ADVERTISEMENT

‘ಬ್ಲೂ ಟೂತ್‌’ ಬಳಸಿ ಪರೀಕ್ಷಾ ಅಕ್ರಮ ಸಾಧ್ಯತೆ!

ಪಿಡಬ್ಲ್ಯುಡಿ ಎಂಜಿನಿಯರ್‌ಗಳ ಭರ್ತಿ l ಅಭ್ಯರ್ಥಿಗಳಿಂದ ಕೆಪಿಎಸ್‌ಸಿಗೆ ದೂರು

ರಾಜೇಶ್ ರೈ ಚಟ್ಲ
Published 5 ಡಿಸೆಂಬರ್ 2021, 19:59 IST
Last Updated 5 ಡಿಸೆಂಬರ್ 2021, 19:59 IST
ಕೆಪಿಎಸ್‌ಸಿ
ಕೆಪಿಎಸ್‌ಸಿ   

ಬೆಂಗಳೂರು: ಲೋಕೋಪಯೋಗಿ ಇಲಾಖೆಯಲ್ಲಿ ಖಾಲಿ ಇರುವ ಸಹಾಯಕ ಎಂಜಿನಿಯರ್‌ (ಎಇ) 660 ಮತ್ತು ಕಿರಿಯ ಎಂಜಿನಿಯರ್‌ (ಜೆಇ) 330 ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಇದೇ 13 ಮತ್ತು 14ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿದೆ. ಪರೀಕ್ಷೆಗೆ ಸಿದ್ಧತೆ ನಡೆಯುತ್ತಿರುವ ಬೆನ್ನಲ್ಲೆ, ‘ಅತ್ಯಾಧುನಿಕ ಬ್ಲೂ ಟೂತ್‌’ ಸಾಧನದ ಮೂಲಕ ಪರೀಕ್ಷಾ ಅಕ್ರಮ ನಡೆಸುವ ಸಾಧ್ಯತೆ
ಗಳ ಬಗ್ಗೆ ಅಭ್ಯರ್ಥಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ನೂರಾರು ಅಭ್ಯರ್ಥಿಗಳು ಕೆಪಿಎಸ್‌ಸಿ ಕಾರ್ಯದರ್ಶಿ ಜಿ.ಸತ್ಯವತಿ ಅವರಿಗೆ ಪತ್ರ ಬರೆದಿದ್ದಾರೆ. ಹೀಗಾಗಿ, ಈ ವಿಷಯ ಆಯೋಗದ ಸಭೆಯಲ್ಲೂ ಗಂಭೀರವಾಗಿ ಚರ್ಚೆಯಾಗಿದ್ದು, ಅಕ್ರಮ ತಡೆಗೆ ಕಠಿಣ ಕ್ರಮಗಳನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದೆ.

ಅಕ್ರಮ ಹೇಗೆ: ‘ಪರೀಕ್ಷಾ ಅಕ್ರಮಕ್ಕೆ ಅನುಕೂಲವಾಗುವಂತೆಬ್ಲೂ ಟೂತ್‌ ಸಾಧನಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇವುಗಳನ್ನುಶರ್ಟ್‌, ಬೆಲ್ಟ್‌, ಒಳ ಉಡುಪುಗಳು, ಶೂ, ಚಪ್ಪಲಿಗಳಲ್ಲೇ (ಇನ್‌ಬಿಲ್ಟ್‌) ಅಳವಡಿಸಲಾಗಿರುತ್ತದೆ. ಇವು ಬೆಂಗಳೂರು, ಹೈದರಾಬಾದ್‌ಗಳಿಂದ ಪೂರೈಕೆಯಾಗುತ್ತವೆ. ಈ ಸೂಕ್ಷ್ಮ ಸಾಧನವು ಸಿಮ್‌ ಡಿವೈಸ್‌, ಬ್ಯಾಟರಿ, ಮೈಕ್ರೊ ಸ್ಪೀಕರ್‌, ಮೈಕ್ರೊಫೋನ್‌ ಅನ್ನು ಒಳಗೊಂಡಿರುತ್ತದೆ. ಅಂಗಿಯ ಕಾಲರ್‌ನಲ್ಲಿ ಮೈಕ್ರೋಫೋನ್‌, ಕಿವಿಯಲ್ಲಿ ಮೈಕ್ರೊ ಸ್ಪೀಕರ್‌ ಅಳವಡಿಸಲಾಗುತ್ತದೆ. ಈ ಸಾಧನಕ್ಕೆ ಕರೆಗಳು ಸ್ವಯಂಚಾಲಿತವಾಗಿ ಸಂಪರ್ಕ ಪಡೆದುಕೊಳ್ಳುತ್ತವೆ. ಅನುದಾನಿತ ಶಿಕ್ಷಣ ಕೇಂದ್ರಗಳ ಮುಖ್ಯಸ್ಥರಿಗೆ ಭಾರಿ ಮೊತ್ತದ ಆಮಿಷ ತೋರಿಸಿ, ಅಲ್ಲಿನ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಂದ ಹಣ ವಸೂಲಿ ಮಾಡಿ ಈ ಅಕ್ರಮಕ್ಕೆ ಅನುವು ಮಾಡಿಕೊಡಲಾಗುತ್ತಿದೆ’ ಎಂದು ಪತ್ರದಲ್ಲಿ ಅಭ್ಯರ್ಥಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

ADVERTISEMENT

ಅಕ್ರಮದಲ್ಲಿ ತೊಡಗಿಸಿಕೊಂಡವರು ‘ಬ್ಲೂ ಟೂತ್‌’ ಸಾಧನದ ಮೂಲಕ ಪರೀಕ್ಷಾ ಕೇಂದ್ರದ ಒಳಗಿರುವ ಅಭ್ಯರ್ಥಿಯನ್ನು ಸಂಪರ್ಕಿಸುವ ವಿಧಾನ, ಜಾಮರ್‌ ಬಳಸಿದರೂ ಫಿಲ್ಟರ್‌ ಮಾಸ್ಕ್‌ನಲ್ಲಿ ರೇಡಿಯೊ ವಯರ್‌ಲೆಸ್‌ ಮೂಲಕ ಸಂಪರ್ಕ ಕಲ್ಪಿಸುವ ವ್ಯವಸ್ಥೆ, ಈ ಸಾಧನ ಕೆಲಸ ಮಾಡುವ ವಿಧಾನದ ಬಗ್ಗೆಯೂ ದೂರಿನಲ್ಲಿ ವಿವರಿಸಿದ್ದಾರೆ.

ಪರೀಕ್ಷೆ ಆರಂಭಕ್ಕೂ ಒಂದು ಗಂಟೆ ಮೊದಲು ಖಜಾನೆಯಿಂದ ಪ್ರಶ್ನೆಪತ್ರಿಕೆಗಳನ್ನು ಪರೀಕ್ಷಾ ಕೇಂದ್ರಗಳಿಗೆ ರವಾನಿಸ ಲಾಗುತ್ತದೆ. ಈ ವೇಳೆ, ಪ್ರಶ್ನೆಪತ್ರಿಕೆಗಳ ಕಟ್ಟು ಬಿಚ್ಚಿ ಎಲ್ಲ ಸರಣಿಯ ಪ್ರಶ್ನೆ ಪತ್ರಿಕೆಗಳನ್ನು ವಾಟ್ಸ್‌ಆ್ಯಪ್‌ ಮೂಲಕ ಸೋರಿಕೆ ಮಾಡುವ ಸಾಧ್ಯತೆ ಇದೆ ಎಂದೂ ಮಾಹಿತಿ ನೀಡಿದ್ದಾರೆ.

ಯಾದಗಿರಿ, ಕಲಬುರಗಿ, ಬೆಳಗಾವಿ, ರಾಯಚೂರು ಸೇರಿದಂತೆ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಕ್ರಮ ನಡೆಸುವ ತಂಡಗಳು ಸಕ್ರಿಯವಾಗಿವೆ. ಪ್ರತಿ ಸಾಧನದ ಬೆಲೆ ₹ 15 ಸಾವಿರದಿಂದ ₹ 20 ಸಾವಿರ ಇದೆ. ಕೆಲವರು ಈ ಸಾಧನಗಳನ್ನು ಖರೀದಿಸಿದ್ದಾರೆ ಎಂದೂ ಪತ್ರದಲ್ಲಿ ತಿಳಿಸಿದ್ದಾರೆ.

ಕೆಪಿಎಸ್‌ಸಿಯು ಸಾಂಪ್ರದಾಯಿಕ ಮಾದರಿಯಲ್ಲಿ ಎ, ಬಿ, ಸಿ, ಡಿ ಸರಣಿಯ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸುವ ಪದ್ಧತಿ ಕೈಬಿಟ್ಟು, ಬಾರ್‌ಕೋಡ್‌ ತಂತ್ರಜ್ಞಾನ ಬಳಸಬೇಕು. ಪರೀಕ್ಷೆ ಆರಂಭವಾದ ಬಳಿಕ ಶೌಚಾಲಯಕ್ಕೆ ಹೋಗುವುದನ್ನು ನಿಷೇಧಿಸಬೇಕು. ಅನುದಾನಿತ ಶಿಕ್ಷಣ ಸಂಸ್ಥೆಗಳನ್ನು ಪರೀಕ್ಷಾ ಕೇಂದ್ರವಾಗಿ ಮಾಡ ಬಾರದು. ಜಿಲ್ಲಾ ಖಜಾನೆಯಿಂದ ಪ್ರಶ್ನೆಪತ್ರಿಕೆ ತರುವ ವೇಳೆ ‘ಎ’ ಶ್ರೇಣಿಯ ಅಧಿಕಾರಿಯೊಬ್ಬ ರನ್ನು ನಿಯೋಜಿಸಬೇಕು. ಗೈರಾದ ಅಭ್ಯರ್ಥಿಗಳ ಒಎಂಆರ್ ಹಾಳೆಗೆ ಪರೀಕ್ಷಾ ಕೇಂದ್ರದಲ್ಲಿಯೇ ಅಡ್ಡ ಗೆರೆ ಎಳೆಯಬೇಕು. ಅತ್ಯಾಧುನಿಕ ಸಾಧನ ಬಳಸಿ ಪರೀಕ್ಷಾರ್ಥಿಗಳ ಕಿವಿಗಳನ್ನು ಪರಿಶೋಧಿಸಬೇಕು ಎಂದು ಸಲಹೆ ನೀಡಿದ್ದಾರೆ.

ಸಂದೇಹಾಸ್ಪದ ಪರೀಕ್ಷಾ ಕೇಂದ್ರ ರದ್ದು:

‘ಹೇಗೆಲ್ಲಾ ಪರೀಕ್ಷಾ ಅಕ್ರಮ ನಡೆಯುವ ಸಾಧ್ಯತೆಗಳಿವೆ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಹೀಗಾಗಿ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಪರೀಕ್ಷಾ ಕೇಂದ್ರದ ಪ್ರವೇಶಪತ್ರವನ್ನು (ಹಾಲ್‌ ಟಿಕೆಟ್‌) ಈ ಬಾರಿ ಒಂದು ವಾರ ಮೊದಲು ಬಿಡುಗಡೆ ಮಾಡಲಾಗುವುದು. ಯಾವ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬೇಕು ಎಂಬ ವಿಚಾರ ಅಭ್ಯರ್ಥಿಗಳಿಗೆ ವಾರದ ಮೊದಲಷ್ಟೆ ಗೊತ್ತಾಗಲಿದೆ. ಖಜಾನೆಯಿಂದ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆಪತ್ರಿಕೆಗಳ ರವಾನಿಸುವುದು, ಅಭ್ಯರ್ಥಿಗಳ ಪರಿಶೋಧನೆ ಸೇರಿದಂತೆ ಇಡೀ ಪರೀಕ್ಷಾ ವ್ಯವಸ್ಥೆಯ ಮೇಲೆ ನಿಗಾವಹಿಸಲಾಗುವುದು. ಅಕ್ರಮಕ್ಕೆ ಕೈಜೋಡಿಸಿರುವ ಅನುಮಾನದ ಮೇಲೆ ಕೆಲವು ಪರೀಕ್ಷಾ ಕೇಂದ್ರಗಳನ್ನೇ ರದ್ದುಪಡಿಸಲಾಗಿದೆ. ಅಭ್ಯರ್ಥಿಗಳು ತಮ್ಮ ಊರಿನಲ್ಲೇ ಪರೀಕ್ಷೆ ಬರೆಯಲು ಅವಕಾಶ ಇರುವುದಿಲ್ಲ. ಇನ್ನೂ ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದೇವೆ. ಅವುಗಳನ್ನು ಬಹಿರಂಗಪಡಿಸುವುದಿಲ್ಲ’ ಎಂದು ಕೆಪಿಎಸ್‌ಸಿ ಸದಸ್ಯರೊಬ್ಬರು ತಿಳಿಸಿದರು.

ಪರೀಕ್ಷಾ ಅಕ್ರಮಕ್ಕೆ ಅವಕಾಶ ನೀಡಬಾರದೆಂದು ನೂರಾರು ಮನವಿಗಳು ಬಂದಿವೆ. ಹೀಗಾಗಿ, ಹಿಂದೆಂಗಿಂತಲೂ ಕಟ್ಟುನಿಟ್ಟಿನ ಕ್ರಮಗಳನ್ನು ಈ ಬಾರಿ ತೆಗೆದುಕೊಳ್ಳುತ್ತೇವೆ

- ಜಿ. ಸತ್ಯವತಿ, ಕೆಪಿಎಸ್‌ಸಿ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.