ADVERTISEMENT

ಎರಡನೇ ದಿನವೂ ‘100 ನಾಟ್ ಔಟ್’ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2021, 21:44 IST
Last Updated 12 ಜೂನ್ 2021, 21:44 IST
ಪೆಟ್ರೋಲ್‌, ಡೀಸೆಲ್‌ ಬೆಲೆ ಹೆಚ್ಚಾಗಿರುವುದನ್ನು ಖಂಡಿಸಿ ನೆಲಮಂಗಲದ ಕಾಂಗ್ರೆಸ್‌ ಸಮಿತಿ ಸದಸ್ಯರು ದ್ವಿಚಕ್ರವಾಹನಕ್ಕೆ ಹಗ್ಗ ಕಟ್ಟಿ ಎಳೆದು ಪ್ರತಿಭಟಿಸಿದರು. ಮಾಜಿ ಸಚಿವ ಆಂಜನಮೂರ್ತಿ, ಮುಖಂಡರಾದ ನಾಗರತ್ನ, ರುಕ್ಮಿಣಿ, ದೀಪಕ್‌ಕಿರಣ್‌, ಉಮೇಶ್‌ಗೌಡ, ಗಂಗಾಧರ್‌ರಾವ್‌, ಕೆಂಪೇಗೌಡ, ವಜ್ರಘಟ್ಟ ನಾಗರಾಜು ಇದ್ದಾರೆ
ಪೆಟ್ರೋಲ್‌, ಡೀಸೆಲ್‌ ಬೆಲೆ ಹೆಚ್ಚಾಗಿರುವುದನ್ನು ಖಂಡಿಸಿ ನೆಲಮಂಗಲದ ಕಾಂಗ್ರೆಸ್‌ ಸಮಿತಿ ಸದಸ್ಯರು ದ್ವಿಚಕ್ರವಾಹನಕ್ಕೆ ಹಗ್ಗ ಕಟ್ಟಿ ಎಳೆದು ಪ್ರತಿಭಟಿಸಿದರು. ಮಾಜಿ ಸಚಿವ ಆಂಜನಮೂರ್ತಿ, ಮುಖಂಡರಾದ ನಾಗರತ್ನ, ರುಕ್ಮಿಣಿ, ದೀಪಕ್‌ಕಿರಣ್‌, ಉಮೇಶ್‌ಗೌಡ, ಗಂಗಾಧರ್‌ರಾವ್‌, ಕೆಂಪೇಗೌಡ, ವಜ್ರಘಟ್ಟ ನಾಗರಾಜು ಇದ್ದಾರೆ   

ಬೆಂಗಳೂರು: ಪೆಟ್ರೋಲ್, ಡೀಸೆಲ್ ದರ ಏರಿಕೆ‌ ಖಂಡಿಸಿ ಕೆಪಿಸಿಸಿ ಹಮ್ಮಿಕೊಂಡಿರುವ ‘100 ನಾಟ್ ಔಟ್’ ಆಂದೋಲನದ ಭಾಗವಾಗಿ ರಾಜ್ಯದಾದ್ಯಂತ ತಾಲ್ಲೂಕು ಕೇಂದ್ರಗಳಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.

ಕೆಪಿಸಿಸಿ ಐದು ದಿನ ಈ ಆಂದೋಲನ ಹಮ್ಮಿಕೊಂಡಿದ್ದು, ಶುಕ್ರವಾರ (ಜೂನ್‌ 11) ರಾಜ್ಯ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆದಿತ್ತು. ಭಾನುವಾರ (ಜೂನ್‌ 13) ಹೋಬಳಿ ಹಾಗೂ ಜಿಲ್ಲಾ ಪಂಚಾಯಿತಿ ಕೇಂದ್ರಗಳಲ್ಲಿ, ಜೂನ್‌ 14ರಂದು ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ, ಜೂನ್ 15ರಂದು ಉಳಿದ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಯಲಿದೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕು ಕೇಂದ್ರದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ‘ಸರ್ಕಾರದ ಬೊಕ್ಕಸ ತುಂಬಿದರೆ ಸಾಕೇ. ಬಡವರು, ಜನಸಾಮಾನ್ಯರು ಜೀವನ ನಡೆಸುವುದು ಹೇಗೆ. ಅವರ ಪರಿಸ್ಥಿತಿ ಏನಾಗಬೇಕು’ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದರು.

ADVERTISEMENT

‘ಪೆಟ್ರೋಲ್ ಡೀಸೆಲ್ ಬೆಲೆ ಇಷ್ಟು ಬಾರಿ ಹೆಚ್ಚಳ ಮಾಡಿದ್ದೀರಲ್ಲ. ರೈತರ ಬೆಂಬಲ ಬೆಲೆ ಎಷ್ಟು ಬಾರಿ ಹೆಚ್ಚಿಸಿದ್ದೀರಿ. ದಿನಗೂಲಿ, ಖಾಸಗಿ ಕಾರ್ಮಿಕರು, ನೌಕರರು, ನರೇಗಾ ಕಾರ್ಮಿಕರ ವೇತನ ಎಷ್ಟು ಬಾರಿ ಹೆಚ್ಚಿಸಿದ್ದೀರಿ? ಎಂದೂ ವಾಗ್ದಾಳಿ ನಡೆಸಿದರು.

‘ಈ ಪ್ರತಿಭಟನೆ ಕಾಂಗ್ರೆಸ್ ಕಾರ್ಯಕ್ರಮ ಅಲ್ಲ. ಇದು ಜನತಾದಳ, ಬಿಜೆಪಿ ಹಾಗೂ ಎಲ್ಲ ಜನರ ಕಾರ್ಯಕ್ರಮ. ಬಿಜೆಪಿಯವರು ಈ ಹಿಂದೆ ಇದೇ ಕೆಲಸ ಮಾಡಿದ್ದರಲ್ಲ. ಅವರು ಪ್ರತಿಭಟನೆ ಮಾಡಿದ್ದನ್ನು ನಾವು ಈಗ ಮುಂದುವರಿಸುತ್ತಿದ್ದೇವೆ. ಅವರು ಪೆಟ್ರೋಲ್ ಬೆಲೆ ₹ 52 ತಲುಪಿದಾಗ ದೊಡ್ಡ ಹೋರಾಟ ಮಾಡಿದ್ದರು. ಈಗ ₹ 100 ಆಗಿದೆ’ ಎಂದರು. ಶಾಸಕ ರಘುಮೂರ್ತಿ, ಮಾಜಿ ಸಚಿವರಾದ ಸುಧಾಕರ್, ಆಂಜನೇಯ, ಮಾಜಿ ಸಂಸದ ಚಂದ್ರಪ್ಪ ಪ್ರತಿಭಟನೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.