ADVERTISEMENT

ಕಾನೂನು ಮೀರಿ ಆದೇಶ ಹೊರಡಿಸಿದರೆ ಕ್ರಮ: ಸಚಿವ ಕೃಷ್ಣ ಬೈರೇಗೌಡ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 14:43 IST
Last Updated 16 ಆಗಸ್ಟ್ 2025, 14:43 IST
<div class="paragraphs"><p>ಸಚಿವ ಕೃಷ್ಣ ಬೈರೇಗೌಡ</p></div>

ಸಚಿವ ಕೃಷ್ಣ ಬೈರೇಗೌಡ

   

ಬೆಂಗಳೂರು: ಉಪವಿಭಾಗಾಧಿಕಾರಿಗಳು ತಮ್ಮ ವ್ಯಾಪ್ತಿಗೆ ಬರದಿರುವ ಪ್ರಕರಣಗಳನ್ನು ದಾಖಲಿಸಿಕೊಂಡರೆ ಮತ್ತು ಕಾನೂನು ಮೀರಿ ಆದೇಶ ಹೊರಡಿಸಿದರೆ, ಶಿಸ್ತು ಕ್ರಮಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಎಚ್ಚರಿಕೆ ನೀಡಿದ್ದಾರೆ.

ಉ‍ಪವಿಭಾಗಾಧಿಕಾರಿಗಳ ಜತೆ ಶನಿವಾರ ವಿಡಿಯೊ ಕಾನ್ಫರೆನ್ಸ್‌ ಮೂಲಕ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ADVERTISEMENT

‘ಸಿವಿಲ್‌ ನ್ಯಾಯಾಲಯಗಳ ವ್ಯಾಪ್ತಿಗೆ ಬರುವ ಪ್ರಕರಣಗಳನ್ನು ಉಪವಿಭಾಗಾಧಿಕಾರಿಗಳು (ಎ.ಸಿ) ದಾಖಲಿಸಿಕೊಳ್ಳುತ್ತಿರುವ ಬಗ್ಗೆ ವರದಿ ಇದೆ. ಇಂತಹ ಪ್ರಕರಣಗಳಲ್ಲಿ ಕೆಲವು ಎ.ಸಿಗಳು ಕಾನೂನುಬಾಹಿರವಾಗಿ ಆದೇಶ ಹೊರಡಿಸಿದ್ದರ ಬಗ್ಗೆ ಮಾಹಿತಿ ಇದೆ’ ಎಂದು ಸಚಿವರು ಸಭೆಯಲ್ಲಿ ಉಲ್ಲೇಖಿಸಿದರು.

‘ಇಂತಹ ಘಟನೆಗಳು ಪದೇ–ಪದೇ ಮರುಕಳುಹಿಸುತ್ತಿವೆ. ಎ.ಸಿಗಳು ಹೊರಡಿಸಿದ ಆದೇಶದ ಬಗ್ಗೆ ಆಕ್ಷೇಪ ವ್ಯಕ್ತವಾಗಿವೆ. ಇನ್ನು ಮುಂದೆ ಎ.ಸಿಗಳು ತಾವು ಹೊರಡಿಸುವ ಆದೇಶಗಳಲ್ಲಿ, ಯಾವ ಕಾಯ್ದೆ–ಸೆಕ್ಷನ್‌ಗಳ ಅಡಿಯಲ್ಲಿ ಅಂತಹ ಆದೇಶ ಹೊರಡಿಸಿದ್ದೇವೆ ಎಂಬುದನ್ನು ಉಲ್ಲೇಖಿಸಬೇಕು’ ಎಂದು ಸೂಚಿಸಿದರು.

‘ಈ ಸೂಚನೆಗಳನ್ನು ಮೀರುವ ಅಥವಾ ಪಾಲಿಸದೇ ಇರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುತ್ತೇವೆ. ನೀವು ಅದರ ವಿರುದ್ಧ ನ್ಯಾಯಾಲಯಕ್ಕೆ ಹೋದರೆ, ಸುಪ್ರೀಂ ಕೋರ್ಟ್‌ವರೆಗೂ ಹೋಗಲು ನಾವು ಸಿದ್ಧರಿದ್ದೇವೆ’ ಎಂದೂ ಎಚ್ಚರಿಸಿದರು.

‘ಎ.ಸಿಗಳು ಹೊಸ ಪ್ರಕರಣಗಳನ್ನು ದಾಖಲಿಸಿಕೊಳ್ಳುವುದರ ಜತೆಗೆ, ಈಗಾಗಲೇ ತಮ್ಮ ಬಳಿ ಬಾಕಿಯಾಗಿರುವ ಪ್ರಕರಣಗಳ ಇತ್ಯರ್ಥಕ್ಕೆ ಗಮನ ಕೊಡಬೇಕು’ ಎಂದು ಸೂಚಿಸಿದರು.

ಚಿಕ್ಕಮಗಳೂರು ಎ.ಸಿಗೆ ತರಾಟೆ: 

ಚಿಕ್ಕಮಗಳೂರು ಉಪವಿಭಾಗಾಧಿಕಾರಿ ಸುದರ್ಶನ ಅವರು ಸಭೆ ಶುರುವಾದ ನಂತರವೂ ಮೊಬೈಲ್‌ ಫೋನ್‌ನಲ್ಲಿ ಮಾತನಾಡುತ್ತಿದ್ದರು. ಇದನ್ನು ಗಮನಿಸಿದ ಸಚಿವರು, ‘ಸ್ವಾಮಿ ನೀವು ನನಗೆ ಗೌರವ ನೀಡಬೇಕಾಗಿಲ್ಲ. ಈ ಕುರ್ಚಿಗಾದರೂ ಗೌರವ ಕೊಡಿ. ನಾನು ವೈಯಕ್ತಿಕ ಕೆಲಸಕ್ಕಾಗಿ ಇಲ್ಲಿ ಬಂದಿಲ್ಲ. ಸಭೆಯಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಕಲಿತುಕೊಂಡು, ಸಭೆಗೆ ಗೌರವ ನೀಡಿ’ ಎಂದು ತರಾಟೆಗೆ ತೆಗೆದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.