
ಉದ್ಯೋಗ ಸೌಧ( ಸಾಂದರ್ಭಿಕ ಚಿತ್ರ)
ಬೆಂಗಳೂರು: ಗೆಜೆಟೆಡ್ ಪ್ರೊಬೇಷನರಿ 384 ಹುದ್ದೆಗಳ ಭರ್ತಿಗೆ ನಡೆದ ಮುಖ್ಯ ಪರೀಕ್ಷೆಯ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಗೌಪ್ಯತೆ ಕಾಪಾಡಲು ಕೆಪಿಎಸ್‌ಸಿ ಇದೇ ಮೊದಲ ಬಾರಿಗೆ ‘ಇಂಟರ್‌ನೆಟ್’ ಬದಲಿಗೆ ‘ಇಂಟ್ರಾನೆಟ್’ ಬಳಸುತ್ತಿದೆ. ಆ ಮೂಲಕ, ಅಭ್ಯರ್ಥಿಗಳು ಕಳ್ಳದಾರಿಯ ಮೂಲಕ ಅಂಕಗಳನ್ನು ಗಳಿಸಬಹುದೆಂಬ ವದಂತಿಗಳಿಗೆ ತೆರೆ ಎಳೆಯಲು ಮುಂದಾಗಿದೆ.
ಉತ್ತರ ಪತ್ರಿಕೆಗಳ ಡಿಜಿಟಲ್ ಮೌಲ್ಯಮಾಪನ ನಡೆಯುತ್ತಿದ್ದು, ಈ ಹಿಂದಿನ ವರ್ಷಗಳಲ್ಲಿ ಮೌಲ್ಯಮಾಪನ ವೇಳೆಯಲ್ಲಿ ಕಂಡುಬಂದಿದ್ದ ತಾಂತ್ರಿಕ ಲೋಪದೋಷಗಳನ್ನು ಪರಿಹರಿಸುವ ಕುರಿತು ಆಯೋಗದ ಸಭೆಯಲ್ಲಿ ಗಂಭೀರವಾಗಿ ಚರ್ಚಿಸಿದ ನಂತರ ಈ ಕ್ರಮ ತೆಗೆದುಕೊಳ್ಳಲಾಗಿದೆ. ‘ಇಂಟ್ರಾನೆಟ್’ ಬಳಕೆಯಿಂದ ಹೊರಗಿನ ಹಸ್ತಕ್ಷೇಪ ತಪ್ಪಿಸುವ ಜೊತೆಗೆ, ದತ್ತಾಂಶಗಳ ಸೋರಿಕೆ ತಡೆಯಲು ಸಾಧ್ಯವಿದೆ ಎಂದು ಕೆಪಿಎಸ್‌ಸಿ ಮೂಲಗಳು ತಿಳಿಸಿವೆ.
ಈ ಹಿಂದೆ ಆಯೋಗವು ಹೊರಗುತ್ತಿಗೆ ಆಧಾರದಲ್ಲಿ ಖಾಸಗಿ ಸಂಸ್ಥೆಯೊಂದರ ಒಡೆತನದಲ್ಲಿರುವ
ಹಾಗೂ ಕೆಪಿಎಸ್‌ಸಿ ಆವರಣದ ಹೊರಗಿರುವ ಸರ್ವರ್‌ಗಳನ್ನು ಅಭ್ಯರ್ಥಿ ಗಳ ಅಂಕ ಸಂಬಂಧಿತ ದತ್ತಾಂಶ ಸಂಗ್ರಹಿಸಿಡಲು ಬಳಸಿಕೊಳ್ಳುತ್ತಿತ್ತು. ಈ ವ್ಯವಸ್ಥೆಯನ್ನು ದುರುಪಯೋಗ ಮಾಡಿಕೊಂಡು ಅಂಕಗಳನ್ನು ತಿರುಚ ಲಾಗಿದೆ ಎಂದು ಆರೋಪಿಸಿ ಹಲವು ಅಭ್ಯರ್ಥಿಗಳು ಕೋರ್ಟ್ ಮೊರೆಹೋಗಿ ದ್ದರು. ಇಂತಹ ಅನುಮಾನಗಳನ್ನು ತಪ್ಪಿಸಲು ಮತ್ತು ಈ ಬಾರಿ ಯಾವುದೇ ವ್ಯತ್ಯಾಸಕ್ಕೆ ಅವಕಾಶ ಆಗಬಾರದೆಂದು ಆಯೋಗದ ಆವರಣದಲ್ಲಿ ಡಿಜಿಟಲ್ ಮೌಲ್ಯಮಾಪನ ನಡೆಸಿ ಅಂಕಗಳನ್ನು ‘ಇಂಟ್ರಾನೆಟ್’ ಬಳಸಿ ಸರ್ವರ್‌ನಲ್ಲಿ ನೇರವಾಗಿ ಸಂಗ್ರಹಿಸಲು ಕ್ರಮ ತೆಗೆದುಕೊಳ್ಳಲಾಗಿದೆ.
ಮೌಲ್ಯಮಾಪಕರು ಮೌಲ್ಯಮಾಪನ ಮಾಡಿ ಅಂಕಗಳನ್ನು ‘ಫ್ರೀಜ್’ ಮಾಡಿದ ನಂತರ ಮರು ಪರಿಶೀಲಿಸಲು ಅವಕಾಶ ಇರುವುದಿಲ್ಲ ಎಂದೂ ಮೂಲಗಳು ಹೇಳಿವೆ.
2023–24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಗ್ರೂಪ್ ‘ಎ’ ಮತ್ತು ಗ್ರೂಪ್ ‘ಬಿ’ ವೃಂದದ 384 ಹುದ್ದೆಗಳಿಗೆ ನೇಮಕಾತಿಗೆ ಮೇ 3, 5, 7 ಮತ್ತು 9ರಂದು ಕೆಪಿಎಸ್‌ಸಿ ಮುಖ್ಯ ಪರೀಕ್ಷೆ ನಡೆಸಿತ್ತು. ಮುಖ್ಯ ಪರೀಕ್ಷೆ ಬರೆದಿರುವ 5,760 ಅಭ್ಯರ್ಥಿಗಳ ಪೈಕಿ 1:3 ಅನುಪಾತದಲ್ಲಿ ಅಭ್ಯರ್ಥಿಗಳು ವ್ಯಕ್ತಿತ್ವ ಪರೀಕ್ಷೆಗೆ ಆಯ್ಕೆ ಆಗಲಿದ್ದಾರೆ. ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ನಿಷ್ಪಕ್ಷಪಾತ, ಪಾರದರ್ಶಕತೆ ಹಾಗೂ ಕಾರ್ಯಕ್ಷಮತೆ ಖಚಿತಪಡಿಸಿಕೊಳ್ಳಲು ಕೇಂದ್ರ ಲೋಕ ಸೇವಾ ಆಯೋಗದ (ಯುಪಿಎಸ್‌ಸಿ) ಮಾದರಿಯಲ್ಲಿ ತಾಂತ್ರಿಕ ಹಾಗೂ ಸಾಂಸ್ಥಿಕ ಸುಧಾರಣೆಗಳನ್ನು ಜಾರಿಗೆ ತರಲಾಗಿದೆ ಎಂದೂ ತಿಳಿಸಿವೆ.
ಮುಖ್ಯ ಪರೀಕ್ಷೆಗೆ ನಿಯೋಜನೆಯಾಗುವ ಮೌಲ್ಯಮಾಪಕರ ಬಯೊಮೆಟ್ರಿಕ್ ಮೊದಲೇ ಪಡೆದು
ಕೊಂಡು, ಮೌಲ್ಯಮಾಪನದ ದಿನ ಬಯೊಮೆಟ್ರಿಕ್ ಮೂಲಕ ಅವರ ಹಾಜರಾತಿ ಖಚಿತಪಡಿಸುವ ವ್ಯವಸ್ಥೆ ಜಾರಿಗೆ ತರಲಾಗಿದೆ. ಮೌಲ್ಯಮಾಪನದಲ್ಲಿ ಏಕರೂಪತೆ ಕಾಪಾಡುವ ಉದ್ದೇಶದಿಂದ ಪ್ರತಿ ಉತ್ತರಪತ್ರಿಕೆಯ ಮೌಲ್ಯಮಾಪನಕ್ಕೂ ಮೊದಲು ಮೌಲ್ಯಮಾಪನ ರೂಪುರೇಷೆ ಮತ್ತು ಮಾದರಿ ಉತ್ತರಗಳನ್ನು ಕಾರ್ಯಾಗಾರದ ಮೂಲಕ ಮೌಲ್ಯಮಾಪಕರಿಗೆ ವಿವರಿಸಲಾಗುತ್ತದೆ. ಮೌಲ್ಯಮಾಪನದಲ್ಲಿ ಹೆಚ್ಚಿನ ಪಾರದರ್ಶಕತೆ ಮೂಲಕ ಅಭ್ಯರ್ಥಿಗಳಿಗೆ ಯಾವುದೇ ರೀತಿಯಲ್ಲೂ ಅನ್ಯಾಯ ಆಗದಂತೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದೂ ಮೂಲಗಳು ತಿಳಿಸಿವೆ.
ಏನಿದು ‘ಇಂಟ್ರಾನೆಟ್’
‘ಇಂಟರ್‌ನೆಟ್ ಸಾರ್ವಜನಿಕವಾಗಿದ್ದರೆ, ಇಂಟ್ರಾನೆಟ್ ಖಾಸಗಿಯಾಗಿದೆ. ಇದು ಒಂದು ನಿರ್ದಿಷ್ಟ ಸಂಸ್ಥೆಯ ಸದಸ್ಯರಿಗೆ ಮಾತ್ರ ಸೀಮಿತವಾದ ಖಾಸಗಿ ನೆಟ್‌ವರ್ಕ್. ಸುರಕ್ಷಿತವಾಗಿ ಮಾಹಿತಿ ಹಂಚಿಕೊಳ್ಳಲು, ಆಂತರಿಕ ಸಂವಹನ, ಸಹಯೋಗ ಮತ್ತು ದಾಖಲಾತಿ ನಿರ್ವಹಣೆಗೆ ಬಳಸುವ ವೆಬ್ ತಂತ್ರಜ್ಞಾನ ಆಧಾರಿತ ವ್ಯವಸ್ಥೆ. ಇಂಟರ್ ನೆಟ್‌ನಂತೆಯೇ ಕಾರ್ಯನಿರ್ವಹಿಸುವ ಇದು, ಸಂಸ್ಥೆಯ ಹೊರಗಿನವರಿಗೆ ಪ್ರವೇಶಕ್ಕೆ ಅವಕಾಶ ಕೊಡುವುದಿಲ್ಲ ಮತ್ತು ದತ್ತಾಂಶಗಳನ್ನು ಆಂತರಿಕವಾಗಿ ಸಂರಕ್ಷಿಸಿಡಲು ಸಹಾಯ ಮಾಡುತ್ತದೆ’ ಎಂದು ಕೆಪಿಎಸ್‌ಸಿ ಮೂಲಗಳು ತಿಳಿಸಿವೆ.
2014ರ ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆಯಲ್ಲಿ (464 ಹುದ್ದೆಗಳು) ಮೊದಲ ಬಾರಿ ಡಿಜಿಟಲ್ ಮೌಲ್ಯ ಮಾಪನವನ್ನು ಕೆಪಿಎಸ್‌ಸಿ ಪರಿಚಯಿಸಿತ್ತು. 2015 (428 ಹುದ್ದೆ) ಮತ್ತು 2017–18ನೇ (106 ಹುದ್ದೆ) ಸಾಲಿನಲ್ಲೂ ಡಿಜಿಟಲ್ ಮೌಲ್ಯಮಾಪನ ನಡೆದಿತ್ತು. ಹೊರಗುತ್ತಿಗೆ ಸಂಸ್ಥೆ ಇದನ್ನು ನಿರ್ವಹಿಸಿದೆ.
ಜನವರಿ ಕೊನೆಯಲ್ಲಿ ‘ವ್ಯಕ್ತಿತ್ವ ಪರೀಕ್ಷೆ’?
ಸರ್ಕಾರಿ ಹುದ್ದೆಗಳಲ್ಲಿ ಶೇ 56ರಷ್ಟು ಮೀಸಲಾತಿಯನ್ನು ಪ್ರಶ್ನಿಸಿ ಹಲವು ಅಭ್ಯರ್ಥಿಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ನೇಮಕಾತಿ ಅಧಿಸೂಚನೆ ಹೊರಡಿಸಿರುವ ಗೆಜೆಟೆಡ್ ಪ್ರೊಬೇಷನರ್ಸ್ ಮತ್ತು ಇತರ ಇಲಾಖೆಗಳ ಹುದ್ದೆಗಳಿಗೆ ಶೇ 56ರ ಮೀಸಲಾತಿ ಅನ್ವಯಿಸಲು ಸರ್ಕಾರದ ವತಿಯಿಂದ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಲಾಗಿದೆ. ಈಗಾಗಲೇ ಅಧಿಸೂಚನೆ ಹೊರಡಿಸಿರುವ ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ನಡೆಸಲು ಹೈಕೋರ್ಟ್ ಷರತ್ತುಬದ್ಧ ಅನುಮತಿ ನೀಡಿರುವುದರಿಂದ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಪೂರ್ಣಗೊಳಿಸಲು ಅಡೆತಡೆಗಳಿಲ್ಲ. ಮೌಲ್ಯಮಾಪನ ಕಾರ್ಯವು ಶೀಘ್ರದಲ್ಲಿ ಪೂರ್ಣಗೊಳ್ಳಲಿದ್ದು, ಜನವರಿ ತಿಂಗಳ ಕೊನೆಯ ವಾರದಿಂದ ವ್ಯಕ್ತಿತ್ವ ಪರೀಕ್ಷೆ (ಸಂದರ್ಶನ) ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಕೆಪಿಎಸ್‌ಸಿ ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.