ಬಿಡದಿ (ರಾಮನಗರ): ‘ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ಬಳಿಕ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆಯಾಗಲಿದೆ. ಈ ಕುರಿತು, ಪಕ್ಷದ ವರಿಷ್ಠರು ಸೂಕ್ತ ಸಂದರ್ಭದಲ್ಲಿ ನಿರ್ಧಾರಿಸಲಿದ್ದಾರೆ. ಅಲ್ಲದೆ, ಪಕ್ಷದೊಳಗೆ ಯಾರೂ ಶಿವಕುಮಾರ್ ಅವರನ್ನು ಟಾರ್ಗೆಟ್ ಮಾಡಿಲ್ಲ’ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿದರು.
ಪಟ್ಟಣದಲ್ಲಿ ಶನಿವಾರ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಬೇರೆ ಪಕ್ಷಗಳಂತೆ ಕಾಂಗ್ರೆಸ್ ಕುಟುಂಬದ ಹಿಡಿತದಲ್ಲಿಲ್ಲ. ನಮ್ಮಲ್ಲಿರುವ ಹಲವರಿಗೆ ಮುಖ್ಯಮಂತ್ರಿಯಾಗುವ ಅರ್ಹತೆ ಇದೆ. ಚುನಾವಣೆಯಲ್ಲಿ ಏಳೆಂಟು ಸಲ ಗೆದ್ದಿರುವ ಹಿರಿಯರಿದ್ದಾರೆ. ಹಾಗಾಗಿ, ನಾಯಕತ್ವದ ಪೈಪೋಟಿ ಸಾಮಾನ್ಯ. ಪಕ್ಷದ ಹೈಕಮಾಂಡ್ ಬಲಿಷ್ಠವಾಗಿದ್ದು, ಎಲ್ಲವನ್ನೂ ಸರಿ ಮಾಡಲಿದೆ’ ಎಂದರು.
‘ಪಕ್ಷಕ್ಕೆ ಮುಜುಗರವಾಗುವ ಹೇಳಿಕೆ ನೀಡದಂತೆ ಮತ್ತು ಚರ್ಚಿಸದಂತೆ ಹೈಕಮಾಂಡ್ ಸೂಚನೆ ನೀಡಿದೆ. ಆದರೂ, ಒಂದಿಬ್ಬರು ಸಚಿವರು ತಮ್ಮ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಪಕ್ಷಗಳಲ್ಲಿರುವ ಇದು ಸಾಮಾನ್ಯ. ಡಿನ್ನರ್ ಪಾರ್ಟಿ ಮಾಡುವುದು ತಪ್ಪಲ್ಲ. ವಾಕ್ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವ ಪಕ್ಷ ನಮ್ಮದಲ್ಲ’ ಎಂದು ಹೇಳಿದರು.
ಸಚಿವ ಸ್ಥಾನ ವಿಶ್ವಾಸ: ‘ಬಜೆಟ್ ನಂತರ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ನನ್ನ ಹಿರಿತನ ಪರಿಗಣಿಸಿ ಸಂಪುಟದಲ್ಲಿ ಅವಕಾಶ ಕೊಡುವ ವಿಶ್ವಾಸವಿದೆ. ಆದರೆ, ನಾವು ಏನೇ ಹೇಳಿದರೂ ಹೈಕಮಾಂಡ್ ನಿರ್ಧಾರವೇ ಅಂತಿಮ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.