ADVERTISEMENT

ಕೃಷ್ಣಾ ಜಲ ವಿವಾದ: ಪ್ರತ್ಯೇಕ ಪೀಠಕ್ಕೆ ರಾಜ್ಯ ಒತ್ತಡ

ಕೃಷ್ಣಾ ನ್ಯಾಯಾಧೀಕರಣದ ತೀರ್ಪಿನ ಗೆಜೆಟ್‌ ಪ್ರಕಟಣೆಗೆ ತಡೆ

ಮಂಜುನಾಥ್ ಹೆಬ್ಬಾರ್‌
Published 21 ಸೆಪ್ಟೆಂಬರ್ 2022, 17:15 IST
Last Updated 21 ಸೆಪ್ಟೆಂಬರ್ 2022, 17:15 IST
   

ನವದೆಹಲಿ: ‘ಕೃಷ್ಣಾ ಜಲ ವಿವಾದ ನ್ಯಾಯಾಧೀಕರಣ–2’ ನೀಡಿರುವ ತೀರ್ಪನ್ನು ಕೇಂದ್ರ ಗೆಜೆಟ್‌ನಲ್ಲಿ ಪ್ರಕಟಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಗೆ ಪ್ರತ್ಯೇಕ ನ್ಯಾಯಪೀಠ ರಚನೆಗೆ ಒತ್ತಾಯಿಸಿ ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್‌ಗೆ ಪತ್ರ ಬರೆದಿದೆ.

ಅಂತರರಾಜ್ಯ ಜಲ ವಿವಾದ ಕಾಯ್ದೆಯ ಸೆಕ್ಷನ್‌ 5(2)ರಲ್ಲಿ 2010ರ ಡಿಸೆಂಬರ್‌ 30ರಂದು ಹಾಗೂ ಸೆಕ್ಷನ್‌ 5 (3) ಅಡಿಯಲ್ಲಿ 2013ರ ನವೆಂಬರ್‌ 29ರಂದು ನ್ಯಾಯಾಧಿಕರಣವು ತೀರ್ಪು ನೀಡಿತ್ತು. ಈ ತೀರ್ಪು ಪ್ರಶ್ನಿಸಿ ಆಂಧ್ರ ಪ್ರದೇಶ ಸರ್ಕಾರವು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು.

ಈ ವಿಷಯದ ವಿವರವಾದ ಪರಿಗಣನೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂ ಕೋರ್ಟ್, ಸೆಕ್ಷನ್‌ 5 (3) ರಡಿ ನೀಡಿರುವ ತೀರ್ಪನ್ನು ಕೇಂದ್ರ ಸರ್ಕಾರವು ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಿಸದಂತೆ ನಿರ್ದೇಶನ ನೀಡಿತ್ತು.

ADVERTISEMENT

ಈ ತೀರ್ಪನ್ನು ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಿಸಲು ಅವಕಾಶ ನೀಡುವಂತೆ ಒತ್ತಾಯಿಸಿ ಮಹಾರಾಷ್ಟ್ರ ಸರ್ಕಾರವು 2014ರ ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು. ಇದನ್ನು ಬೆಂಬಲಿಸಿ ಕರ್ನಾಟಕ ಸರ್ಕಾರವು 2014ರ ಸೆಪ್ಟೆಂಬರ್‌ನಲ್ಲಿ ಪ್ರಮಾಣಪತ್ರ ಸಲ್ಲಿಸಿತ್ತು.

ಸುಪ್ರೀಂ ಕೋರ್ಟ್‌ಗೆ 2019ರ ಫೆಬ್ರುವರಿ ತಿಂಗಳಲ್ಲಿ ಮಧ್ಯಕಾಲಿನ ಅರ್ಜಿ ಸಲ್ಲಿಸಿರುವ ಕರ್ನಾಟಕ ಸರ್ಕಾರವು,ನ್ಯಾಯಾಲಯದಲ್ಲಿ ಬಾಕಿ ಇರುವ ವಿಶೇಷ ಮನವಿ ಅರ್ಜಿಗಳ ನಿರ್ಣಯಕ್ಕೆ ಒಳಪಟ್ಟು ನ್ಯಾಯಾಧಿಕರಣ ನೀಡಿರುವ ಅಂತಿಮ ಆದೇಶವನ್ನು ಗೆಜೆಟ್‌ನಲ್ಲಿ ಪ್ರಕಟಿಸಲು ಕೇಂದ್ರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿತ್ತು.

ಅದಕ್ಕೆ ಪೂರಕವಾಗಿ 2021ರ ನವೆಂಬರ್‌ನಲ್ಲಿ ಮತ್ತೊಂದು ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು.

ಈ ಅರ್ಜಿಯ ವಿಚಾರಣೆ 2022ರ ಜನವರಿ 10ರಂದು ಬಂದಿತ್ತು. ಈ ವೇಳೆ, ನ್ಯಾಯಮೂರ್ತಿಗಳಿಬ್ಬರು ‍ಪ್ರಕರಣದ ವಿಚಾರಣೆಯಿಂದ ಸರಿದಿದ್ದರು. ಅದರ ಬೆನ್ನಲ್ಲೇ, ಸುಪ್ರೀಂ ಕೋರ್ಟ್‌ ರಿಜಿಸ್ಟ್ರಾರ್‌ಗೆ ಜನವರಿ 24ರಂದು ಪತ್ರ ಬರೆದ ಕರ್ನಾಟಕದ ವಕೀಲರು,‘ಈ ಅರ್ಜಿಗಳು ತುರ್ತಾಗಿ ವಿಚಾರಣೆ ನಡೆಸಲು ಪ್ರತ್ಯೇಕ ನ್ಯಾಯಪೀಠ ರಚಿಸಬೇಕು ಹಾಗೂ ತ್ವರಿತವಾಗಿ ವಿಚಾರಣೆಗೆ ಪಟ್ಟಿ ಮಾಡಬೇಕು’ ಎಂದು ಕೋರಿದರು.

ಸುಪ್ರೀಂ ಕೋರ್ಟ್‌ನಲ್ಲಿ ಫೆಬ್ರುವರಿ 18ರಂದು ವಾದ ಮಂಡಿಸಿದ ರಾಜ್ಯದ ಹಿರಿಯ ವಕೀಲರು, ಶೀಘ್ರದಲ್ಲೇ ಪ್ರತ್ಯೇಕ ನ್ಯಾಯಪೀಠ ರಚಿಸಲು ಮನವಿ ಮಾಡಿದರು. ಕಳೆದ ತಿಂಗಳು ರಿಜಿಸ್ಟ್ರಾರ್‌ಗೆ ಮತ್ತೊಂದು ಪತ್ರ ಬರೆದಿರುವ ಸರ್ಕಾರ, ಈ ಸಂಬಂಧ ಶೀಘ್ರ ನ್ಯಾಯಪೀಠ ರಚಿಸುವಂತೆ ವಿನಂತಿಸಿದೆ.

‘ರಾಜ್ಯಕ್ಕೆ ಹಂಚಿಕೆಯಾಗಿರುವ ನೀರಿನ ಪ್ರಮಾಣದ ಬಳಕೆಗಾಗಿ ವಿವಿಧ ಯೋಜನೆಗಳನ್ನು ರೂಪಿಸಲಾಗಿದ್ದು, ಇವುಗಳು ಅನುಷ್ಠಾನದ ವಿವಿಧ ಹಂತದಲ್ಲಿವೆ. ಗೆಜೆಟ್‌ ಪ್ರಕಟಣೆಯಾದ ಬಳಿಕ ಈ ನೀರಿನ ಬಳಕೆ ಸಾಧ್ಯವಾಗುತ್ತದೆ. ನ್ಯಾಯಪೀಠ ಶೀಘ್ರ ರಚನೆಯಾಗುವ ವಿಶ್ವಾಸ ಇದೆ’ ಎಂದು ಕರ್ನಾಟಕದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದರು.

‘ಗೆಜೆಟ್‌ ‍‍ಪ್ರಕಟಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಜಲಶಕ್ತಿ ಸಚಿವರಿಗೆ ಹಲವು ಪತ್ರಗಳನ್ನು ಬರೆಯ ಲಾಗಿದೆ. ಕೇಂದ್ರ ಸಚಿವರನ್ನು ಭೇಟಿ ಮಾಡಿ ಒತ್ತಡ ಹೇರಲಾಗಿದೆ’
ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.