ADVERTISEMENT

ತಿಡಗುಂದಿ ವಿವಾದ| ಕೃಷ್ಣಾ ಭಾಗ್ಯ ಜಲ ನಿಗಮದ ಮುಖ್ಯ ಎಂಜಿನಿಯರ್‌ ಎತ್ತಂಗಡಿ

ತಿಡಗುಂದಿ ಜಲ ಸೇತುವೆ ಲೋಕಾರ್ಪಣೆ ವಿವಾದ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2020, 12:53 IST
Last Updated 30 ಏಪ್ರಿಲ್ 2020, 12:53 IST
ಆರ್.ಪಿ.ಕುಲಕರ್ಣಿ
ಆರ್.ಪಿ.ಕುಲಕರ್ಣಿ   

ವಿಜಯಪುರ: ತಿಡಗುಂದಿ ಜಲ ಸೇತುವೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕಾರಣಕ್ಕೆ ಕೃಷ್ಣಾ ಭಾಗ್ಯ ಜಲ ನಿಗಮದ ಆಲಮಟ್ಟಿ ಅಣೆಕಟ್ಟು ವಲಯದ ಮುಖ್ಯ ಎಂಜಿನಿಯರ್ ಆರ್.ಪಿ. ಕುಲಕರ್ಣಿ ಅವರನ್ನು ವರ್ಗಾವಣೆ ಮಾಡಲಾಗಿದೆ.

ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರ ಸೂಚನೆ ಮೇರೆಗೆ ಕುಲಕರ್ಣಿ ಅವರನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಎತ್ತಂಗಡಿ ಮಾಡಲಾಗಿದೆ.

ವರ್ಗಾವಣೆಗೆ ಕಾರಣ: ದೇಶದಲ್ಲೇ ಉದ್ದನೆಯ ಮತ್ತು ಎತ್ತರದ ಅತ್ಯಾಧುನಿಕ ತಿಡಗುಂದಿ ಜಲಸೇತುವೆ(ಕಾಲುವೆ)ಯಲ್ಲಿ ಪ್ರಥಮ ಬಾರಿಗೆ ನೀರು ಹರಿಸಿದ ಹಿನ್ನೆಲೆಯಲ್ಲಿ ಯೋಜನೆಯ ರೂವಾರಿ, ಕಾಂಗ್ರೆಸ್‌ ಶಾಸಕ ಎಂ.ಬಿ.ಪಾಟೀಲ ಹಾಗೂ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತು ಜೆಡಿಎಸ್‌ ಶಾಸಕ ದೇವಾನಂದ ಚವ್ಹಾಣ ಕೂಡಿಕೊಂಡು ಗಂಗಾಪೂಜೆ ನೆರವೇರಿಸಿ, ಬಾಗಿನ ಅರ್ಪಿಸಿದ್ದರು. ಅಂದಿನ ಕಾರ್ಯಕ್ರಮದಲ್ಲಿ ಮುಖ್ಯ ಎಂಜಿನಿಯರ್‌ ಆರ್.ಪಿ.ಕುಲಕರ್ಣಿ ಪಾಲ್ಗೊಂಡಿದ್ದರು.

ADVERTISEMENT

ಶಾಸಕರಿಂದ ದೂರು: ‘ಲಾಕ್‌ಡೌನ್‌ ಆದೇಶ ಉಲ್ಲಂಘಿಸಿ ಮತ್ತು ಸರ್ಕಾರದ ಶಿಷ್ಟಾಚಾರಗಳನ್ನು ಬದಿಗೊತ್ತಿ ಜಲಸೇತುವೆಯನ್ನು ಲೋಕಾರ್ಪಣೆ ಮಾಡಲಾಗಿದೆ’ ಎಂದು ಇಂಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಸರ್ಕಾರದ ಗಮನ ಸೆಳೆದಿದ್ದರು. ಅಲ್ಲದೇ, ಕಾರ್ಯಕ್ರಮಕ್ಕೆ ಅನುಮತಿ ನೀಡಿದ ಮತ್ತು ಭಾಗವಹಿಸಿದ್ದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು.

ಈ ವಿಷಯವಾಗಿ ಕಾಂಗ್ರೆಸ್‌ ಶಾಸಕರಾದ ಎಂ.ಬಿ.ಪಾಟೀಲ, ಯಶವಂತರಾಯಗೌಡ ಪಾಟೀಲ ನಡುವೆ ಪರಸ್ಪರ ಆರೋಪ, ಪ್ರತ್ಯಾರೋಪಕ್ಕೆ ಕಾರಣವಾಗಿತ್ತು.

ಸ್ಪಷ್ಟನೆ: ಶಾಸಕರ ನಡುವಿನ ಜಲ ಜಗಳ ತಾರಕಕ್ಕೇರುತ್ತಿರುವಂತೆ ಎಚ್ಚೆತ್ತುಕೊಂಡಿದ್ದ ಮುಖ್ಯ ಎಂಜಿನಿಯರ್ ಆರ್.ಪಿ.ಕುಲಕರ್ಣಿ, ‘ಜಲ ಕಾಲುವೆಯಲ್ಲಿ ಪ್ರಥಮ ಬಾರಿಗೆ ನೀರು ಹರಿಸಿದ್ದ ಕಾರಣಕ್ಕೆ ನಿರ್ವಹಣೆ ಸಂಬಂಧ ಅಂದು ಅಲ್ಲಿಗೆ ಹೋಗಲಾಗಿತ್ತು. ಶಾಸಕರು ಖಾಸಗಿಯಾಗಿ ಗಂಗಾಪೂಜೆ ನಡೆಸಿದ್ದರೇ ಹೊರತು ಈ ಕಾರ್ಯಕ್ರಮಕ್ಕೂ ನಿಗಮಕ್ಕೂ ಸಂಬಂಧವಿಲ್ಲ’ ಎಂದು ಸ್ಪಷ್ಟನೆ ನೀಡಿದರು.

ಶಾಸಕರ ನಡುವಿನ ಜಲ ಜಗಳದ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಆಲಮಟ್ಟಿಗೆ ಖುದ್ದು ಭೇಟಿ ನೀಡಿ, ಅಧಿಕಾರಿಗಳಿಂದ ವಿವರಣೆ ಪಡೆದಿದ್ದರು. ಅಲ್ಲದೇ, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮದ ಎಚ್ಚರಿಕೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.