ಕಾಂಗ್ರೆಸ್
ಬೆಂಗಳೂರು: ಒಂದು ಅಥವಾ ಒಂದಕ್ಕಿಂತ ಹೆಚ್ಚು ಅವಧಿಯಿಂದ ಜಿಲ್ಲಾ ಕಾಂಗ್ರೆಸ್ ಘಟಕದ (ಡಿಸಿಸಿ) ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವವರನ್ನು ಬದಲಿಸುವಂತೆ ಎಐಸಿಸಿ ನೀಡಿದ್ದ ಸೂಚನೆ ಪಾಲಿಸಲು ಕೆಪಿಸಿಸಿ ಮುಂದಾಗಿದೆ.
ಒಟ್ಟು 25 ಡಿಸಿಸಿ ಘಟಕಗಳಿಗೆ ಹೊಸ ಅಧ್ಯಕ್ಷರನ್ನು ನೇಮಿಸಲು ತಲಾ ಎರಡು ಅಥವಾ ಮೂರು ಹೆಸರುಗಳನ್ನು ಶಿಫಾರಸು ಮಾಡಲು ಪಕ್ಷದ ತಲಾ ಮೂವರು ಹಿರಿಯ ನಾಯಕರನ್ನು ಒಳಗೊಂಡ ವೀಕ್ಷಕರ ತಂಡವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರಚಿಸಿದ್ದಾರೆ.
ನೇಮಕಗೊಂಡಿರುವ ವೀಕ್ಷಕರಿಗೆ ಈ ಕುರಿತಂತೆ ಪತ್ರ ಬರೆದಿರುವ ಡಿ.ಕೆ. ಶಿವಕುಮಾರ್, ‘ಸಂಬಂಧಪಟ್ಟ ಉಸ್ತುವಾರಿ ಕೆಪಿಸಿಸಿ ಕಾರ್ಯಾಧ್ಯಕ್ಷರು, ಎಐಸಿಸಿ ಕಾರ್ಯದರ್ಶಿಗಳು (ಉಸ್ತುವಾರಿ ಹಾಗೂ ಸ್ಥಳೀಯರು), ಡಿಸಿಸಿ ಅಧ್ಯಕ್ಷರು, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಕೆಪಿಸಿಸಿ ಪದಾಧಿಕಾರಿಗಳು, ಮುಂಚೂಣಿ ಘಟಕಗಳ ಅಧ್ಯಕ್ಷರು ಹೀಗೆ ಸ್ಥಳೀಯ ಪ್ರಮುಖರ ಸಭೆ ಕರೆದು ಜಿಲ್ಲೆಯಲ್ಲಿರುವ ಪಕ್ಷ ಸಂಘಟನೆಯ ಸ್ಥಿತಿಗತಿಯನ್ನು ಪರಿಶೀಲಿಸಿ ಜಿಲ್ಲಾ ಘಟಕದ ಅಧ್ಯಕ್ಷರ ನೇಮಕಕ್ಕೆ ಒಮ್ಮತದ ವ್ಯಕ್ತಿಯ ಹೆಸರು ಶಿಫಾರಸು ಮಾಡಲು ಚರ್ಚೆ ನಡೆಸಬೇಕು’ ಎಂದು ಸೂಚನೆ ನೀಡಿದ್ದಾರೆ.
‘ಅಧ್ಯಕ್ಷ ಸ್ಥಾನಕ್ಕೆ ಶಿಫಾರಸು ಮಾಡುವ ವ್ಯಕ್ತಿಯು ಜಿಲ್ಲಾಮಟ್ಟದಲ್ಲಿ ಪಕ್ಷದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರಬೇಕು. ಅಲ್ಲದೆ, ಸಂಘಟನಾ ಸಾಮರ್ಥ್ಯ ಹೊಂದಿರಬೇಕು. ಪಕ್ಷದಲ್ಲಿ ಹಿರಿತನ, ಪ್ರಾಮಾಣಿಕತೆ, ಪಕ್ಷ ನಿಷ್ಠೆ ಇವುಗಳನ್ನು ಮಾನದಂಡವಾಗಿ ಪರಿಗಣಿಸಿ, ಅಂತಹ ವ್ಯಕ್ತಿಗಳ ಹೆಸರನ್ನು ಮಾತ್ರ ಆದ್ಯತೆಯ ಮೇರೆಗೆ ಪಟ್ಟಿ ಮಾಡಿ ಮುಚ್ಚಿದ ಲಕೋಟೆಯಲ್ಲಿ ಗೌಪ್ಯವಾಗಿ ಸಲ್ಲಿಸಬೇಕು’ ಎಂದೂ ಶಿವಕುಮಾರ್ ತಿಳಿಸಿದ್ದಾರೆ.
ಹಾಲಿ– ಮಾಜಿ ಸಂಸದರು, ಹಾಲಿ– ಮಾಜಿ ವಿಧಾನ ಪರಿಷತ್ ಸದಸ್ಯರು, ಮಾಜಿ ಸಚಿವರು, ಎಐಸಿಸಿ ಕಾರ್ಯದರ್ಶಿಗಳು, ಕೆಪಿಸಿಸಿ ಪದಾಧಿಕಾರಿಗಳನ್ನು ವೀಕ್ಷಕರನ್ನಾಗಿ ನೇಮಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.