ADVERTISEMENT

ಕೆಎಎಸ್ ಪರೀಕ್ಷೆ: ಗೈರಾಗುವ ಚಿಂತೆ

ಕೋವಿಡ್‌ ಕರ್ತವ್ಯದಲ್ಲಿದ್ದವರಿಗೆ ಅವಕಾಶ ನಷ್ಟ? l ಮುಂದೂಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2020, 21:45 IST
Last Updated 3 ಆಗಸ್ಟ್ 2020, 21:45 IST
ಕೆಪಿಎಸ್‌ಸಿ
ಕೆಪಿಎಸ್‌ಸಿ   

ಬೆಂಗಳೂರು: ಗೆಜೆಟೆಡ್‌ ಪ್ರೊಬೇಷನರಿ 106 ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಇದೇ 24ರಂದು ಪೂರ್ವಭಾವಿ ಪರೀಕ್ಷೆ ನಡೆಸಲು ನಿರ್ಧರಿಸಿದೆ. ಸರ್ಕಾರಿ ನೌಕರಿಯಲ್ಲಿದ್ದುಕೊಂಡು ಪರೀಕ್ಷೆ ಬರೆಯುತ್ತಿರುವ ಸಾವಿರಾರು ಅಭ್ಯರ್ಥಿಗಳು ಕೋವಿಡ್‌ ಕರ್ತವ್ಯದಲ್ಲೂ ತೊಡಗಿಸಿಕೊಂಡಿದ್ದು, ಪರೀಕ್ಷೆ ಎದುರಿಸುವುದು ಹೇಗೆಂಬ ಚಿಂತೆಯಲ್ಲಿದ್ದಾರೆ.

ಈ ಪರೀಕ್ಷಾರ್ಥಿಗಳು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌, ಕೆಪಿಎಸ್‌ಸಿ ಕಾರ್ಯದರ್ಶಿ ಜಿ. ಸತ್ಯವತಿ ಅವರಿಗೆ ತಮ್ಮ ಸಮಸ್ಯೆ ವಿವರಿಸಿದ್ದಾರೆ.

‘ಅರ್ಜಿ ಸಲ್ಲಿಸಿದ 5 ಲಕ್ಷಕ್ಕೂ ಹೆಚ್ಚು ಮಂದಿಯಲ್ಲಿ ಕಾನ್‌ಸ್ಟೆಬಲ್‌ಗಳು, ಇನ್‌ಸ್ಪೆಕ್ಟರ್‌ಗಳು, ವೈದ್ಯರು, ಹಿರಿಯ–ಕಿರಿಯ ಪ್ರಥಮದರ್ಜೆ ಸಹಾಯಕರು, ಲ್ಯಾಬ್‌ ಟೆಕ್ನಿಷಿಯನ್‌ಗಳಾಗಿ ಕೆಲಸ ಮಾಡುತ್ತಿರುವವರು ಸೇರಿ ಸರ್ಕಾರಿ ಕರ್ತವ್ಯದಲ್ಲಿರುವ ಶೇ 20ರಷ್ಟು ಮಂದಿ ಇದ್ದಾರೆ. ಈ ಪೈಕಿ, ಅನೇಕರು ಕೋವಿಡ್‌ ವಾರಿಯರ್ಸ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ. ನಿಗದಿಯಂತೆ ಪರೀಕ್ಷೆ ನಡೆದರೆ ಸಾವಿರಾರು ಮಂದಿ ಅವಕಾಶ ವಂಚಿತರಾಗಲಿದ್ದಾರೆ’ ಎಂದು ಈ ಅಭ್ಯರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

ADVERTISEMENT

‘ಕೋವಿಡ್‌ ಕರ್ತವ್ಯಕ್ಕೆ ನಿಯೋಜನೆ ಗೊಂಡಿರುವವರಿಗೆ ಪರೀಕ್ಷೆಗೆ ಸಿದ್ಧತೆ ನಡೆಸಲು ಕಾಲಾವಕಾಶ ಸಿಕ್ಕಿಲ್ಲ. ಅಲ್ಲದೆ, ರಜೆ ಸಿಗುವುದು ಕೂಡಾ ಕಷ್ಟ. ಪರೀಕ್ಷೆ ಮುಂದೂಡುವಂತೆ ಮನವಿ ಸಲ್ಲಿಸಿದರೂ ಈವರೆಗೂ ಯಾವುದೇ ಸ್ಪಂದನೆ ಇಲ್ಲ’ ಎಂದೂ ಬೇಸರ ವ್ಯಕ್ತಪಡಿಸಿದ್ದಾರೆ.

‘ಕೆಪಿಎಸ್‌ಸಿಗಿಂತ ಮೊದಲೇ ಕೇಂದ್ರ ನಾಗರಿಕ ಸೇವೆಯ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದ ಯುಪಿಎಸ್‌ಸಿ, ಅಕ್ಟೋಬರ್‌ನಲ್ಲಿ ಪರೀಕ್ಷೆ ನಡೆಸುವುದಾಗಿ ಪ್ರಕಟಿಸಿದೆ. ಅಲ್ಲದೆ, ಪರೀಕ್ಷಾ ಕೇಂದ್ರ ಬದಲಿಸಲು ಕೂಡಾ ಅವಕಾಶ ನೀಡಿದೆ. ಆದರೆ, ಪರೀಕ್ಷಾ ಕೇಂದ್ರ ಬದಲಿಸಲು ಕೆಪಿಎಸ್‌ಸಿ ಅವಕಾಶ ನೀಡಿಲ್ಲ. ಅಲ್ಲದೆ, ಮೈಸೂರು, ಬೆಂಗಳೂರು, ಶಿವಮೊಗ್ಗ, ಧಾರವಾಡ ಮತ್ತು ಬೆಳಗಾವಿ ಕೇಂದ್ರಗಳಲ್ಲಿ ಮಾತ್ರ ಪರೀಕ್ಷೆ ನಡೆಯಲಿದೆ. ಇತರ ಕಡೆಗಳಿಂದ ಅಲ್ಲಿಗೆ ಒಂದು ದಿನ ಮೊದಲೇ ತೆರಳಿ ಪರೀಕ್ಷೆ ಬರೆಯುವುದು ಸದ್ಯದ ಸ್ಥಿತಿಯಲ್ಲಿ ಕಷ್ಟ. ಹೀಗಾಗಿ, ಪರೀಕ್ಷೆ ಮುಂದೂಡಲೇಬೇಕು’ ಎಂದೂ ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ.

ಕೋವಿಡ್‌ ಕರ್ತವ್ಯದಲ್ಲಿ ಕೆಪಿಎಸ್‌ಸಿ ಕಾರ್ಯದರ್ಶಿ ಜಿ. ಸತ್ಯವತಿ

ಕೆಎಎಸ್‌ ಪೂರ್ವಭಾವಿ ಪರೀಕ್ಷೆಗೆ ಸಿದ್ಧತೆ ನಡೆಯುತ್ತಿರುವ ಮಧ್ಯೆ, ಕೆಪಿಎಸ್‌ಸಿ ಕಾರ್ಯದರ್ಶಿ ಜಿ. ಸತ್ಯವತಿ ಅವರು ಕೋವಿಡ್‌-19 ಹರಡುವಿಕೆ ತಡೆಯುವ ಉದ್ದೇಶದಿಂದ ಕಂಟೈನ್‌ಮೆಂಟ್‌ ಪ್ರದೇಶ ಮತ್ತು ಸುತ್ತಮುತ್ತಲಿನ ಕಣ್ಗಾವಲಿಗೆ ರಾಜ್ಯ ಸರ್ಕಾರ ರಚಿಸಿದ ತಂಡವೊಂದರ ನೇತೃತ್ವ ವಹಿಸಿಕೊಂಡಿದ್ದಾರೆ. ಶಂಕಿತ ಪ್ರಕರಣಗಳ ಪತ್ತೆಗಾಗಿ ಕಂಟೈನ್‌ಮೆಂಟ್‌ ವಲಯ ಮತ್ತು ಸುತ್ತಮುತ್ತಲಿನ 100 ಮೀಟರ್‌ ವ್ಯಾಪ‍್ತಿಯಲ್ಲಿ ಸರ್ವೇಕ್ಷಣೆ ನಡೆಸುವ ಹೊಣೆಯೂ ಅವರ ತಂಡದ ಮೇಲಿದೆ.

* ನಿಗದಿಯಂತೆ ಪರೀಕ್ಷೆ ನಡೆಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹೀಗಾಗಿ, ಪೂರ್ವಭಾವಿ ಪರೀಕ್ಷೆ ಮುಂದೂಡುವ ಪ್ರಶ್ನೆ ಉದ್ಭವಿಸುವುದಿಲ್ಲ

- ಎಸ್‌.ಪಿ. ಷಡಕ್ಷರಿ, ಕೆಪಿಎಸ್‌ಸಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.