ADVERTISEMENT

ಕೆ.ಪಿ.ಅಗ್ರಹಾರದಲ್ಲಿ ತೃತೀಯ ಲಿಂಗಿ ಸಂಶಯಾಸ್ಪದ ಸಾವು

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2020, 9:55 IST
Last Updated 2 ಮಾರ್ಚ್ 2020, 9:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೆ.ಪಿ. ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ತೃತೀಯ ಲಿಂಗಿಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

‘ಮೃತರನ್ನು ಗೌತಮ್ ಅಲಿಯಾಸ್ ರಮ್ಯಾ ಎಂದು ಗುರುತಿಸಲಾಗಿದೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಂತರವೇ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ’ ಎಂದು ಕೆ.ಪಿ. ಅಗ್ರಹಾರ ಠಾಣೆಯ ಪೊಲೀಸರು ಹೇಳಿದರು.

‘ಟೆಂಟ್ ರಸ್ತೆ ಸಮೀಪದ ಮನೆಯೊಂದರಲ್ಲಿ ಒಂಟಿಯಾಗಿ ನೆಲೆಸಿದ್ದ ಗೌತಮ್, ಎಂಟು ತಿಂಗಳ ಹಿಂದಷ್ಟೇ ತೃತೀಯ ಲಿಂಗಿ ರಮ್ಯಾ ಆಗಿ ಬದಲಾಗಿದ್ದರು. ಅವರ ಸಂಬಂಧಿಕರ ಬಗ್ಗೆಯೂ ಸದ್ಯಕ್ಕೆ ಮಾಹಿತಿ ಗೊತ್ತಾಗಿಲ್ಲ’ ಎಂದರು.

ADVERTISEMENT

‘ಶನಿವಾರ ಮನೆಯಿಂದ ದುರ್ವಾಸನೆ ಬರುತ್ತಿತ್ತು. ಅನುಮಾನಗೊಂಡ ಸ್ಥಳೀಯರು ಠಾಣೆಗೆ ಮಾಹಿತಿ ನೀಡಿದ್ದರು. ಸಿಬ್ಬಂದಿ ಮನೆಗೆ ಹೋಗಿ ನೋಡಿದಾಗಲೇ ವಿಷಯ ಗೊತ್ತಾಗಿದೆ. ಎರಡು ದಿನಗಳ ಹಿಂದೆಯೇ ಅವರು ಮೃತಪಟ್ಟಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ’ ಎಂದು ಪೊಲೀಸರು ಹೇಳಿದರು.

ಪ್ರೀತಿ, ಹಣದ ಆಯಾಮದಲ್ಲಿ ತನಿಖೆ: ‘ಹೆಣ್ಣಾಗಿ ಪರಿವರ್ತನೆಗೊಂಡಿದ್ದ ರಮ್ಯಾ, ಪರಿಚಯಸ್ಥ ಯುವಕನೊಬ್ಬನ ಜೊತೆ ಒಡನಾಟವಿಟ್ಟುಕೊಂಡಿದ್ದರು. ಅವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದರೆಂಬ ಮಾಹಿತಿ ಇದೆ. ಜೊತೆಗೆ, ಹಣಕ್ಕಾಗಿ ಯಾರಾದರೂ ಅವರನ್ನು ಕೊಲೆ ಮಾಡಿರುವ ಸಂಶಯವೂ ಇದೆ. ಎರಡು ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.