ADVERTISEMENT

ಶೂ, ಸಾಕ್ಸ್‌ನಲ್ಲಿ ಕಮಿಷನ್ ಹೊಡೆಯದಿದ್ದರೆ ಸಾಕು: ಪ್ರಿಯಾಂಕ್ ಖರ್ಗೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2022, 18:52 IST
Last Updated 9 ಜುಲೈ 2022, 18:52 IST
ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ   

ಬೆಂಗಳೂರು: ‘ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ವಿತರಣೆಗೆ ₹132 ಕೋಟಿ ನೀಡುವುದಾಗಿ ಮುಖ್ಯಮಂತ್ರಿ ಘೋಷಿಸಿ ದ್ದಾರೆ. ಇದು ಮಕ್ಕಳ ವಿಚಾರವಾಗಿದ್ದು, ಸರ್ಕಾರ ಇದರಲ್ಲಿ ಶೇ 40 ಕಮಿಷನ್ ಹೊಡೆಯದಿದ್ದರೆ ಸಾಕು’ ಎಂದು ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ, ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಮೂರು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡಿಲ್ಲ. ಕಳೆದ ವರ್ಷ ಎರಡು ಸಮವಸ್ತ್ರ ನೀಡಬೇಕಿದ್ದ ಸರ್ಕಾರ, ಒಂದು ಸಮವಸ್ತ್ರ ನೀಡಿತ್ತು. ಮಕ್ಕಳು ಪ್ರತಿ ವರ್ಷ ಪ್ರತಿಭಟನೆ ಮಾಡಿ ಸಮವಸ್ತ್ರ ಪಡೆಯಬೇಕೇ’ ಎಂದು ಪ್ರಶ್ನಿಸಿದರು.

‘ಹೈಕೋರ್ಟ್‌ಗೆ ಸಲ್ಲಿಸಿರುವ ವರದಿ ಪ್ರಕಾರ ಅಂಗನವಾಡಿ ಮಕ್ಕಳಿಂದ ಪ್ರೌಢ ಶಾಲೆವರೆಗೆ 10 ಲಕ್ಷ ಮಕ್ಕಳು ಶಾಲೆಯಿಂದ ಹೊರಗಿದ್ದಾರೆ. ಅವರನ್ನು ಶಾಲೆಗೆ ವಾಪಸು ಕರೆತರುವ ಯೋಗ್ಯತೆ ಸರ್ಕಾರಕ್ಕಿಲ್ಲ. ಬಡತನ ಎಂ ದರೆ ಗೊತ್ತಿದೆಯೇ. ಉಚಿತ ಸೈಕಲ್ ಯೋಜನೆ ಎಲ್ಲಿ ಹೋಯಿತು. ರಾಯಚೂರು, ಕಲಬುರಗಿ ಭಾಗದ ಮಕ್ಕಳಲ್ಲಿ ಹೆಚ್ಚುತ್ತಿರುವ ಅಪೌಷ್ಟಿಕತೆ ತಡೆಗೆ ಯಾವ ಯೋಜನೆ ಇದೆ’ ಎಂದರು.

ADVERTISEMENT

‘ಪಿಎಸ್ಐ ನೇಮಕಾತಿ ಅಕ್ರಮ ಕುರಿತು ಕಾಂಗ್ರೆಸ್ ಬಳಿ ಯಾವ ಸಾಕ್ಷ್ಯಾಧಾರಗಳಿವೆ’ ಎಂದು ಬಿಜೆಪಿ ಕೇಳಿರುವ ಬಗ್ಗೆ ಪ್ರಶ್ನಿಸಿದಾಗ, ‘ಈ ಪ್ರಕರಣದ ತನಿಖೆಯನ್ನು ನಡೆಸಲು ಈ ಸರ್ಕಾರ ಅಸಮರ್ಥವಾಗಿದೆ ಎಂದು ಒಪ್ಪಿಕೊಳ್ಳಲಿ. ಅವರಿಗೆ ತನಿಖೆ ಮಾಡಲು ಸಾಧ್ಯವಾಗದಿದ್ದರೆ ತನಿಖೆಯ ಅಧಿಕಾರವನ್ನು ನಮ್ಮ ಕೈಗೆ ನೀಡಲಿ. ನಾವು ಮಾಡಿ ತೋರಿಸುತ್ತೇವೆ. ಈ ಹಗರಣದಲ್ಲಿ ನಿಮ್ಮ ಪಾಲು ಇಲ್ಲದಿದ್ದರೆ ನ್ಯಾಯಾಂಗ ತನಿಖೆಗೆ ನೀಡಲು ಭಯವೇಕೆ?’ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.