ADVERTISEMENT

16 ಲಕ್ಷ ಸಣ್ಣ, ಅತಿ ಸಣ್ಣ ರೈತರಿಗೆ ತಲಾ ₹3 ಸಾವಿರ ‍ಪರಿಹಾರ: ಕೃಷ್ಣಬೈರೇಗೌಡ

​ಪ್ರಜಾವಾಣಿ ವಾರ್ತೆ
Published 9 ಮೇ 2024, 15:36 IST
Last Updated 9 ಮೇ 2024, 15:36 IST
ಕೃಷ್ಣ ಬೈರೇಗೌಡ 
ಕೃಷ್ಣ ಬೈರೇಗೌಡ    

ಬೆಂಗಳೂರು: ‘ಸಣ್ಣ ಮತ್ತು ಅತಿ ಸಣ್ಣ ಒಣ ಬೇಸಾಯ ಮಾಡುವ ಸುಮಾರು 16 ಲಕ್ಷ ಕುಟುಂಬಗಳಿಗೆ ಬರಗಾಲದಿಂದ ಆಗಿರುವ ಜೀವನೋಪಾಯ ನಷ್ಟಕ್ಕೆ ಪರಿಹಾರವಾಗಿ ತಲಾ ₹3,000 ಪರಿಹಾರ ನೀಡಲೂ ತೀರ್ಮಾನಿಸಲಾಗಿದೆ’ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಿಂದ ಎನ್‌ಡಿಆರ್‌ಎಫ್‌ ಹಣ ಬಿಡುಗಡೆ ಆದ ಬಳಿಕ ರೈತರಿಗೆ ಅರ್ಹತೆಯ ಆಧಾರದಲ್ಲಿ ಪರಿಹಾರವನ್ನು ಪಾವತಿಸಲಾಗುತ್ತಿದ್ದು, ಈವರೆಗೆ ಒಟ್ಟು 32.12 ಲಕ್ಷ ರೈತರಿಗೆ ಸಂಪೂರ್ಣ ಬೆಳೆ ಪರಿಹಾರ ಮೊತ್ತವನ್ನು ಜಮೆ ಮಾಡಲಾಗಿದೆ ಎಂದು ವಿವರಿಸಿದರು. 

ಇನ್ನೂ ಸುಮಾರು ಎರಡು ಲಕ್ಷ ರೈತರಿಗೆ ಪರಿಹಾರ ನೀಡುವ ಪ್ರಕ್ರಿಯೆ ದಾಖಲೆ ಪರಿಶೀಲನೆ ಹಂತದಲ್ಲಿದೆ ಎಂದರು.

ADVERTISEMENT

ಇದಲ್ಲದೇ, ಸಾಕಷ್ಟು ತಾಲ್ಲೂಕುಗಳಲ್ಲಿ ಬರ ಪರಿಹಾರ ಪಟ್ಟಿಯಲ್ಲಿ ಸೇರದೆ ಇದ್ದ ಮಳೆ ಆಧಾರಿತ ಬೆಳೆಗಳಿಗೂ ಪರಿಹಾರ ಧನ ವಿತರಿಸಲು ಮತ್ತು ಎರಡು ಲಕ್ಷ ಹೆಕ್ಟೇರ್‌ ನೀರಾವರಿ ಪ್ರದೇಶವನ್ನು ಒಳಗೊಳ್ಳುವ  ಸುಮಾರು 1.63 ಲಕ್ಷ ಅರ್ಹ ರೈತರಿಗೂ ಪರಿಹಾರ ವಿತರಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ನೀರು ಮತ್ತು ಮೇವಿನ ನಿರ್ವಹಣೆಗಾಗಿ ಇಲ್ಲಿಯವರೆಗೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ 202 ಸಭೆಗಳನ್ನು ನಡೆಸಿದೆ. 462 ತಾಲ್ಲೂಕು ಮಟ್ಟದ ಕಾರ್ಯಪಡೆ ಸಭೆಗಳನ್ನೂ ನಡೆಸಲಾಗಿದೆ. ನೀರಿನ ಸಮಸ್ಯೆಯಿಂದ 270 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಮತ್ತು 594 ಗ್ರಾಮಗಳಿಗೆ ಖಾಸಗಿ ಬೋರ್‌ವೆಲ್‌ ಬಾಡಿಗೆಗೆ ಪಡೆದು ನೀರು ಸರಬರಾಜು ಮಾಡಲಾಗುತ್ತದೆ. ನಗರ ಪ್ರದೇಶದ 153 ವಾರ್ಡ್‌ಗಳಿಗೆ ಟ್ಯಾಂಕರ್‌ ಮೂಲಕ ಮತ್ತು 35 ವಾರ್ಡ್‌ಗಳಿಗೆ ಖಾಸಗಿ ಬೋರ್‌ವೆಲ್‌ ಬಾಡಿಗೆ ಪಡೆದು ನೀರು ಸರಬರಾಜು ಮಾಡಲಾಗುತ್ತಿದೆ ಎಂದರು.

ರಾಜ್ಯದಲ್ಲಿ ಅವಶ್ಯ ಇರುವ ವಿವಿಧ ಭಾಗಗಳಲ್ಲಿ 47 ಮೇವಿನ ಬ್ಯಾಂಕ್‌ಗಳನ್ನು ಮತ್ತು 28 ಕಡೆಗಳಲ್ಲಿ ಗೋಶಾಲೆಗಳನ್ನು ತೆರೆದು ಮೇವಿನ ಕೊರತೆ ನೀಗಿಸಲಾಗುತ್ತಿದೆ. ಈ ವೆಚ್ಚವನ್ನು ಭರಿಸಲು ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರರ ಖಾತೆಯಲ್ಲಿ ₹836 ಕೋಟಿ ಅನುದಾನ ಲಭ್ಯವಿದೆ ಎಂದು ಕೃಷ್ಣಬೈರೇಗೌಡ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.