ADVERTISEMENT

‘ಸಕಾಲ’ಕ್ಕೆ ಇನ್ನಷ್ಟು ಸೇವೆಗಳು: ಕೃಷ್ಣಬೈರೇಗೌಡ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2023, 15:34 IST
Last Updated 11 ಆಗಸ್ಟ್ 2023, 15:34 IST
ಕೃಷ್ಣ ಬೈರೇಗೌಡ
ಕೃಷ್ಣ ಬೈರೇಗೌಡ    

ಬೆಂಗಳೂರು: ‘ಸಕಾಲ’ದಡಿ ಈಗ 1,115 ಕ್ಕೂ ಹೆಚ್ಚು ಸರ್ಕಾರಿ ಸೇವೆಗಳನ್ನು ನೀಡಲಾಗುತ್ತಿದ್ದು, ಇನ್ನಷ್ಟು ಹೊಸ ಸೇವೆಗಳನ್ನು ಸೇರಿಸುವ ಚಿಂತನೆ ಇದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ವಿಕಾಸಸೌಧದಲ್ಲಿ ಶುಕ್ರವಾರ ನಡೆದ ಸಕಾಲ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕಳೆದ 11 ವರ್ಷಗಳಿಂದ ಸಕಾಲ ಸೇವೆ ನೀಡಲಾಗುತ್ತಿದೆ. ಆದರೆ, ಹಲವರಿಗೆ ಈ ಬಗ್ಗೆ ಮಾಹಿತಿಯೇ ಇಲ್ಲ. ವ್ಯಾಪಕವಾಗಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದು ಹೇಳಿದರು.

‘ಸಕಾಲ ಅಡಿ ಅರ್ಜಿ ಸಲ್ಲಿಸಿದವರಿಗೆ ಸೇವೆ ನೀಡುವಲ್ಲಿ ವಿಳಂಬ ಧೋರಣೆ ಸರಿಯಲ್ಲ. ಜನರಿಗೆ ಸಮಯಕ್ಕೆ ಸರಿಯಾಗಿ ಸರ್ಕಾರಿ ಸೇವೆಗಳನ್ನು ನೀಡಬೇಕು. ಜನರ ಮನೆಬಾಗಿಲಿಗೆ ತಲುಪಿಸುವ ಸಲುವಾಗಿ ಸಕಾಲ ಯೋಜನೆ ಆರಂಭಿಸಲಾಯಿತು. ಆದರೆ, ಜನಪರ ಸೇವೆ ನೀಡಬೇಕಾದ ಅಧಿಕಾರಿಗಳು ಸಾರ್ವಜನಿಕರ ಸೇವಾ ಅರ್ಜಿ ವಿಲೇವಾರಿಗೆ ತಡ ಮಾಡುತ್ತಿರುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಇದೊಂದು ಮಾದರಿ ಹಾಗೂ ಯಶಸ್ವಿ ಯೋಜನೆ. ನಮ್ಮ ಯೋಜನೆಯನ್ನು ಇತರೆ ರಾಜ್ಯಗಳೂ ಸಹ ಅನುಸರಿಸುತ್ತಿವೆ. ಜನರಿಗೆ ಇದರ ಮೂಲಕ ಉತ್ತಮ ಸೇವೆ ನೀಡಬೇಕು ಎಂಬುದರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆದೇಶವೂ ಇದೆ. ಹೀಗಾಗಿ ಅಧಿಕಾರಿಗಳು ಜನರಿಗೆ ಸಮಯಕ್ಕೆ ಸರಿಯಾಗಿ ಸೇವೆ ನೀಡುವ ಮೂಲಕ ಜನಪರ ಮತ್ತು ಆಡಳಿತ ಸುಧಾರಣೆ ನಿಟ್ಟಿನಲ್ಲಿ ಸರ್ಕಾರದ ಜತೆ ಸಹಕರಿಸಬೇಕು’ ಎಂದು ಮನವಿ ಮಾಡಿದರು.

ಸಕಾಲ ಯೋಜನೆಯ ಅಡಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇವಾ ಅರ್ಜಿಗಳು ಬಾಕಿ ಇದ್ದು, ಅದನ್ನು ಶೀಘ್ರ ವಿವೇವಾರಿಗೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.