ADVERTISEMENT

ಕೃಷ್ಣಾರೆಡ್ಡಿಗಾಗಿ ಪ್ರತ್ಯೇಕ ಪ್ರಾಧಿಕಾರ: ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2023, 23:30 IST
Last Updated 15 ಆಗಸ್ಟ್ 2023, 23:30 IST
ಕೃಷ್ಣಾರೆಡ್ಡಿ
ಕೃಷ್ಣಾರೆಡ್ಡಿ   

ಬೆಂಗಳೂರು: ರಸ್ತೆಗಳ ನಿರ್ಮಾಣ, ಅಭಿವೃದ್ಧಿ, ನಿರ್ವಹಣೆಗಾಗಿ ಲೋಕೋಪಯೋಗಿ ಇಲಾಖೆ ಸೇರಿ ನಾಲ್ಕು ಸಾಂಸ್ಥಿಕ ವ್ಯವಸ್ಥೆಗಳಿದ್ದರೂ ಒಬ್ಬ ನಿವೃತ್ತ ಕಾರ್ಯದರ್ಶಿಯ ಹಿತಕ್ಕಾಗಿ ಪ್ರಾಧಿಕಾರ ರಚಿಸಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

‘ಗ್ಯಾರಂಟಿ’ ಯೋಜನೆಗಳಿಗಾಗಿ ಹೆಚ್ಚಿನ ಅನುದಾನ ಬೇಕಾಗಿರುವುದರಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡುವುದು ಕಷ್ಟ’ ಎಂದು ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆರ್ಥಿಕ ಪರಿಸ್ಥಿತಿ ಸಂಕಷ್ಟದಲ್ಲಿರುವಾಗ, ಇರುವ ನಿಗಮ, ಸಂಸ್ಥೆಗಳ ಕೆಲಸವನ್ನೇ ತಾತ್ಕಾಲಿಕವಾಗಿಯಾದರೂ ಸ್ಥಗಿತಗೊಳಿಸಬೇಕು. ಅದರ ಬದಲು, ಲೋಕೋಪಯೋಗಿ ಇಲಾಖೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದವರ ಪ್ರಸ್ತಾವನೆ ಆಧರಿಸಿ ‘ಕರ್ನಾಟಕ ರಸ್ತೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ(ಕೆಆರ್‌ಆರ್‌ಡಿಎ)’ ರಚಿಸಿರುವುದು ಇಲಾಖೆಯಲ್ಲಿ ಚರ್ಚೆ ಹುಟ್ಟುಹಾಕಿದೆ.

ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡ ಒಂದೇ ವಾರದೊಳಗೆ ಈ ಹುದ್ದೆಗೆ ಕೆ.ಎಸ್. ಕೃಷ್ಣಾರೆಡ್ಡಿ ಅವರನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ(ಸಿಇಒ) ನೇಮಕ ಮಾಡಲಾಗಿದೆ. ನಿವೃತ್ತರಾಗುವಾಗ ಕಾರ್ಯದರ್ಶಿ ಹುದ್ದೆ ನಿಭಾಯಿಸಿದ್ದರೂ ಈಗ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹುದ್ದೆಯ (ಸಾಮಾನ್ಯವಾಗಿ ಐಎಎಸ್‌ ಅಧಿಕಾರಿಗಳಿಗೆ ನೀಡುವ ಹುದ್ದೆ) ಸೌಲಭ್ಯವನ್ನು ಒದಗಿಸುವಂತೆ ಆದೇಶಿಸಲಾಗಿದೆ.

ADVERTISEMENT

‘ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದ (ಪಿಪಿಪಿ)  ಅಡಿ ರಸ್ತೆ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು  ಪ್ರಾಧಿಕಾರ ರಚಿಸುವ ಬಗ್ಗೆ ಸಚಿವ ಸಂಪುಟದ ಮುಂದೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ವಿದೇಶಿ ಅಥವಾ ಸ್ವದೇಶಿ ಸಂಸ್ಥೆಗಳ ನೆರವಿನಿಂದ ಪಿಪಿಪಿ ಮಾದರಿಯಡಿ ಯೋಜನೆ ಜಾರಿ ಮಾಡಲು ಕರ್ನಾಟಕ ರಾಜ್ಯ ಹೆದ್ದಾರಿ ಸುಧಾರಣಾ ಯೋಜನೆ (ಕೆ ಶಿಪ್) ಅಸ್ತಿತ್ವದಲ್ಲಿದೆ. ರಾಜ್ಯದ ವಿವಿಧ ಜಿಲ್ಲೆಗಳನ್ನು ಸಂಪರ್ಕಿಸುವ ರಸ್ತೆಗಳನ್ನು ನಿರ್ಮಿಸಿ, ಟೋಲ್ ಸಂಗ್ರಹವನ್ನೂ ಮಾಡುತ್ತಿದೆ. ಹೀಗಿರುವಾಗ, ಮತ್ತೊಂದು ಪ್ರಾಧಿಕಾರ ಅನಗತ್ಯ ಎಂದು ತೀರ್ಮಾನಿಸಿ, ವಿಷಯವನ್ನು ಕೈಬಿಡಲಾಗಿತ್ತು. ಕೃಷ್ಣಾರೆಡ್ಡಿಯವರು ವಿಶೇಷ ಪ್ರಭಾವ ಬೀರಿ, ಮತ್ತೊಂದು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಅನುಮೋದನೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ಹೇಳಿದರು. 

ರಸ್ತೆ ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ ಲೋಕೋಪಯೋಗಿ ಇಲಾಖೆ ಇದ್ದು, ಅದಕ್ಕೆ ಪ್ರಧಾನ ಕಾರ್ಯದರ್ಶಿ(ಐಎಎಸ್‌), ಕಾರ್ಯದರ್ಶಿ, ವಿಭಾಗಕ್ಕೆ ಒಬ್ಬರಂತೆ ನಾಲ್ವರು ಮುಖ್ಯ ಎಂಜಿನಿಯರ್ ಇದ್ದಾರೆ. ರಾಜ್ಯ ಹೆದ್ದಾರಿಗಳ ನಿರ್ವಹಣೆಗಾಗಿ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ(ಎಸ್‌ಎಚ್‌ಡಿಪಿ) ಕೆಲಸ ನಿರ್ವಹಿಸುತ್ತಿದ್ದು, ಮುಖ್ಯ ಎಂಜಿನಿಯರ್ ಶ್ರೇಣಿಯ ಅಧಿಕಾರಿ ಇದರ ಉಸ್ತುವಾರಿಯಲ್ಲಿದ್ದಾರೆ. ಇದರ ಜತೆಗೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ(ಕೆಆರ್‌ಡಿಸಿಎಲ್‌) ಹಾಗೂ ಕೆ ಶಿಪ್‌ ಚಾಲ್ತಿಯಲ್ಲಿವೆ. 

ತಾಂತ್ರಿಕ ಪರಿಣಿತಿ ಇಲ್ಲ:

ಪಿಪಿಪಿ ಮಾದರಿಯಡಿ ಬಂಡವಾಳ ಹೂಡಿಕೆ ಮಾಡಿಸಬೇಕೆಂದೇ ನಿಗಮ ಮಾಡುವುದಾದಲ್ಲಿ, ಐಎಎಸ್‌ ಅಧಿಕಾರಿಯನ್ನೇ ಸಿಇಒ ಹುದ್ದೆಗೆ ವರ್ಗಾವಣೆ ಮಾಡಬಹುದಿತ್ತು. ಅದರ ಬದಲು, ನಿವೃತ್ತ ಅಧಿಕಾರಿಗೆ ಮಹತ್ವದ ಹುದ್ದೆ ನೀಡಿರುವುದು ಸರಿಯಲ್ಲ ಎಂದು ಇಲಾಖೆಯ ಅಧಿಕಾರಿಗಳೇ ತಕರಾರು ತೆಗೆದಿದ್ದಾರೆ.

ಇಲಾಖೆಯವರನ್ನೇ ನೇಮಕ ಮಾಡಬಹುದಾಗಿದ್ದರೆ ಬಿ.ಇ. ಸಿವಿಲ್ ಅಭ್ಯಾಸ ಮಾಡಿ ತಾಂತ್ರಿಕ ಪರಿಣಿತಿ ಇರುವ, ಸದ್ಯ ಇಲಾಖೆಯಲ್ಲಿಯೇ ಇರುವ ಮುಖ್ಯ ಎಂಜಿನಿಯರ್ ಶ್ರೇಣಿಯವರನ್ನು ನೇಮಕ ಮಾಡಬಹುದಿತ್ತು. ನಿವೃತ್ತರಾದವರಲ್ಲೂ ಸಾಕಷ್ಟು ಮಂದಿ ಇದ್ದರು. ಅವರೆಲ್ಲರನ್ನೂ ಬಿಟ್ಟು ಬಿ.ಇ. ಮೆಕ್ಯಾನಿಕಲ್‌ ಅಭ್ಯಾಸ ಮಾಡಿರುವ ಕೃಷ್ಣಾರೆಡ್ಡಿಯವರಿಗೆ ಹುದ್ದೆ ನೀಡಿರುವುದು ಅನುಮಾನಕ್ಕೆ ಕಾರಣವಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.