ADVERTISEMENT

ಗೆಜೆಟೆಡ್‌ ಪ್ರೊಬೇಷನರ್‌: ತೊಡಕುಗಳ ಮಧ್ಯೆ ಮರುಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2024, 23:30 IST
Last Updated 29 ಡಿಸೆಂಬರ್ 2024, 23:30 IST
ಕೆಪಿಎಸ್‌ಸಿ
ಕೆಪಿಎಸ್‌ಸಿ    

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ)384 ಗೆಜೆಟೆಡ್‌ ಪ್ರೊಬೇಷನರ್‌ ಹುದ್ದೆಗಳ ನೇಮಕಾತಿಗಾಗಿ ಭಾನುವಾರ ಆಯೋಜಿ ಸಿದ್ದ ಪೂರ್ವಭಾವಿ ಪರೀಕ್ಷೆಯು ಬಹುತೇಕ ಸುಗಮವಾಗಿ ನಡೆದಿದೆ. ಆದರೆ ಪ್ರಶ್ನೆಪತ್ರಿಕೆಗಳಲ್ಲಿ ಕೆಲವು ದೋಷಗಳು ಉಳಿದ ಬಗ್ಗೆ ಮತ್ತು ತಾಂತ್ರಿಕ ಸಮಸ್ಯೆಗಳ ಬಗ್ಗೆ ಅಭ್ಯರ್ಥಿಗಳಿಂದ ಮತ್ತೆ ಆಕ್ಷೇಪ ವ್ಯಕ್ತವಾಗಿದೆ. 

ಈ ಹುದ್ದೆಗಳ ನೇಮಕಾತಿಗಾಗಿ ಇದೇ ಆಗಸ್ಟ್‌ 27ರಂದು ಪೂರ್ವಭಾವಿ ಪರೀಕ್ಷೆ ನಡೆಸಲಾಗಿತ್ತು. ಕನ್ನಡ ಪ್ರಶ್ನೆ ಪತ್ರಿಕೆಯ 33 ಪ್ರಶ್ನೆಗಳ ಭಾಷಾಂತರದಲ್ಲಿ ದೋಷಗಳು ಉಳಿದಿದ್ದವು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾದ ಕಾರಣ ಆಯೋಗವು ಪರೀಕ್ಷೆಯನ್ನು ರದ್ದುಪಡಿಸಿತ್ತು. ಎರಡನೇ ಬಾರಿಗೆ ಪೂರ್ವಭಾವಿ ಪರೀಕ್ಷೆಯನ್ನು ಭಾನುವಾರ ನಡೆಸಿತು.

‘ಪರೀಕ್ಷೆ ಆಯೋಜನೆ ಮತ್ತು ಪ್ರಶ್ನೆಪತ್ರಿಕೆಗಳು ಉತ್ತಮವಾಗಿದ್ದವು. ಒಂದೆರಡು ದೋಷಗಳು ಹೊರತು
ಪಡಿಸಿದರೆ, ಮೊದಲ ಪತ್ರಿಕೆ ಸರಳವಾಗಿತ್ತು’

ADVERTISEMENT

ಈ ಹಿಂದಿನಂತೆ ಸಂಬಂಧವಿಲ್ಲದ ಪ್ರಶ್ನೆಗಳನ್ನು ಕೇಳಿರಲಿಲ್ಲ. ಸರಿಯಾಗಿ ಸಿದ್ಧತೆ ಮಾಡಿಕೊಂಡಿದ್ದವರು ಸುಲಭವಾಗಿ ಉತ್ತರಿಸಬಹುದಾಗಿತ್ತು’ ಎಂದು ಅಭ್ಯರ್ಥಿಗಳು ಹೇಳಿದರು.

‘ಎರಡನೇ ಪ್ರಶ್ನೆಪತ್ರಿಕೆಯೂ ಉತ್ತಮವಾಗಿತ್ತು. ಆದರೆ ಸಂಕೀರ್ಣವಾಗಿತ್ತು. ಕೆಎಎಸ್‌ ಹುದ್ದೆಗಳಿಗೆ ಈವರೆಗೆ ಕೇಳಲಾದ ಪ್ರಶ್ನೆಗಳಿಗಿಂತ ಸ್ವಲ್ಪ ಕ್ಲಿಷ್ಟವಾದ ಪ್ರಶ್ನೆಗಳನ್ನು ಕೇಳಲಾಗಿತ್ತು’ ಎಂದು ವಿವರಿಸಿದರು.

ಭಾನುವಾರದ ಪರೀಕ್ಷೆಯನ್ನು ವಿವಿಧ ಜಿಲ್ಲಾ ಕೇಂದ್ರಗಳ 214 ಸರ್ಕಾರಿ, 189 ಅನುದಾನಿತ ಹಾಗೂ 161 ಖಾಸಗಿ ಶಾಲಾ–ಕಾಲೇಜುಗಳಲ್ಲಿ ನಡೆಸಲಾಯಿತು. ಎಲ್ಲೆಡೆ ಯಾವುದೇ ತೊಂದರೆ ಇಲ್ಲದೆ ಪರೀಕ್ಷೆ ನಡೆದಿದ್ದು, ಒಂದೆರಡು ಕೇಂದ್ರಗಳಲ್ಲಷ್ಟೇ ತಾಂತ್ರಿಕ ಸಮಸ್ಯೆ ಎದುರಾಗಿದೆ. ಅದನ್ನು ತಕ್ಷಣವೇ ಸರಿಪಡಿಸಿ ಪರೀಕ್ಷೆ ನಡೆಸಲಾಯಿತು ಎಂದು ಮೂಲಗಳು ಮಾಹಿತಿ ನೀಡಿವೆ.

ಇಂಗ್ಲಿಷ್‌ ಪ್ರಶ್ನೆಗಳು

ಭಾಷಾಂತರ ಸಮಸ್ಯೆ

‘ಕನ್ನಡ ಪ್ರಶ್ನೆಪತ್ರಿಕೆಯಲ್ಲಿ 4–5 ಭಾಷಾಂತರದ ಸಮಸ್ಯೆಗಳು ಇದ್ದವು. ಭಾಷಾಂತರಕ್ಕೆ ‘ಗೂಗಲ್ ಟ್ರಾನ್ಸ್‌ಲೇಟರ್‌’ ಬಳಸಿರಬಹುದು’ ಎಂದು ಅಭ್ಯರ್ಥಿಯೊಬ್ಬರು ಶಂಕಿಸಿದರು. ತಪ್ಪಾದ ಕನ್ನಡ ಭಾಷಾಂತರದ ಉದಾಹರಣೆ...

* ‘ಲೋಕಸಭೆಯು ಎರಡನೇ ಬಾರಿ ವಿಧೇಯಕವನ್ನು ಮತ್ತು ಅದಕ್ಕೆ ವಿರುದ್ಧವಾಗಿ ಜಾರಿ ಮಾಡುವ ಮೂಲಕ
ರಾಜ್ಯಸಭೆಯನ್ನು ಆಧ್ಯಾರೋಹಿ ಸಲಾಗದು ಮತ್ತು ಆದೇಶ ರಾಜ್ಯಸಭೇವೆಂದ ವಿಷಯ’.

* ‘ವಿಧಾನಸಭೆಯು ಎರಡನೇ ಬಾರಿ ಮತ್ತು ಅದಕ್ಕೆ ವಿರುದ್ದ ವಾಗಿ ವಿಧೇಯಕವನ್ನು ಜಾರಿ ಮಾಡುವ ಮೂಲಕ ವಿಧಾನ ಪರಿಷತ್ತನ್ನು ಆಧ್ಯಾರೋಹಿಸಬಹುದು ಮತ್ತು ವೀಪರ್ಯ ಉಂಟಾಗುತ್ತಿಲ್ಲ’.

ಮತ್ತೊಂದು ಪ್ರಶ್ನೆಯಲ್ಲಿ ಇಂಗ್ಲಿಷ್‌ನ ‘ಇನ್‌ಕರೆಕ್ಟ್‌’ ಎಂಬುದನ್ನು ಕನ್ನಡಕ್ಕೆ ‘ತಪ್ಪದ’ ಎಂದು ಭಾಷಾಂತರ ಮಾಡಲಾಗಿದೆ.

45 ನಿಮಿಷ ತಡ

ಕೋಲಾರ ಮತ್ತು ರಾಮನಗರದ ಒಂದೊಂದು ಕೇಂದ್ರಗಳಲ್ಲಿ ಅಭ್ಯರ್ಥಿಗಳ ಪ್ರವೇಶಪತ್ರದ ಸಂಖ್ಯೆ ಮತ್ತು ಅವರಿಗೆ ನೀಡಲಾದ ಒಎಂಆರ್‌ ಶೀಟ್‌ನ ಸಂಖ್ಯೆ ಹೊಂದಾಣಿಕೆಯಾಗದೆ ಸಮಸ್ಯೆ ಎದುರಾಗಿತ್ತು. ಕೋಲಾರದಲ್ಲಿ ಕೆಲ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದ ಸಿಬ್ಬಂದಿ ಜತೆಗೆ ಈ ಸಂಬಂಧ ವಾಗ್ವಾದ ನಡೆಸಿದರು. ನಂತರ ಸಮಸ್ಯೆಯನ್ನು ಸರಿಪಡಿಸಿ ಒಂದು ಗಂಟೆಯಷ್ಟು ತಡವಾಗಿ ಪರೀಕ್ಷೆ ನಡೆಸಲಾಯಿತು ಎಂದು ಮೂಲಗಳು ತಿಳಿಸಿವೆ. ರಾಮನಗರದ ಒಂದು ಪರೀಕ್ಷಾ ಕೇಂದ್ರದಲ್ಲೂ ಇದೇ ರೀತಿಯ ತಾಂತ್ರಿಕ ಸಮಸ್ಯೆ ಎದುರಾಗಿತ್ತು. 160 ಅಭ್ಯರ್ಥಿಗಳು ಈ ಸಮಸ್ಯೆ ಎದುರಿಸಿದರು. ಅದನ್ನು ಸರಿಪಡಿಸಿ ಪರೀಕ್ಷೆ ಆರಂಭಿಸುವಷ್ಟರಲ್ಲಿ 45 ನಿಮಿಷ ತಡವಾಗಿತ್ತು. ಎರಡೂ ಕಡೆ ಎಷ್ಟು ತಡವಾಯಿತೋ ಅಷ್ಟು ಸಮಯವನ್ನು ಅಭ್ಯರ್ಥಿಗಳಿಗೆ ಹೆಚ್ಚುವರಿಯಾಗಿ ನೀಡಲಾಯಿತು ಎಂದು ಮೂಲಗಳು ಮಾಹಿತಿ ನೀಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.