
ನವದೆಹಲಿ: ‘ನಾನು ಪಕ್ಷದ ಶಿಸ್ತಿನ ಸಿಪಾಯಿ. ಯಾವತ್ತೂ ಕಾಂಗ್ರೆಸ್ ಪಕ್ಷಕ್ಕೆ ಬ್ಲಾಕ್‌ಮೇಲ್ ಮಾಡುವವನಲ್ಲ. ನಾನು ಹಗಲು ರಾತ್ರಿ ದುಡಿದು ಪಕ್ಷ ಕಟ್ಟಿದ್ದೇನೆ. ಮುಂದೆಯೂ ಕಟ್ಟುತ್ತೇನೆ‘ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾನುವಾರ ಇಲ್ಲಿ ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸುದ್ದಿ ಹರಿದಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನನ್ನ ಮಾನಸಿಕ, ದೈಹಿಕ ಹಾಗೂ ರಾಜಕೀಯ ಆರೋಗ್ಯ ಸರಿಯಾಗಿದೆ. ನಾನು ಖರ್ಗೆ ಸಾಹೇಬರನ್ನು ಭೇಟಿ ಮಾಡಿದ್ದೇನೆ. ಡಿಸೆಂಬರ್ ತಿಂಗಳ ಒಳಗಾಗಿ ನೂರು ಕಾಂಗ್ರೆಸ್ ಕಚೇರಿಗಳಿಗೆ ಶಂಕುಸ್ಥಾಪನೆ ಮಾಡಲೇಬೇಕಾಗಿದೆ. ‘ಗಾಂಧಿ ಭಾರತ‘ ಎಂಬ ಪುಸ್ತಕ ರಚಿಸಿದ್ದೇನೆ. ಇದರ ಬಿಡುಗಡೆಗೆ ದಿನಾಂಕ ನಿಗದಿ ಮಾಡಬೇಕಾಗಿದೆ. ಸದ್ಯದಲ್ಲೇ ಸಂಸತ್ ಅಧಿವೇಶನ ಆರಂಭವಾಗಲಿದೆ. ಕಾಂಗ್ರೆಸ್ ಸಂಸ್ಥಾಪನಾ ದಿನ ಆಚರಣೆ ಮಾಡಬೇಕು. ಇವೆಲ್ಲವನ್ನು ಯಾರು ಮಾಡಬೇಕು? ನಾನೇ ಮಾಡಬೇಕು. ನಾನೇಕೆ ರಾಜೀನಾಮೆ ನೀಡಲಿ. ಈಗ ಅಂತಹ ಸಂದರ್ಭವಿಲ್ಲ‘ ಎಂದು ಸ್ಪಷ್ಟಪಡಿಸಿದರು.
‘ಕಾಂಗ್ರೆಸ್ ಪಕ್ಷ ಎಲ್ಲಿಯವರೆಗೂ ಈ ಸ್ಥಾನದಲ್ಲಿ ಕೆಲಸ ಮಾಡಲು ಹೇಳುತ್ತಾರೋ ಅಲ್ಲಿಯವರೆಗೆ ನಾನು ಪಕ್ಷದ ಶಿಸ್ತಿನ ಸಿಪಾಯಿಯಂತೆ ಕೆಲಸ ಮಾಡಿಕೊಂಡು ಹೋಗುತ್ತೇನೆ. ಮುಂದೆಯೂ ಪಕ್ಷ ಅಧಿಕಾರಕ್ಕೆ ಬರುವಂತೆ ದುಡಿಯುವವನು ನಾನು‘ ಎಂದು ಅವರು ಪುನರುಚ್ಚರಿಸಿದರು.
ಸಚಿವ ಸಂಪುಟ ಪುನರ್ ರಚನೆ ಬಗ್ಗೆ ಚರ್ಚೆಯಾಗುತ್ತಿದೆ. ಖರ್ಗೆ ಅವರ ಭೇಟಿ ವೇಳೆ ಈ ಬಗ್ಗೆ ಚರ್ಚೆ ಮಾಡಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಅದೆಲ್ಲಾ ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ. ಅವರು ಹೈಕಮಾಂಡ್ ಬಳಿ ಚರ್ಚೆ ಮಾಡುತ್ತಾರೆ. ನನ್ನನ್ನು ಕರೆದರೆ ನಾನು ಹೋಗುತ್ತೇನೆ. ನನ್ನ ಅಭಿಪ್ರಾಯ ತಿಳಿಸುತ್ತೇನೆ‘ ಎಂದರು.
‘ನಾನು ಕೇವಲ ಪಕ್ಷದ ಕಚೇರಿಗಳ ಶಂಕುಸ್ಥಾಪನೆಗೆ ದಿನಾಂಕ ನಿಗದಿ ಮಾಡಲು ಹೋಗಿರುವೆ. ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಒಟ್ಟಾಗಿ ಶಂಕುಸ್ಥಾಪನೆ ಮಾಡಬೇಕು ಎಂಬುದು ನನ್ನ ಆಸೆ. ಡಿ. 1 ರಿಂದ ಸಂಸತ್ ಅಧಿವೇಶನ ಆರಂಭವಾಗಲಿದ್ದು, ಅಷ್ಟರೊಳಗೆ, ಯಾವುದಾದರೂ ವಾರಾಂತ್ಯದಲ್ಲಿ ಬಂದು ಹೋಗಿ ಎಂದು ಮನವಿ ಮಾಡಿದ್ದೇನೆ‘ ಎಂದು ತಿಳಿಸಿದರು.
‘ಕಾಂಗ್ರೆಸ್ ಕಚೇರಿ ನಿರ್ಮಾಣದ ಕಟ್ಟಡ ನಕ್ಷೆ ಅನುಮೋದನೆಗೆ ನಾನು ₹2.30 ಕೋಟಿ ಪಾವತಿಸುತ್ತಿದ್ದೇನೆ. ಸಚಿವ ರಾಮಲಿಂಗಾರೆಡ್ಡಿ ಮುಂದಾಳತ್ವದಲ್ಲಿ ಒಂದು ಕಚೇರಿ ನಿರ್ಮಿಸಲಾಗುತ್ತಿದೆ. 75-80 ಕಡೆ ಕಚೇರಿ ನಿರ್ಮಾಣಕ್ಕೆ ಜಾಗ ಕೂಡ ಸಿದ್ಧವಾಗಿವೆ. ನೂರು ಕಚೇರಿ ನಿರ್ಮಾಣ ಕಾರ್ಯ ಮಾಡುತ್ತೇವೆ‘ ಎಂದು ತಿಳಿಸಿದರು.
ನಾಯಕತ್ವ ಬದಲಾವಣೆ ಇಲ್ಲ: ಪರಮೇಶ್ವರ
ಬೆಂಗಳೂರು:‘ಸಂಪುಟ ಪುನರ್‌ರಚನೆಗೆ ಹೈಕಮಾಂಡ್ ಒಪ್ಪಿಗೆ ನೀಡಿದರೆ ನಾಯಕತ್ವ ಬದಲಾವಣೆ ಆಗುವುದಿಲ್ಲ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು, ‘ಮುಖ್ಯಮಂತ್ರಿ ಮತ್ತು ಹೈಕಮಾಂಡ್ಗೆ ಎಲ್ಲಾ ವಿಚಾರ ಗೊತ್ತಿದೆ. ಸಂಪುಟ ಪುನರ್‌ರಚನೆಗೆ ಅನುಮತಿ ಸಿಕ್ಕಿದೆಯೆಂದು ಮಾಧ್ಯಮಗಳಲ್ಲಿ ನೋಡಿದ್ದೇನೆ. ಸಂಪುಟ ಪುನರ್ ರಚನೆಯಾದರೆ ಒಳ್ಳೆಯದೇ’ ಎಂದರು.
‘ಸಚಿವರಾಗಬೇಕೆಂಬ ಅಪೇಕ್ಷೆ ಹಲವು ಶಾಸಕರಿಗಿದೆ. ಸಂಪುಟ ಪುನರ್‌ರಚನೆಗೆ ಅನು ಮತಿ ಕೊಟ್ಟಿದ್ದರೆ, ಮುಖ್ಯಮಂತ್ರಿ ಬದಲಾವಣೆ ವಿಚಾರವನ್ನು ನೀವೇ (ಮಾಧ್ಯಮಗಳು) ಊಹೆ ಮಾಡಿಕೊಳ್ಳಿ’ ಎಂದರು.
‘ಹೈಕಮಾಂಡ್ ತೀರ್ಮಾನಕ್ಕೆ ಕಾಯೋಣ’
‘ಸಂಪುಟ ಪುನರ್ ರಚನೆ, ಅಧಿಕಾರ ಹಂಚಿಕೆ ಎಲ್ಲವನ್ನು ತೀರ್ಮಾನಿಸುವುದು ಹೈಕಮಾಂಡ್. ಹೈಕಮಾಂಡ್ ತೀರ್ಮಾನಕ್ಕೆ ಕಾಯೋಣ’ ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ತಿಳಿಸಿದರು.
ಸಂಪುಟ ಪುನರ್‌ರಚನೆಗೆ ಹೈಕಮಾಂಡ್ ಒಪ್ಪಿಗೆ ನೀಡಿದೆಯೆಂಬ ವರದಿಗಳ ಕುರಿತಂತೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಈ ಬಗ್ಗೆ ಮಾಧ್ಯಮಗಳಲ್ಲಿ ನೋಡಿದ್ದೇನೆ. ಇದು ಮುಖ್ಯಮಂತ್ರಿ ಹಾಗೂ ಹೈಕಮಾಂಡ್ ನಾಯಕರಿಗೆ ಬಿಟ್ಟ ವಿಚಾರ’ ಎಂದರು.
‘ಹೈಕಮಾಂಡ್‌ನ ತೀರ್ಮಾನ, ಸಲಹೆಯನ್ನು ಡಿ.ಕೆ. ಶಿವಕುಮಾರ್ ಮಾತ್ರವಲ್ಲ, ಎಲ್ಲರೂ ಕೇಳುತ್ತಾರೆ. ಅದರಲ್ಲಿ ಯಾವುದೇ ಅನುಮಾನ ಬೇಡ. ಅಧ್ಯಕ್ಷ ಸ್ಥಾನದಲ್ಲೇ ಮುಂದುವರಿಯಬೇಕೆಂಬ ಆಸೆ ಶಿವಕುಮಾರ್ ಅವರಿಗಿಲ್ಲ. ಪಕ್ಷ ಹೇಳಿದಷ್ಟು ದಿನ ಅವರು ಅಧ್ಯಕ್ಷ ಸ್ಥಾನದಲ್ಲಿ ಇರುತ್ತಾರೆ’ ಎಂದರು.
‘ಸಂಪುಟ ಪುನರ್‌ರಚನೆಯಾದರೆ ನಾಯಕತ್ವ ಬದಲಾವಣೆ ಆಗುವುದಿಲ್ಲ ಎಂಬ ಚರ್ಚೆ ಇದೆಯಲ್ಲ’ ಎಂದು ಕೇಳಿದಾಗ, ‘ಏನೇ ಇದ್ದರೂ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆಯೇ ಹೊರತು ಬೇರೆಯವರಲ್ಲ’ ಎಂದರು.
ಯಾರ ಕ್ಲೇಮ್ ಏನಿದೆಯೋ ಗೊತ್ತಿಲ್ಲ: ‘ಶಿವಕುಮಾರ್ ಅವರ ಕ್ಲೇಮ್ ಮೇಲೆ ಎಲ್ಲವೂ ನಿಂತಿದೆಯಲ್ಲವೇ’ ಎಂದು ಕೇಳಿದಾಗ, ‘ಇಲ್ಲಿ ಶಿವಕುಮಾರ್ ಒಬ್ಬರೇ ಕ್ಲೇಮ್ ಮಾಡುತ್ತಿಲ್ಲವಲ್ಲ. ಬಹಳಷ್ಟು ಜನರ ಕ್ಲೇಮ್ ಇದೆ. ಯಾರ ಕ್ಲೇಮ್ ಏನಿದೆಯೊ ಗೊತ್ತಿಲ್ಲವಲ್ಲ’ ಎಂದರು.
‘ಸಂಪುಟ ಪುನರ್‌ರಚನೆಯಾದರೆ ಮುಖ್ಯಮಂತ್ರಿ ಬದಲಾವಣೆ ಇಲ್ಲ’ ಎಂಬ ಸಚಿವ ಜಿ. ಪರಮೇಶ್ವರ ಅವರ ಹೇಳಿಕೆ ಬಗ್ಗೆ ಕೇಳಿದಾಗ, ‘ಸಂಪುಟ ಪುನರ್‌ರಚನೆ ಮುಖ್ಯಮಂತ್ರಿಯವರ ಪರಮಾಧಿಕಾರ. ಹೈಕಮಾಂಡ್ ಅಪ್ಪಣೆಯೊಂದಿಗೆ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ವಿಚಾರದಲ್ಲಿ ಶಿವಕುಮಾರ್ ಅವರ ಬಳಿ ಹೈಕಮಾಂಡ್ ಚರ್ಚೆ ಮಾಡಿದರೆ, ಪಕ್ಷದ ಸಂಘಟನೆ ಹಾಗೂ ಬಲವರ್ಧನೆಗೆ ಅಗತ್ಯವಾದ ಸಲಹೆ ನೀಡುತ್ತಾರೆ’ ಎಂದರು.
ಪ್ರಧಾನಿ ಭೇಟಿ: ಇಂದು ಸಿಎಂ ದೆಹಲಿಗೆ
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಮತ್ತೆ ದೆಹಲಿಗೆ ಬರಲಿದ್ದಾರೆ.
ಕಬ್ಬು ಬೆಳೆಗೆ ವೈಜ್ಞಾನಿಕ ದರ ನಿಗದಿ, ಬೆಳೆ ಹಾನಿ ಪರಿಹಾರ, ನೀರಾವರಿ ಯೋಜನೆಗಳಿಗೆ ಶೀಘ್ರ ಅನುಮೋದನೆ ನೀಡುವಂತೆ ಪ್ರಧಾನಿ ಅವರಿಗೆ ಮನವಿ ಸಲ್ಲಿಸಲಿದ್ದಾರೆ. ಮಧ್ಯಾಹ್ನ 1.30ಕ್ಕೆ ಇಲ್ಲಿಗೆ ಬರಲಿರುವ ಅವರು ಸಂಜೆ 5ಕ್ಕೆ ಮೋದಿ ಅವರನ್ನು ಭೇಟಿ ಮಾಡುವರು. ರಾತ್ರಿ 7ಕ್ಕೆ ಬೆಂಗಳೂರಿಗೆ
ನಿರ್ಗಮಿಸಲಿದ್ದಾರೆ. ಸಚಿವ ಸಂಪುಟ ಪುನರ್ ರಚನೆ ಸೇರಿದಂತೆ ಕರ್ನಾಟಕದ ರಾಜಕೀಯ ವಿಷಯಗಳ ಬಗ್ಗೆ ಖರ್ಗೆ ಅವರೊಂದಿಗೆ ಸಮಾಲೋಚನೆ ನಡೆಸುವಂತೆ ಸಿದ್ದರಾಮಯ್ಯ ಅವರಿಗೆ ರಾಹುಲ್ ಗಾಂಧಿ ಸೂಚಿಸಿದ್ದಾರೆ. ಒಂದು ವೇಳೆ ಸಮಯಾವಕಾಶ ಸಿಕ್ಕರೆ ಖರ್ಗೆ ಅವರನ್ನು ಸಿದ್ದರಾಮಯ್ಯ ಸೋಮವಾರ ಭೇಟಿ ಮಾಡಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.