ADVERTISEMENT

ಕೋವಿಡ್‌ ನಿಯಮಾವಳಿ ಡರ್ಬಿ ರೇಸ್‌ಗೆ ಅನ್ವಯವಾಗುವುದಿಲ್ಲವೇ? ಡಿ.ಕೆ. ಶಿವಕುಮಾರ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಜನವರಿ 2022, 8:02 IST
Last Updated 27 ಜನವರಿ 2022, 8:02 IST
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌   

ಬೆಂಗಳೂರು:ಕೊವಿಡ್‌-19 ನಿಯಮಾವಳಿ ಡರ್ಬಿರೇಸ್‌ಗೆ ಅನ್ವಯವಾಗುವುದಿಲ್ಲವೇ? ಎನ್ನುವ ಮೂಲಕ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರುರಾಜ್ಯ ಸರ್ಕಾರದ ವಿರುದ್ಧ ಚಾಟಿ ಬೀಸಿದ್ದಾರೆ.

ಬೆಂಗಳೂರು ಟರ್ಫ್‌ ಕ್ಲಬ್‌ನಲ್ಲಿಬುಧವಾರ ನಡೆದಪ್ರತಿಷ್ಠಿತ 'ಕಿಂಗ್‌ಫಿಷರ್ ಅಲ್ಟ್ರಾ ಡರ್ಬಿ ರೇಸ್‌' ಉದ್ದೇಶಿಸಿ ʼಕೂʼನಲ್ಲಿ ಸರಣಿ ಪೋಸ್ಟ್‌ಗಳನ್ನು ಹಾಕಿದ್ದಾರೆ.

'ಕೋವಿಡ್‌ ಮಾರ್ಗಸೂಚಿಗಳ ಅನ್ವಯ ಮದುವೆ ಮೊದಲಾದ ಕಾರ್ಯಕ್ರಮಗಳಲ್ಲಿ 500 ಮಂದಿಗೆ ಮಾತ್ರ ಪ್ರವೇಶ. ಪ್ರತಿಭಟನೆ, ಧರಣಿಗಳಿಗೆ ಅವಕಾಶ ಇಲ್ಲ. ಹೋಟೆಲ್‌ ಮೊದಲಾದ ಕಡೆ 50:50 ನಿಯಮ. ಆದರೆ, ಇಂದು ಆರಂಭವಾದ ‘ಅಲ್ಟ್ರಾ ಡರ್ಬಿ ಬೆಂಗಳೂರು‘ ರೇಸ್‌ಗೆ ಯಾವುದೇ ಕೋವಿಡ್‌ ನಿಯಮಗಳು ಅನ್ವಯವಾಗುವುದಿಲ್ಲವೇ?' ಎಂದುಸರ್ಕಾರವನ್ನುಪ್ರಶ್ನಿಸಿದ್ದಾರೆ.

ADVERTISEMENT

ಮತ್ತೊಂದು ಪೋಸ್ಟ್‌ನಲ್ಲಿ, 'ಬೆಂಗಳೂರು ರೇಸ್‌ಕೋರ್ಸ್‌ನಲ್ಲಿ ನಡೆಯುತ್ತಿರುವ ಈ ಡರ್ಬಿಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದಾರೆ. ಮಾಸ್ಕ್‌ ಧರಿಸಿಲ್ಲ, ಸಾಮಾಜಿಕ ಅಂತರ ಇಲ್ಲ. ಸರ್ಕಾರಕ್ಕೆ ಆದಾಯ ಬರುವ ಮೂಲಗಳಿಗೆ ಯಾವುದೇ ಕೋವಿಡ್‌ ರೂಲ್ಸ್‌ ಅನ್ವಯವಾಗುವುದಿಲ್ಲವೇ?' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಆರೋಗ್ಯ ಸಚಿವ ಸುಧಾಕರ್ ಹಾಗೂಪೊಲೀಸ್ ಮಹಾನಿರ್ದೇಶಕರ ಹೆಸರುಗಳನ್ನು ಉಲ್ಲೇಖಿಸಿ ಕಿಡಿಕಾರಿದ್ದಾರೆ.

ಮುಂದುವರಿದು, 'ನಾಡಿನ ಕುಡಿಯುವ ನೀರಿನ ಬವಣೆ ನೀಗಿಸಲು ಕಾಂಗ್ರೆಸ್‌ ಪಕ್ಷ ಕೈಗೊಂಡ ಮೇಕೆದಾಟು ಪಾದಯಾತ್ರೆಗೆ ಬಿಜೆಪಿ ಏನೆಲ್ಲಾ ಕಳಂಕ ಹಚ್ಚಿತು. ಕೋವಿಡ್‌ ಮಾರ್ಗಸೂಚಿ ಉಲ್ಲಂಘನೆ ಆರೋಪದ ಮೇಲೆ ನನ್ನನ್ನೂ ಸೇರಿದಂತೆ ಕಾಂಗ್ರೆಸ್‌ ನಾಯಕರ ಮೇಲೆ ಪ್ರಕರಣ ದಾಖಲಾಗಿದೆ. ಕೋವಿಡ್‌ ಬಿಕ್ಕಟ್ಟಿನ ಮಧ್ಯೆಯೂ ರೇಸ್‌ ನಡೆಸಲು ಸರ್ಕಾರ ಅನುಮತಿ ನೀಡಿದ್ದು ಹೇಗೆ?' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ ಪಕ್ಷವು ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ, ಶಿವಕುಮಾರ್‌ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಇತ್ತೀಚೆಗೆ ಪಾದಯಾತ್ರೆ ಹಮ್ಮಿಕೊಂಡಿತ್ತು. ಆದರೆ,ಕೋವಿಡ್‌ ಮೂರನೇ ಅಲೆಯಿಂದಾಗಿ ಸೋಂಕು ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.