
ಬೆಳಗಾವಿ(ಸುವರ್ಣ ವಿಧಾನಸೌಧ): ‘ಪಾಪದವರು, ಅಮಾಯಕರಿಗೆ ನಾವು ತೊಂದರೆ ಮಾಡುವುದಿಲ್ಲ. ಆದರೆ, ಹಗರಣ ಮಾಡಿದವರು ಮತ್ತು ಭೂಮಾಫಿಯಾದವರನ್ನು ಬಿಡುವುದಿಲ್ಲ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಕಾಂಗ್ರೆಸ್‌ನ ಎಚ್.ಡಿ.ತಮ್ಮಯ್ಯ ಅವರು, ಚಿಕ್ಕಮಗಳೂರು ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಸಾಗುವಳಿ ಚೀಟಿ ಮಂಜೂರು ಮಾಡಿರುವ 57 ಅರ್ಜಿಗಳ ರದ್ದು ಪ್ರಕರಣವನ್ನು ಗಮನ ಸೆಳೆಯುವ ಸೂಚನೆಯಡಿ ಪ್ರಸ್ತಾಪಿಸಿದಾಗ ಸಚಿವರು ಮೇಲಿನಂತೆ ಕಟುವಾದ ಸಂದೇಶ ನೀಡಿದರು.
‘ಮೋಸ ಮಾಡುವವರು ಅಮಾಯಕರಲ್ಲ. ಸಾಗುವಳಿದಾರರೇ ಅಲ್ಲದವರಿಗೆ ಹೇಗೆ ಮಂಜೂರು ಮಾಡಲು ಸಾಧ್ಯ? ತುಮಕೂರಿನಲ್ಲಿ ಸಾಗುವಳಿ ಮಾಡುತ್ತಿದ್ದವರಿಗೆ ಚಿಕ್ಕಮಗಳೂರಿನಲ್ಲಿ ಸಾಗುವಳಿ ಚೀಟಿ ಕೊಡುವುದು ಎಷ್ಟು ಸರಿ. ಅಂತಹ ಅಕ್ರಮ ಎಸಗಿದ ಆರೋಪ ಇರುವ ಅಧಿಕಾರಿಗಳ ವಿರುದ್ಧ ದೋಷಾರೋಪ ಪಟ್ಟಿ ಮಾಡಿಸಲಾಗಿದೆ’ ಎಂದು ಕೃಷ್ಣ ಬೈರೇಗೌಡ ಹೇಳಿದರು.
ಸಾಗುವಳಿ ಚೀಟಿಗೆ ಸಂಬಂಧಿಸಿದ ಸಮಸ್ಯೆ ಬಗೆಹರಿಸಲು ಮಲೆನಾಡು ಭಾಗದ ಶಾಸಕರ ಸಭೆ ಕರೆಯುವುದಾಗಿ ಅವರು ಭರವಸೆ ನೀಡಿದರು.
ಭದ್ರಾ ಮೇಲ್ದಂಡೆ: ವೆಚ್ಚ ₹24 ಸಾವಿರ ಕೋಟಿಗೆ
ಭದ್ರಾ ಮೇಲ್ದಂಡೆ ಯೋಜನೆಯ ವೆಚ್ಚ ₹24 ಸಾವಿರ ಕೋಟಿಗೆ ತಲುಪಿದೆ. ಕೇಂದ್ರ ಸರ್ಕಾರ ತನ್ನ ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ ₹5,400 ಕೋಟಿಯನ್ನು ನೀಡಿಲ್ಲ ಎಂದು ಜಲ ಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಕಾಂಗ್ರೆಸ್‌ನ ಟಿ.ಬಿ. ಜಯಚಂದ್ರ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಅವರು, ‘ಚಿತ್ರದುರ್ಗ ನಾಲೆಗೆ ನೀರು ಹರಿಸುವ ವಿಚಾರಕ್ಕೆ ಸರ್ಕಾರ ಬದ್ಧವಿದೆ. ಕೇಂದ್ರ ಸರ್ಕಾರ ಈ ಯೋಜನೆಗೆ ನೀಡುವುದಾಗಿ ಘೋಷಣೆ ಮಾಡಿದ ಹಣವನ್ನು ಪಡೆಯಲು ಸರ್ವ ಪಕ್ಷಗಳ ನಿಯೋಗವೊಂದನ್ನು ಆದಷ್ಟು ಬೇಗನೆ ಕರೆದೊಯ್ಯುತ್ತೇವೆ’ ಎಂದು ಭರವಸೆ ನೀಡಿದರು.
ಜಾಮರ್ ಸಮಸ್ಯೆ ನಿವಾರಣೆ ಭರವಸೆ
ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಅಳವಡಿಸಿರುವ ಜಾಮರ್‌ಗಳಿಂದ ಸುತ್ತಮುತ್ತಲಿನ ಬಡಾವಣೆಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಆಗುತ್ತಿರುವ ಕಾರಣ ಇದೇ 22ರಂದು ಮೊಬೈಲ್ ಕಂಪನಿಗಳ ಸಭೆ ಕರೆಯಲಾಗಿದ್ದು, ಸಾರ್ವಜನಿಕರಿಗೆ ತೊಂದರೆ ಆಗದಂತೆ ಕ್ರಮಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ ಅವರು ತಿಳಿಸಿದರು.
ಪರಪ್ಪನ ಅಗ್ರಹಾರ ಕಾರಾಗೃಹದ ಒಳಗೆ ಮೊಬೈಲ್ ನೆಟ್ ವರ್ಕ್ ಸಿಗಬಾರದು ಎಂದು ಜಾಮರ್ ಅಳವಡಿಸಲಾಗಿದೆ. ಆದರೆ, ಕಾರಾಗೃಹದ ಒಳಗೆ ನೆಟ್‌ವರ್ಕ್ ಸಿಗುತ್ತಿದೆ; ಸಾರ್ವಜನಿಕರಿಗೆ ಸಿಗುತ್ತಿಲ್ಲ ಎಂದು ಬಿಜೆಪಿಯ ಎಂ.ಕೃಷ್ಣಪ್ಪ ಅವರು ಸದನದ ಗಮನ ಸೆಳೆದರು.
‘ಕಾರಾಗೃಹದಲ್ಲಿ 19 ಜಾಮರ್‌ಗಳಿವೆ. ಕೆಲವು ಸಂದರ್ಭಗಳಲ್ಲಿ ಅದನ್ನು ಕೆಡಿಸಿ ಒಳಗೆ ನೆಟ್‌ವರ್ಕ್ ಬಳಸುತ್ತಿದ್ದರು. ಅದನ್ನು ಸರಿಪಡಿಸಿದ್ದೇವೆ. ಏರ್‌ಟೆಲ್, ಬಿಎಸ್‌ಎನ್‌ಎಲ್, ಜಿಯೋ ಸೇರಿ ಒಟ್ಟು ನಾಲ್ಕು ಟೆಲಿಕಾಂ ಕಂಪನಿಗಳು ಜಾಮರ್ ಅಳವಡಿಸಿ ನಿರ್ವಹಣೆ ಮಾಡುತ್ತಿವೆ. ಈ ಕಂಪನಿಗಳ ಜತೆ ನಾಲ್ಕು ಬಾರಿ ಸಭೆ ನಡೆಸಲಾಗಿದೆ’ ಎಂದು ಪರಮೇಶ್ವರ ಹೇಳಿದರು.
...............
ತಿಮ್ಮಪ್ಪನ ದರ್ಶನಕ್ಕೆ ಶಾಸಕರ ಶಿಫಾರಸು ಪತ್ರ
ರಾಜ್ಯದ ಶಾಸಕರ ಶಿಫಾರಸು ಪರಿಗಣಿಸಿ ತಿರುಪತಿ ದೇವಸ್ಥಾನದಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸುವಂತೆ ಟಿಟಿಡಿಗೆ ಮನವಿ ಸಲ್ಲಿಸಲಾಗಿದೆ ಎಂದು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಬಿಜೆಪಿಯ ಎಸ್.ಆರ್.ವಿಶ್ವನಾಥ್ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಅವರು, ‘ತಿರುಪತಿಯಲ್ಲಿ ನಿರ್ಮಿಸಿರುವ ಕರ್ನಾಟಕ ಭವನ ಮತ್ತು ಕಲ್ಯಾಣ ಮಂಟಪದ ಕಳಪೆ ಕಾಮಗಾರಿ ಆರೋಪದ ಬಗ್ಗೆ ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸಲಾಗುವುದು. ಕಟ್ಟಡ ನಿರ್ಮಿಸಿದ ಗುತ್ತಿಗೆದಾರರೇ 5 ವರ್ಷ ನಿರ್ವಹಣೆ ಮಾಡಬೇಕಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.