ADVERTISEMENT

ಬೆಂಗಳೂರಿನ ಸಪ್ತಶ್ರೀ ಟಾಪರ್‌

ಕೆಪಿಎಸ್‌ಸಿ: 428 ಹುದ್ದೆಗಳಿಗೆ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ–ಕಠಿಣ ಶ್ರಮಕ್ಕೆ ಫಲ ದೊರೆತ ಸಂತಸ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2019, 20:30 IST
Last Updated 23 ಡಿಸೆಂಬರ್ 2019, 20:30 IST
ಅರ್ಜುನ್ ಒಡೆಯರ್‌
ಅರ್ಜುನ್ ಒಡೆಯರ್‌   

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ)2015ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಗ್ರೂಪ್‌ ‘ಎ’ ಮತ್ತು ‘ಬಿ’ ವೃಂದದ ಒಟ್ಟು 428 ಹುದ್ದೆಗಳ ನೇಮಕಾತಿಗಾಗಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಸೋಮವಾರ ಪ್ರಕಟಿಸಿದೆ.

ಬೆಂಗಳೂರಿನ ಬಿ.ಕೆ.ಸಪ್ತಶ್ರೀ 1,237 ಅಂಕಗಳೊಂದಿಗೆ ಟಾಪರ್‌ ಆಗಿದ್ದು, ಮೈಸೂರಿನ ಅರ್ಜುನ್‌ ಒಡೆಯರ್‌ (1,222) ದ್ವಿತೀಯ ಹಾಗೂ ಬೆಂಗಳೂರಿನ ಅಪೇಕ್ಷಾ ಸತೀಶ್‌ಪವಾರ್‌ (1,208) ತೃತೀಯ ಸ್ಥಾನ ಪಡೆದಿದ್ದಾರೆ.

ಬೆಂಗಳೂರಿನ ವಿ.ಅಭಿಷೇಕ್‌ (1,204), ಬಳ್ಳಾರಿಯ ಟಿ.ಎಸ್.ವಿಷ್ಣುವರ್ಧನ ರೆಡ್ಡಿ (1,203), ಮೈಸೂರಿನ ಎಸ್‌.ಹರ್ಷವರ್ಧನ (1,202), ಮೈಸೂರಿನ ಎಂ.ಕಾರ್ತಿಕ್‌ (1,197), ಸಿಂದಗಿಯ ಬಸವಣ್ಣಪ್ಪ ಕಲ್‌ಶೆಟ್ಟಿ (1,191), ಬೆಂಗಳೂರಿನ ಪಿ.ವಿವೇಕಾನಂದ (1,186) ಹಾಗೂ ಚಿಕ್ಕಬಳ್ಳಾಪುರದ ಎಂ.ಕೆ.ಶ್ರುತಿ (1,185) ಅವರು ಮೊದಲ 10 ಮಂದಿಯ ಪಟ್ಟಿಯಲ್ಲಿದ್ದಾರೆ.

ADVERTISEMENT

ಆಯೋಗದ ವೆಬ್‌ಸೈಟ್‌ನಲ್ಲಿ ಪಟ್ಟಿಯನ್ನು ಪ್ರಕಟಿಸಲಾಗಿದ್ದು (http://www.kpsc.kar.nic.in/lists), ಆಕ್ಷೇಪಣೆಗಳನ್ನು ಏಳು ದಿನದೊಳಗೆ ಸಲ್ಲಿಸಬಹುದು ಎಂದು ಆಯೋಗದ ಕಾರ್ಯದರ್ಶಿ ಜಿ.ಸತ್ಯವತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2017ರ ಡಿಸೆಂಬರ್‌ನಲ್ಲೇ ಮುಖ್ಯಪರೀಕ್ಷೆಯ ಫಲಿತಾಂಶ ಸಿದ್ಧವಾಗಿದ್ದರೂ, ಪ್ರಕಟಣೆ ವಿಳಂಬವಾಗಿದ್ದರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.41 ಉಪವಿಭಾಗಾಧಿಕಾರಿ ಹುದ್ದೆಗಳ ಜತೆಗೆ, 19 ಡಿವೈಎಸ್‌ಪಿ, 12 ಜಿಲ್ಲಾ ಖಜಾನೆ ಅಧಿಕಾರಿ, 8 ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ, 55 ಸಹಾಯಕ ವಾಣಿಜ್ಯ ತೆರಿಗೆ ಆಯುಕ್ತರು, 3 ಕಾರ್ಮಿಕ ಆಯುಕ್ತರು, 66 ಗ್ರೇಡ್‌ 2 ತಹಶೀಲ್ದಾರರು, 83 ವಾಣಿಜ್ಯ ತೆರಿಗೆ ಅಧಿಕಾರಿಗಳು, 5 ಅಬಕಾರಿ ಉಪ ಅಧೀಕ್ಷಕರು, 4 ಸಹಾಯಕ ಖಜಾನಾ ಅಧಿಕಾರಿಗಳು, 24 ಗ್ರೇಡ್‌ 1 ಮುಖ್ಯಾಧಿಕಾರಿ,25 ಸಹಕಾರ ಸಂಘಗಳ ಉಪನಿಬಂಧಕರು ಸಹಿತ ವಿವಿಧ ಹುದ್ದೆಗಳಿಗೆ ಆ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ.

₹ 10ಕ್ಕೆ ಕೂಲಿ ಮಾಡಿದ್ದೆ

‘ನನಗೆ ಮನೆಯೊಂದು ಬಿಟ್ಟು ಬೇರೆ ಏನೂ ಇರಲಿಲ್ಲ. ಅಪ್ಪ, ಅಮ್ಮ ಕೂಲಿ ಕೆಲಸ ಮಾಡುವವರು, ನಾನೂ ₹ 10ಕ್ಕೆ ಕೂಲಿಗೆ ಹೋಗುತ್ತಿದ್ದೆ. 40 ಕಿ.ಮೀ.ದೂರದ ಹಾವೇರಿಯ ಕಾಲೇಜಿಗೆ ಬಸ್ಸಲ್ಲಿ ಹೋಗಲು ದುಡ್ಡಿಲ್ಲದೆ ₹ 5 ಕೊಟ್ಟು ಮರಳು ಲಾರಿಯಲ್ಲಿ ಹೋಗುತ್ತಿದ್ದೆ..’

ಕೆಪಿಎಸ್‌ಸಿ ಡಿವೈಎಸ್‌ಪಿ ಹುದ್ದೆಯ ಆಯ್ಕೆ ಪಟ್ಟಿಯಲ್ಲಿ 17ನೇ ಸ್ಥಾನ ನಡೆದಿರುವ ಹಾವೇರಿ ಜಿಲ್ಲೆ ಹುಳ್ಯಾಳದ ದಾದಾಪೀರ್‌ ಹುಸೇನ್‌
ಸಾಬ್‌ ಮುಲ್ಲಾ, ಶಾಲಾ ಜೀವನದಕಷ್ಟ ಹೇಳಿಕೊಂಡರು. ಸದ್ಯ ಅವರು ವಿಧಾನಸೌಧದಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ.

ಲಾರಿ ಚಾಲಕ ಅಣ್ಣನ ತ್ಯಾಗ

‘ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನಲ್ಲಿ ಇದ್ದ ಎರಡು ಎಕರೆ ಜಮೀನಿನಲ್ಲಿ ಬೆಳೆ ಇಲ್ಲ, ಅಪ್ಪನದು ಕೂಲಿ ದುಡಿಮೆ. ಚಕ್ಕಂದಿನಲ್ಲೇ ಅಪ್ಪನನ್ನು ಕಳೆದುಕೊಂಡಿದ್ದೆ. ಅಣ್ಣನ ಲಾರಿಯಿಂದ ಬಂದ ಸಂಪಾದನೆಯೇ ನನ್ನ ಜೀವನದ ಹಾದಿ ತೋರಿಸಿದ್ದು. ಮಕ್ಕಳಿಲ್ಲದ ಅಣ್ಣ ನನ್ನನ್ನೇ ಮಗನೆಂದು ಭಾವಿಸಿ ಒಳ್ಳೆಯ ಶಿಕ್ಷಣ ಕೊಡಿಸಿದ. ಸದ್ಯ ಹುಬ್ಬಳ್ಳಿ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಎಸ್‌ಐ ಆಗಿದ್ದೇನೆ’ ಎಂದು ಉಪವಿಭಾಗಾಧಿಕಾರಿ ಆಯ್ಕೆ ಪಟ್ಟಿಯಲ್ಲಿ 30ನೇ ಸ್ಥಾನ ಪಡೆದಿರುವ ಶಲೂಮ್‌ ಹುಸೇನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.