ADVERTISEMENT

ಕೆಪಿಸಿಎಲ್ 404 ಹುದ್ದೆ: ಸರ್ಕಾರದ ಮೇಲ್ಮನವಿ ವಜಾ; ಮರು ಪರೀಕ್ಷೆ ‘ಸುಪ್ರೀಂ’ ಆದೇಶ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 14:36 IST
Last Updated 23 ಸೆಪ್ಟೆಂಬರ್ 2025, 14:36 IST
   

ಬೆಂಗಳೂರು: ಕರ್ನಾಟಕ ವಿದ್ಯುತ್‌ ನಿಗಮ ನಿಯಮಿತದ (ಕೆಪಿಸಿಎಲ್‌) 404 ಸಹಾಯಕ ಎಂಜಿನಿಯರ್‌ (ಎ.ಇ) ಮತ್ತು ಕಿರಿಯ ಎಂಜಿನಿಯರ್‌ (ಜೆ.ಇ) ನೇಮಕಾತಿಗೆ ನಾಲ್ಕು ತಿಂಗಳ ಒಳಗೆ ಹೊಸತಾಗಿ ಪರೀಕ್ಷೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಆದೇಶಿಸಿದೆ.

ಈ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ 2024ರ ಮೇ 8ರಂದು ಆಯ್ಕೆ ಪಟ್ಟಿ ಪ್ರಕಟಿಸಿತ್ತು. ಇದನ್ನು ಪ್ರಶ್ನಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌ನ ವಿಭಾಗೀಯ ಪೀಠ, ಆಯ್ಕೆ ಪಟ್ಟಿಯನ್ನು ರದ್ದುಗೊಳಿಸಿ ಮೇ 28ರಂದು ತೀರ್ಪು ನೀಡಿತ್ತು. ಅದನ್ನು ಪ್ರಶ್ನಿಸಿ, ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಈ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ವಜಾ ಮಾಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕಾರ್ಯನಿರ್ವಾಹಕ ನಿರ್ದೇಶಕ ಎಚ್‌. ಪ್ರಸನ್ನ, ‘ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನದ ಮಾಹಿತಿ ಬಂದಿದೆ. ಈ ಹುದ್ದೆಗಳ ನೇಮಕಾತಿಗೆ ನಾವು (ಕೆಇಎ) ಪರೀಕ್ಷೆ ನಡೆಸಿದ್ದೆವು. ಮರು ಪರೀಕ್ಷೆ ನಡೆಸಲು ಇಂಧನ ಇಲಾಖೆ ನಮಗೆ ಸೂಚಿಸಬಹುದು ಅಥವಾ ಕೆಪಿಎಸ್‌ಸಿ ಮೂಲಕ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಬಹುದು’ ಎಂದರು.

ADVERTISEMENT

ನೇಮಕಾತಿ ಅಧಿಸೂಚನೆಯಲ್ಲಿ ಇಲ್ಲದಿದ್ದರೂ ಉತ್ತರ ಪತ್ರಿಕೆಗಳ ಮೌಲ್ಯಮಾಪನದ ವೇಳೆಯಲ್ಲಿ ಋಣಾತ್ಮಕ ಅಂಕ ಪದ್ಧತಿ ಅನುಸರಿಸಿದ್ದನ್ನು ಪ್ರಶ್ನಿಸಿ ಕೆಲವರು ಹೈಕೋರ್ಟ್‌ ಮೊರೆಹೋಗಿದ್ದರು. ಈ ಅರ್ಜಿಯನ್ನು ಹೈಕೋರ್ಟ್‌ ಏಕಸದಸ್ಯ ನ್ಯಾಯಪೀಠ ತಿರಸ್ಕರಿಸಿತ್ತು. ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಎನ್‌. ನವೀನ್‌ ಕುಮಾರ್‌ ಸೇರಿದಂತೆ ನಾಲ್ವರು ಸಲ್ಲಿಸಿದ್ದ ರಿಟ್‌ ಮೇಲ್ಮನವಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ವಿಭಾಗೀಯ ಪೀಠ, ನೇಮಕಾತಿ ‌ಪಟ್ಟಿ ರದ್ದು‍ಪಡಿಸಿ, ಶೀಘ್ರವೇ ಮರು ಪರೀಕ್ಷೆ ನಡೆಸುವಂತೆ ಕೆಪಿಸಿಎಲ್‌ ಮತ್ತು ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು.

ಏನಿದು ಪ್ರಕರಣ?

ಖಾಲಿ ಇದ್ದ ಸಿವಿಲ್, ಎಲೆಕ್ಟ್ರಿಕಲ್‌, ಎಲೆಕ್ಟ್ರಾನಿಕ್ಸ್‌, ಆಟೊಮೊಬೈಲ್‌, ಮೆಕ್ಯಾನಿಕಲ್‌ ವಿಭಾಗಗಳ ಸಹಾಯಕ ಎಂಜಿನಿಯರ್‌, ಕಿರಿಯ ಎಂಜಿನಿಯರ್‌ ಹಾಗೂ ಕೆಮಿಸ್ಟ್, ರಾಸಾಯನಿಕ ಮೇಲ್ವಿಚಾರಕರ ಹುದ್ದೆಗಳ ಭರ್ತಿಗೆ 2018ರಲ್ಲಿ ಕೆಪಿಸಿಎಲ್‌ ನಡೆಸಿದ್ದ ಪರೀಕ್ಷೆಯಲ್ಲಿನ ಅಕ್ರಮ, ಪ್ರಶ್ನೆಪತ್ರಿಕೆ ಸೋರಿಕೆ ಮೊದಲಾದ ವಿಚಾರಕ್ಕೆ ಕೋರ್ಟ್ ರದ್ದುಪಡಿಸಿತ್ತು. ಕೋರ್ಟ್‌ ಆದೇಶದಂತೆ ಮರು ಪರೀಕ್ಷೆ ನಡೆಸುವುದಾಗಿ 2018ರ ಜೂನ್‌ನಲ್ಲೇ ಅಭ್ಯರ್ಥಿಗಳಿಗೆ ಭರವಸೆ ನೀಡಿದ್ದ ಕೆಪಿಎಸಿಎಲ್‌, ಆರು ವರ್ಷಗಳ ಬಳಿಕ 2024ರ ಫೆಬ್ರುವರಿಯಲ್ಲಿ ಕೆಇಎ ಮೂಲಕ ಒಟ್ಟು 622 ಹುದ್ದೆಗಳ ನೇಮಕಾತಿಗೆ ಮರು ಪರೀಕ್ಷೆ ನಡೆಸಿತ್ತು. ಈ ಪೈಕಿ, 404 ಸಹಾಯಕ ಎಂಜಿನಿಯರ್‌ (ಎ.ಇ) ಮತ್ತು ಕಿರಿಯ ಎಂಜಿನಿಯರ್‌ (ಜೆ.ಇ) ನೇಮಕಾತಿ ಪಟ್ಟಿಯನ್ನು ಹೈಕೋರ್ಟ್‌
ರದ್ದುಪಡಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.