ಬೆಂಗಳೂರು: ‘ಅಧಿಕಾರಿಗಳ ತಪ್ಪಿನಿಂದಾಗಿ ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಭೂಸ್ವಾಧೀನಕ್ಕೆ ₹2.01 ಲಕ್ಷ ಕೋಟಿ ಬೇಕಾಗಲಿದೆ. ಅಧಿಕಾರಿಗಳ ಬೇಜವಾಬ್ದಾರಿಯಿಂದ ಸರ್ಕಾರಕ್ಕೆ ₹1 ಲಕ್ಷ ಕೋಟಿ ನಷ್ಟವಾಗುತ್ತಿದೆ’ ಎಂದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಸೆಂಟ್ರಲ್ ಕಾಲೇಜಿನಲ್ಲಿ ಶನಿವಾರ ಕಂದಾಯ ಇಲಾಖೆಯ ಅಧಿಕಾರಿಗಳಿಗಾಗಿ ಆಯೋಜಿಸಲಾಗಿದ್ದ, ‘ಭೂಸ್ವಾಧೀನ ಮತ್ತು ನ್ಯಾಯಾಲಯ ಪ್ರಕರಣಗಳ ನಿರ್ವಹಣೆ’ ವಿಶೇಷ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಕೃಷ್ಣಾ ಮೇಲ್ದಂಡೆ ಯೋಜನೆಯ ಭೂಸ್ವಾಧೀನಕ್ಕೆ ಸಂಪುಟದಲ್ಲಿ ಒಪ್ಪಿಗೆ ಪಡೆದಿರುವ ಹಣ ₹17,000 ಕೋಟಿ ಮತ್ತು ಯೋಜನೆಯ ಒಟ್ಟು ವೆಚ್ಚ ₹51,000 ಕೋಟಿ’ ಎಂದರು.
‘ಭೂಸ್ವಾಧೀನವಾದ ಜಮೀನಿಗೆ ಅಧಿಕಾರಿಗಳು ನಿಗದಿಪಡಿಸಿದ್ದ ಪರಿಹಾರದ ದರವನ್ನು ನ್ಯಾಯಾಲಯವು ಹಲವು ಪಟ್ಟು ಹೆಚ್ಚಿಸಿದೆ. ಮುಳುಗಡೆ ಭೂಮಿಗೆ ₹1.26 ಕೋಟಿ (ಎಕರೆಗೆ), ಕಾಲುವೆ ಭೂಸ್ವಾಧೀನ ₹74 ಲಕ್ಷ (ಎಕರೆಗೆ), ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯ ಭೂಮಿಗೆ ₹23.50 ಕೋಟಿ (ಎಕರೆಗೆ) ನಿಗದಿ ಮಾಡಿದೆ’ ಎಂದರು.
‘ಈಗಾಗಲೇ 29,400 ಎಕರೆ ಸ್ವಾಧೀನಗೊಂಡಿದ್ದು, ಅದಕ್ಕೆ ₹66,000 ಕೋಟಿ ಪರಿಹಾರ ನೀಡಬೇಕಿದೆ. ಇನ್ನೂ 1.04 ಲಕ್ಷ ಎಕರೆ ಅಗತ್ಯವಿದ್ದು, ನ್ಯಾಯಾಲಯ ನಿಗದಿಪಡಿಸಿದ ದರದಲ್ಲೇ ಪರಿಹಾರ ನೀಡಿದರೂ ₹2.01 ಲಕ್ಷ ಕೋಟಿ ಬೇಕಾಗುತ್ತದೆ’ ಎಂದು ವಿವರಿಸಿದರು.
‘ಈ ವಿಚಾರದಲ್ಲಿ ಸರ್ಕಾರದ ವಕೀಲರು, ಕೃಷ್ಣ ಭಾಗ್ಯ ಜಲ ನಿಗಮ ಮತ್ತು ಜನಪ್ರತಿನಿಧಿಗಳ ತಪ್ಪೂ ಇದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ಮಹತ್ವದ ಕೃಷ್ಣಾ ಮೇಲ್ದಂಡೆ ಯೋಜನೆ ಭವಿಷ್ಯ ಏನಾಗಲಿದೆ’ ಎಂದು ಪ್ರಶ್ನಿಸಿದರು.
‘ಬೇರೆ ಯೋಜನೆಗಳ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಜಮೀನಿನ ಮಾಲೀಕರಿಗೆ 2017ರ ದರವನ್ನು ಅನ್ವಯ ಮಾಡುವ ಬದಲಿಗೆ, 2023ರ ಪರಿಷ್ಕೃತ ದರವನ್ನು ಅಧಿಕಾರಿಗಳು ನಿಗದಿ ಮಾಡಿದ್ದಾರೆ. ಬಹಳ ಹಿಂದಿನಿಂದಲೂ ಇಂತಹ ತಪ್ಪುಗಳು ನಡೆದಿವೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂಪಾಯಿ ನಷ್ಟ ಉಂಟಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಯಾವ ಸರ್ಕಾರದಿಂದ ಇಷ್ಟು ಪರಿಹಾರ ನೀಡಲು ಸಾಧ್ಯ? ಅಧಿಕಾರಿಗಳು ಸರಿಯಾದ ಸಮಯದಲ್ಲಿ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದಿದ್ದರೆ ಸರ್ಕಾರಕ್ಕೆ ಇಷ್ಟು ಹೊರೆಯಾಗುತ್ತಿರಲಿಲ್ಲಕೃಷ್ಣ ಬೈರೇಗೌಡ ಕಂದಾಯ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.