ADVERTISEMENT

ಕೆಪಿಎಸ್‌ಸಿ ವಿರುದ್ಧ ಮಾಹಿತಿ ಆಯೋಗ ಮತ್ತೆ ಗರಂ

ಲೋಕಸೇವಾ ಆಯೋಗದ ನಡೆ ಬಗ್ಗೆ ಮುಖ್ಯ ಕಾರ್ಯದರ್ಶಿಗೆ ಪತ್ರ

​ಪ್ರಜಾವಾಣಿ ವಾರ್ತೆ
Published 5 ಜುಲೈ 2020, 9:12 IST
Last Updated 5 ಜುಲೈ 2020, 9:12 IST
ಕೆಪಿಎಸ್‌ಸಿ ಲೋಗೊ
ಕೆಪಿಎಸ್‌ಸಿ ಲೋಗೊ   

ಬೆಂಗಳೂರು: ಸುಪ್ರೀಂ ಕೋರ್ಟ್ ಆದೇಶ ಮರೆಮಾಚಿ ಉತ್ತರ ಪತ್ರಿಕೆ ನೀಡಲು ನಿರಾಕರಿಸುತ್ತಿರುವಕೆಪಿಎಸ್‌ಸಿ(ಕರ್ನಾಟಕ ಲೋಕಸೇವಾ ಆಯೋಗ) ವಿರುದ್ಧ ಮಾಹಿತಿ ಆಯೋಗ ಮತ್ತೊಮ್ಮೆ ಗರಂ ಆಗಿದೆ. ಮಾಹಿತಿ ಹಕ್ಕು ಕಾಯ್ದೆಯ ಸಮರ್ಪಕ ಅನುಷ್ಠಾನಕ್ಕೆ ಆದೇಶ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೂ ಶಿಫಾರಸು ಮಾಡಿದೆ.

2015ರ ಬ್ಯಾಚ್‌ನ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ ನಡೆದ ಮುಖ್ಯ ಪರೀಕ್ಷೆಯ ಅಭ್ಯರ್ಥಿಯಾಗಿದ್ದಶರಣಬಸಪ್ಪ ಪೂಜಾರಿ ಎಂಬುವರು ಉತ್ತರ ಪತ್ರಿಕೆಗಳ ದೃಢೀಕೃತ ಪ್ರತಿ ಕೋರಿದ್ದರು.

‘ಸುಪ್ರೀಂ ಕೋರ್ಟ್‌ 2018ರ ಜುಲೈನಲ್ಲಿ ನೀಡಿರುವ ಆದೇಶ ಮರೆಮಾಚಿ, ಅದೇ ವರ್ಷ ಫೆಬ್ರುವರಿಯಲ್ಲಿ ನೀಡಿರುವ ಆದೇಶವನ್ನೇ ಮುಂದಿಟ್ಟುಕೊಂಡು ಉತ್ತರ ಪತ್ರಿಕೆಯ ಮಾಹಿತಿ ನೀಡಲು ನಿರಾಕರಿಸಿ ಹಿಂಬರಹ ನೀಡಲಾಗಿದೆ. ಇದು ಏಕಪಕ್ಷೀಯ ನಿರ್ಧಾರವಾಗಿದೆ’ ಎಂದು ರಾಜ್ಯ ಮಾಹಿತಿ ಆಯುಕ್ತ ಕೆ.ಇ. ಕುಮಾರಸ್ವಾಮಿ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ADVERTISEMENT

‘ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕಿ ದಿವ್ಯಪ್ರಭು ಅವರನ್ನೇ ಮಾಹಿತಿ ಅಧಿಕಾರಿಯನ್ನಾಗಿನೇಮಕ ಮಾಡಬೇಕೆಂದು ಆಯೋಗ ಆದೇಶಿಸಿದೆ. ಇದನ್ನೂ ಕೆಪಿಎಸ್‌ಸಿ ಕಾರ್ಯದರ್ಶಿ ಪಾಲಿಸಿಲ್ಲ. ಮಾಹಿತಿ ಹಕ್ಕು ಕಾಯ್ದೆ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲದ ಕಿರಿಯ ಅಧಿಕಾರಿಯನ್ನು ಮಾಹಿತಿ ಅಧಿಕಾರಿಯಾಗಿಮುಂದುವರಿಸಲಾಗಿದೆ. ಆ ಮೂಲಕ ಮಾಹಿತಿ ಹಕ್ಕು ಕಾಯ್ದೆಯನ್ನು ವಿಫಲಗೊಳಿಸುವ ಪ್ರಯತ್ನವನ್ನು ಕೆಪಿಎಸ್‌ಸಿ ಮಾಡುತ್ತಿದೆ’ ಎಂದು ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಉತ್ತರ ಪತ್ರಿಕೆಯ ಪ್ರತಿ ನೀಡದ ದಿವ್ಯಪ್ರಭು ಅವರಿಗೆ ₹25 ಸಾವಿರ ದಂಡ ವಿಧಿಸಿ, ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಬೇಕಾಗುತ್ತದೆ’ ಎಂದು ಅವರು ಎಚ್ಚರಿಸಿದ್ದಾರೆ.

‘ಮಾಹಿತಿ ಹಕ್ಕು ಕಾಯ್ದೆ ಮತ್ತು ಆಯೋಗದ ಆದೇಶಗಳನ್ನು ಪಾಲಿಸುವ ಸಂಬಂಧ ಕೆಪಿಎಸ್‌ಸಿ ಕಾರ್ಯದರ್ಶಿಗೆ ಸೂಕ್ತ ನಿರ್ದೇಶನ ನೀಡಬೇಕು’ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರಿಗೆ ಶಿಫಾರಸು ಮಾಡಿದ್ದಾರೆ.

‘ಆರ್. ವಿನಯಕುಮಾರ್ ಎಂಬುವರು ಉತ್ತರ ಪತ್ರಿಕೆಯ ಪ್ರತಿ ಕೇಳಿದ್ದ ಪ್ರಕರಣದಲ್ಲೂ ಕೆಪಿಎಸ್‌ಸಿ ಇದೇ ರೀತಿಯ ಹಿಂಬರಹ ನೀಡಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರಾಜ್ಯ ಮಾಹಿತಿ ಆಯುಕ್ತ ಎನ್‌.ಪಿ. ರಮೇಶ್, ಕೂಡಲೇ ಮಾಹಿತಿ ಒದಗಿಸಬೇಕು ಮತ್ತುದಿವ್ಯಪ್ರಭು ಅವರನ್ನೇ ಮಾಹಿತಿ ಅಧಿಕಾರಿಯ್ನನಾಗಿ ನೇಮಕ ಮಾಡಬೇಕು’ ಎಂದು ಜೂನ್ 18ರಂದು ಆದೇಶ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.