ ಬೇಕಾ’ ಎಂದು ಪ್ರಶ್ನಿಸಿದರು. ಈ ಬಗ್ಗೆ ಸರ್ಕಾರ ಮತ್ತು ಬಿಬಿಎಂಪಿ ಜನರಿಗೆ ಸೂಕ್ತ ಲೆಕ್ಕ ಕೊಡಬೇಕು ಎಂದು ಒತ್ತಾಯಿಸಿದರು.

ಜೆಡಿಎಸ್ ಅಧ್ಯಕ್ಷ ಎಚ್.ಡಿ ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಸಚಿವ ಎಚ್.ಡಿ‌.ರೇವಣ್ಣ ಮೂವರೂ ದೆಹಲಿಗೆ ಹೋಗಿ ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದಾರೆ. ಇವರು ಮೂವರೇ ಹೋದರೆ ಅದು ಇದು ಸಮ್ಮಿಶ್ರ ಸರ್ಕಾರದ ನಿಯೋಗವೇ, ಇದೊಂದು ಫ್ಯಾಮಿಲಿ ನಿಯೋಗ'ಎಂದು ರವಿ ವ್ಯಂಗ್ಯವಾಡಿದರು.

‘ನಿಯೋಗದಲ್ಲಿ ಪರಮೇಶ್ವರ, ಸಚಿವ ಡಿ.ಕೆ.ಶಿವಕುಮಾರ್ ಅವರನ್ನೂ ಕರೆದುಕೊಂಡು ಹೋಗಬೇಕಿತ್ತು. ಯಾಕೆ ಯಾರನ್ನೂ ಕರೆದುಕೊಂಡು ಹೋಗದೇ ಅಪ್ಪ ಮಕ್ಕಳು ಮಾತ್ರ ಹೋಗಿದ್ದಾರೆ' ಎಂದರು.

ವರ್ಗಾವಣೆ ದಂಧೆ: ಸಚಿವ ರೇವಣ್ಣ ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ‘ಎಷ್ಟು ಅಧಿಕಾರಿಗಳನ್ನ ವರ್ಗಾವಣೆ ಮಾಡಿದ್ದಾರೆ ಎಂಬ ಬಗ್ಗೆ ಶ್ವೇತಪತ್ರ ಹೊರಡಿಸಲಿ’ ಎಂದು ಒತ್ತಾಯಿಸಿದರು.

ಪಾಪರ್ ಸರ್ಕಾರ
ರಾಜ್ಯದಲ್ಲಿ 12 ಸಾವಿರ ಶಿಕ್ಷಕರಿಗೆ ಐದು ತಿಂಗಳಿನಿಂದ ವೇತನ ಪಾವತಿಯಾಗಿಲ್ಲ ಎಂದ ರವಿ, ‘ಪೌರ ಕಾರ್ಮಿಕರೂ ಸಂಬಳ ಇಲ್ಲದೆ ಪರದಾಡುತ್ತಿದ್ದಾರೆ ಎಂದರು. ಹಾಲು ಉತ್ಪಾದಕರಿಗೂ ಬಾಕಿ ಉಳಿಸಲಾಗಿದೆ. ಇದೊಂದು ಪಾಪರ್ ಆಗಿರುವ ಅಪ್ಪ ಮಕ್ಕಳ ಸರ್ಕಾರ’ ಎಂದು ಕುಟುಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.