ಬೆಂಗಳೂರು: ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸಿದ ಪ್ರಾಥಮಿಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳ ಭಾಷಾಂತರದಲ್ಲಿ ಲೋಪ ಎಸಗಿರುವವರನ್ನು ಕಪ್ಪುಪಟ್ಟಿಗೆ ಸೇರಿಸಿ, ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಕೆಪಿಎಸ್‌ಸಿ ಪರೀಕ್ಷಾ ಲೋಪ ಮತ್ತು ಭ್ರಷ್ಟಾಚಾರದ ಕುರಿತು ನಡೆದ ಚರ್ಚೆಗೆ ವಿಧಾನಸಭೆಯಲ್ಲಿ ಬುಧವಾರ ಉತ್ತರ ನೀಡಿದ ಅವರು, ‘ಎರಡು ಬಾರಿ ನಡೆದ ಪ್ರಾಥಮಿಕ ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಕನ್ನಡಕ್ಕೆ ಭಾಷಾಂತರಿಸುವಾಗ ಲೋಪಗಳಾಗಿವೆ. ಈ ವಿಷಯವನ್ನು ನಮ್ಮ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ’ ಎಂದರು.
‘384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಭರ್ತಿಗೆ 2024ರ ಆಗಸ್ಟ್ 27ರಂದು ಪ್ರಾಥಮಿಕ ಪರೀಕ್ಷೆ ನಡೆಸಲಾಗಿತ್ತು. ಆಗ ಕನ್ನಡ ಪ್ರಶ್ನೆ ಪತ್ರಿಕೆಗಳಲ್ಲಿ ತಪ್ಪುಗಳಿರುವ ದೂರುಗಳು ಬಂದಿದ್ದವು. ತಕ್ಷಣವೇ ಕೆಪಿಎಸ್‌ಸಿ ಅಧಿಕಾರಿಗಳನ್ನು ಕರೆದು ಚರ್ಚಿಸಿದ್ದೆ. ಹತ್ತು ಪ್ರಶ್ನೆಗಳಲ್ಲಿ ತಪ್ಪುಗಳಾಗಿವೆ ಎಂದು ವರದಿ ನೀಡಿದ್ದರು. ಆ ಬಳಿಕ ಮರು ಪರೀಕ್ಷೆಗೆ ಸೂಚಿಸಲಾಗಿತ್ತು’ ಎಂದು ತಿಳಿಸಿದರು.
‘ಡಿಸೆಂಬರ್ 29ರಂದು ಎರಡನೇ ಬಾರಿಗೆ ಪ್ರಾಥಮಿಕ ಪರೀಕ್ಷೆ ನಡೆಸಲಾಯಿತು. ಆ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳಲ್ಲೂ ತಪ್ಪುಗಳಿರುವ ದೂರುಗಳಿವೆ. ಆರು ಪ್ರಶ್ನೆಗಳಲ್ಲಿ ತಪ್ಪುಗಳಾಗಿವೆ ಎಂದು ಆಯೋಗದ ವಿಷಯ ತಜ್ಞರ ಸಮಿತಿ ವರದಿ ನೀಡಿದೆ’ ಎಂದರು.
ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಅನ್ಯಾಯವಾಗುವುದನ್ನು ತಪ್ಪಿಸಲು ಮೊದಲು ಕನ್ನಡದಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ದಪಡಿಸಿ, ಬಳಿಕ ಇಂಗ್ಲಿಷ್‌ಗೆ ಭಾಷಾಂತರ ಮಾಡುವಂತೆ ಆಯೋಗಕ್ಕೆ ಸೂಚಿಸಲಾಗುವುದು ಎಂದು ಸಿದ್ದರಾಮಯ್ಯ ಪ್ರಕಟಿಸಿದರು.
ಪ್ರಶ್ನೆ ಪತ್ರಿಕೆಯಲ್ಲಿನ ಕನ್ನಡ ಭಾಷಾಂತರದಲ್ಲಿ ತಪ್ಪುಗಳಾಗುವುದನ್ನು ತಡೆಯಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೆಪಿಎಸ್‌ಸಿ ಸಹಯೋಗದಲ್ಲಿ ಕನ್ನಡ ಭಾಷಾ ತಜ್ಞರ ತಂಡವನ್ನು ರಚಿಸುವ ಪ್ರಸ್ತಾವವಿದೆ ಎಂದರು.
ಸುಧಾರಣೆಗೆ ಕ್ರಮ: ‘ಕೆಪಿಎಸ್‌ಸಿ ದಕ್ಷ ಮತ್ತು ಪ್ರಾಮಾಣಿಕವಾಗಿ ನೇಮಕಾತಿ ಪರೀಕ್ಷೆಗಳನ್ನು ನಡೆಸಬೇಕು ಎಂಬುದು ನಮ್ಮ ಉದ್ದೇಶ. ಈ ಕಾರಣಕ್ಕಾಗಿಯೇ ಆಯೋಗದಲ್ಲಿ ಸುಧಾರಣೆ ತರುವ ಕುರಿತು ಅಧ್ಯಯನ ನಡೆಸಿ, ಸಲಹೆ ನೀಡಲು 2013ರಲ್ಲಿ ನಮ್ಮ ಸರ್ಕಾರವೇ ಪಿ.ಸಿ. ಹೋಟಾ ಸಮಿತಿಯನ್ನು ನೇಮಿಸಿತ್ತು. ಸಮಿತಿಯ ಶಿಫಾರಸಿನಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಈಗಲೂ ಕೆಪಿಎಸ್‌ಸಿಯಲ್ಲಿ ಸುಧಾರಣೆ ತರಲು ನಮ್ಮ ಸರ್ಕಾರ ಬದ್ಧವಾಗಿದೆ’ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.
‘ಕೆಪಿಎಸ್‌ಸಿ ಸ್ವಾಯತ್ತ ಸಾಂವಿಧಾನಿಕ ಸಂಸ್ಥೆ. ಸದಸ್ಯರನ್ನು ನೇಮಕ ಮಾಡುವ ಅಧಿಕಾರವಷ್ಟೇ ನಮ್ಮ ಬಳಿ ಇದೆ. ತೆಗೆದು ಹಾಕುವ ಅಧಿಕಾರ ಇಲ್ಲ. ಈಗ ಕೆಪಿಎಸ್‌ಸಿಯಲ್ಲಿ 16 ಸದಸ್ಯರಿದ್ದಾರೆ, ಸದಸ್ಯರ ಸಂಖ್ಯೆಯನ್ನು ಕಡಿಮೆ ಮಾಡುವ ಬಗ್ಗೆ ಪರಿಶೀಲಿಸಿ, ನಿರ್ಧಾರ ಮಾಡಲಾಗುವುದು. ಕೇಂದ್ರ ಲೋಕಸೇವಾ ಆಯೋಗದ ಮಾದರಿಯ ಪರೀಕ್ಷಾ ಕ್ರಮಗಳನ್ನು ಅಳವಡಿಸಲಾಗುವುದು’ ಎಂದರು.
‘ಕೆಪಿಎಸ್‌ಸಿ ಸದಸ್ಯರಾಗಲು ಶಿಫಾರಸು ಪತ್ರ ಹಿಡಿದು ಬರುವವರು ಪ್ರಾಮಾಣಿಕರಂತೆ ನಟಿಸುತ್ತಾರೆ. ಆದರೆ, ನೇಮಕಾತಿ ಬಳಿಕ ಬೇರೆ ದಾರಿ ಹಿಡಿಯುತ್ತಾರೆ. ಸಾಧ್ಯವಾದಷ್ಟೂ ಪ್ರಾಮಾಣಿಕವಾಗಿರುವವರನ್ನು ನೇಮಿಸಬೇಕು. ಕೆಪಿಎಸ್‌ಸಿ ಸದಸ್ಯರ ನೇಮಕಕ್ಕೆ ಶೋಧನಾ ಸಮಿತಿ ರಚಿಸುವ ಬಗ್ಗೆಯೂ ಪರಿಶೀಲಿಸಿ, ನಿರ್ಧಾರ ಮಾಡಲಾಗುವುದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.