ADVERTISEMENT

ಕೆಪಿಎಸ್‌ಸಿ | 2011ರ ಸಾಲಿನ ಆಯ್ಕೆ ಪಟ್ಟಿ: ‘362’ಕ್ಕೆ ಮತ್ತೆ ಮರುಜೀವ ಯತ್ನ!

ಸದನದಲ್ಲಿ ಪ್ರಸ್ತಾಪಿಸಲು ಸಿದ್ಧತೆ

ರಾಜೇಶ್ ರೈ ಚಟ್ಲ
Published 1 ಮಾರ್ಚ್ 2020, 20:14 IST
Last Updated 1 ಮಾರ್ಚ್ 2020, 20:14 IST
   

ಬೆಂಗಳೂರು: ಭಾರಿ ಅಕ್ರಮ ನಡೆದಿದೆ ಎಂಬ ಕಾರಣಕ್ಕೆ 2011ನೇ ಸಾಲಿನ 362 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ಆಯ್ಕೆ ಪಟ್ಟಿ ರದ್ದುಪಡಿಸಿದ ವಿಚಾರದಲ್ಲಿ ‘ಸಂವಿಧಾನದ ಅನುಚ್ಛೇದ 323 (2)ರ ಉಲ್ಲಂಘನೆ ಆಗಿದೆ’ ಎಂಬ ಕಾರಣ ಮುಂದಿಟ್ಟು, ಈ ಪಟ್ಟಿಗೆ ಮರುಜೀವ ನೀಡಲು ಮತ್ತೆ ತೆರೆಮರೆಯ ಕಸರತ್ತು ನಡೆದಿದೆ.

ಅಕ್ರಮ ನಡೆದಿರುವುದು ಸಿಐಡಿ ವಿಚಾರಣೆಯಲ್ಲಿ ಸಾಬೀತಾದ ಕಾರಣ ರಾಜ್ಯ ಸರ್ಕಾರ ಈ ಸಾಲಿನ ನೇಮಕಾತಿ ಅಧಿಸೂಚನೆಯನ್ನು ಹಿಂಪಡೆದಿತ್ತು. ಆದರೆ, ಆಯ್ಕೆಯಾದ ಅಭ್ಯರ್ಥಿಗಳ ಒತ್ತಡಕ್ಕೆ ಮಣಿದಿರುವ ಆಡಳಿತ ಮತ್ತು ವಿರೋಧ ಪಕ್ಷಗಳ ಕೆಲವು ಶಾಸಕರು ಈ ವಿಷಯವನ್ನು ವಿಧಾನಮಂಡಲದ ಅಧಿವೇಶನದಲ್ಲಿ ಪ್ರಸ್ತಾಪಿಸಲು ಮುಂದಾಗಿದ್ದಾರೆ.

2011ರ ಸಾಲಿನ ಹುದ್ದೆಗಳ ನೇಮಕಾತಿ ವಿಳಂಬ, ಕೆಎಟಿ ಆದೇಶ, ಸಚಿವ ಸಂಪುಟ ಸಭೆ ನಿರ್ಣಯ, ಹೈಕೋರ್ಟ್‌ನ ತೀರ್ಪಿಗೆ ಅನುಸಾರವಾಗಿ ಅಡ್ವೊಕೇಟ್‌ ಜನರಲ್‌ (ಎ.ಜಿ) ನೀಡಿರುವ ಅಭಿಪ್ರಾಯಗಳ ದಾಖಲೆಗಳ ಅನುಸಾರ ಈ ಪ್ರಕರಣದಲ್ಲಿ ಸಂವಿಧಾನದ ಅನುಚ್ಛೇದ 323 (2) ಉಲ್ಲಂಘನೆ ಆಗಿರುವ ಬಗ್ಗೆ ಶಾಸಕರಾದ ಕಾಂಗ್ರೆಸ್ಸಿನ ಎಚ್‌.ಕೆ. ಪಾಟೀಲ, ಬಿಜೆಪಿಯ ಆರಗ ಜ್ಞಾನೇಂದ್ರ, ನೆಹರೂ ಓಲೇಕಾರ, ರಘುಪತಿ ಭಟ್‌, ಲಾಲಾಜಿ ಆರ್. ಮೆಂಡನ್ ಮತ್ತಿತರರುಮುಖ್ಯಮಂತ್ರಿ ಅವರ ಗಮನ ಸೆಳೆಯುವ ಸೂಚನೆ ಮಂಡಿಸಿದ್ದಾರೆ.

ADVERTISEMENT

362 ಹುದ್ದೆಗಳ ಭರ್ತಿಗೆ 2014ರ ಮಾರ್ಚ್‌ 21ರಂದು ಕೆಪಿಎಸ್‌ಸಿ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿತ್ತು. ಆದರೆ, ಸರ್ಕಾರ ಅಧಿಸೂಚನೆಯನ್ನು 2014ರ ಆ. 14ರಂದು ರದ್ದುಗೊಳಿಸಿತ್ತು. ಈ ಕ್ರಮವನ್ನು ಪ್ರಶ್ನಿಸಿ ಆಯ್ಕೆಯಾದ ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿ ಪರಿಗಣಿಸಿ ಕೆಎಟಿ 2016ರ ಅ. 19ರಂದು ಸರ್ಕಾರದ ಆದೇಶವನ್ನು ವಜಾಗೊಳಿಸಿ, ಆಯ್ಕೆಯಾದವರಿಗೆ ನೇಮಕಾತಿ ಆದೇಶ ನೀಡುವಂತೆ ನಿರ್ದೇಶಿಸಿತ್ತು. ಇದನ್ನು ಪ್ರಶ್ನಿಸಿ ವಂಚಿತರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ಹೈಕೋರ್ಟ್‌, 2017 ಮಾರ್ಚ್‌ 9ರಂದು ನೇಮಕಾತಿಯನ್ನು ರದ್ದುಪಡಿಸಿತ್ತು.

ಕೆಲವು ಅಭ್ಯರ್ಥಿಗಳು ಹೈಕೋರ್ಟ್‌ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಆದರೆ, ಹೈಕೋರ್ಟ್‌ ನೀಡಿದ್ದ ತೀರ್ಪನ್ನೇ ಎತ್ತಿ ಹಿಡಿದಿದ್ದ ಸುಪ್ರೀಂ ಕೋರ್ಟ್‌, ಲಿಖಿತ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆಯೇ ಎಂಬ ಬಗ್ಗೆ ಪರಿಶೀಲಿಸಿ ತೀರ್ಪು ನೀಡುವಂತೆ ಆದೇಶಿಸಿತ್ತು. ಲಿಖಿತ ಪರೀಕ್ಷೆಯ ಉತ್ತರಪತ್ರಿಕೆಗಳ ಮರು ಮೌಲ್ಯಮಾಪನ ಸಾಧ್ಯವಿಲ್ಲವೆಂದು ಅಭಿಪ್ರಾಯಪಟ್ಟಿದ್ದ ಹೈಕೋರ್ಟ್‌ ಈ ಸಂಬಂಧ ಸಲ್ಲಿಕೆಯಾಗಿದ್ದ ಎಲ್ಲ ಮಧ್ಯಂತರ ಅರ್ಜಿಗಳನ್ನು 2019ರ ಜುಲೈ 13ರಂದು ವಜಾಗೊಳಿಸಿತ್ತು. ಅಂದಿನ ಅಡ್ವೊಕೇಟ್‌ ಜನರಲ್‌ ಅವರ ಸಲಹೆಯಂತೆ ಸುಪ್ರೀಂ ಕೋರ್ಟ್‌ಗೆ ಸರ್ಕಾರ ಸಲ್ಲಿಸಿದ್ದ ವಿಶೇಷ ಮೇಲ್ಮನವಿಯೂ ಅದೇ ಆಗಸ್ಟ್‌ 9ರಂದು ವಜಾಗೊಂಡಿತ್ತು.

ಈ ಬೆಳವಣಿಗೆಗಳಿಂದ ಬೇಸತ್ತಿರುವ ಉದ್ಯೋಗಾಕಾಂಕ್ಷಿಗಳು ‘362 ಹುದ್ದೆಗಳ ಭರ್ತಿ ಕುರಿತು ಸರ್ಕಾರ ತಕ್ಷಣ ಕ್ರಮ ತೆಗದುಕೊಳ್ಳಬೇಕು.ವಯೋಮಿತಿ ಸಡಿಲಿಸಿ, ಆ ಸಾಲಿನಲ್ಲಿ ಪರೀಕ್ಷೆ ಬರೆದವರಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.

ಏನಿದು ‘323 (2)ರ ಉಲ್ಲಂಘನೆ’
ಸಂವಿಧಾನದ ಅನುಚ್ಛೇದ 323 (2)ರ ಪ್ರಕಾರ, ರಾಜ್ಯ ಸರ್ಕಾರ ಅಧಿಸೂಚನೆ ರದ್ದುಪಡಿಸಿದರೆ ಅಥವಾ ಹಿಂಪಡೆದರೆ ಆ ವಿಷಯವನ್ನು ಕೆಪಿಎಸ್‌ಸಿ ತನ್ನ ವಾರ್ಷಿಕ ವರದಿಯಲ್ಲಿ ಪ್ರಕಟಿಸಬೇಕು. ಆ ವರದಿಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ವಿಧಾನ ಮಂಡಲದ ಎರಡೂ ಸದನಗಳಲ್ಲಿ ಮಂಡಿಸುವುದು ಕಡ್ಡಾಯ. ಆದರೆ, 2011ನೇ ಸಾಲಿನ ಕೆಪಿಎಸ್‌ಸಿ ವಾರ್ಷಿಕ ವರದಿಯನ್ನುಸದನದಲ್ಲಿ ಮಂಡಿಸುವ ವೇಳೆ ರೀತಿ–ರಿವಾಜು ಪಾಲನೆ ಆಗಿಲ್ಲ. ಇದರಿಂದ ಶಾಸಕರ ಹಕ್ಕುಚ್ಯುತಿ ಆಗಿದೆ ಎಂದು ಕೆಲವರು ಶಾಸಕರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಅಭಿಪ್ರಾಯ ನೀಡುವಂತೆ ಎ.ಜಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ ಎಂದು ಡಿಪಿಎಆರ್‌ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.