ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಬೆಂಗಳೂರು: ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಅನುಷ್ಠಾನಕ್ಕೆ ಅಗತ್ಯವಿರುವ ಭೂಸ್ವಾಧೀನಕ್ಕೆ ತ್ವರಿತ ಕ್ರಮ ಕೈಗೊಳ್ಳಲಾಗುವುದು. ಭೂಮಿ ಕಳೆದುಕೊಳ್ಳುವ ರೈತರಿಗೆ ಮೂರು ದಿನಗಳಲ್ಲಿ ನ್ಯಾಯಯುತ ಪರಿಹಾರ ನಿಗದಿ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಯೋಜನೆ ಅನುಷ್ಠಾನ ಕುರಿತು ಬುಧವಾರ ನಡೆದ ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಯೋಜನೆ ಅನುಷ್ಠಾನಕ್ಕೆ ಸಹಕಾರ ನೀಡುವಂತೆ ಕೇಂದ್ರ ಜಲಶಕ್ತಿ ಸಚಿವರಿಗೂ ಮನವಿ ಮಾಡಲಾಗಿದೆ. ಶೀಘ್ರ ಸಭೆ ಕರೆಯುವ ಭರವಸೆ ನೀಡಿದ್ದಾರೆ. ಸೆ.4ರ ಸಚಿವ ಸಂಪುಟ ಸಭೆಯಲ್ಲೂ ಯೋಜನೆ ಅನುಷ್ಠಾನ ಕುರಿತು ಚರ್ಚೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
‘ಭೂಸ್ವಾಧೀನ, ಭೂಪರಿಹಾರದ ಬಗ್ಗೆ ಈಗಾಗಲೇ ಹಲವು ಸುತ್ತು ಚರ್ಚೆ ನಡೆಸಲಾಗಿದೆ. ಹಿಂದಿನ ಸರ್ಕಾರದ ಸಂಪುಟ ಸಭೆ ಹಾಗೂ ಸಂಪುಟ ಉಪಸಮಿತಿ ಸಭೆಯಲ್ಲಿ ಪ್ರತಿ ಎಕರೆ ನೀರಾವರಿ ಜಮೀನಿಗೆ ₹24 ಲಕ್ಷ, ಒಣ ಭೂಮಿಗೆ ₹20 ಲಕ್ಷ ನಿಗದಿ ಮಾಡಿದ್ದರು. ಆದರೆ, ರೈತರು ಈ ಪರಿಹಾರವನ್ನು ಒಪ್ಪದೆ ಹೋರಾಟ ನಡೆಸಿದ್ದರು. ಈ ಕುರಿತು ಬೆಳಗಾವಿಯಲ್ಲೂ ಸಭೆ ನಡೆಸಿದ್ದೆವು. ಪರಿಹಾರ ಮೊತ್ತದ ವಿಚಾರವಾಗಿ ನ್ಯಾಯಾಲಯಗಳಲ್ಲೂ ವ್ಯತಿರಿಕ್ತ ತೀರ್ಪು ಬಂದಿವೆ. ಹೆಚ್ಚು ಪರಿಹಾರ ನೀಡಲು ಸಾಧ್ಯವಿಲ್ಲ. ರೈತರು ಸೇರಿದಂತೆ ಎಲ್ಲಾ ಪಕ್ಷಗಳ ಮುಖಂಡರು, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನ್ಯಾಯಯುತ ದರ ನಿಗದಿ ಮಾಡಲಾಗುವುದು’ ಎಂದರು.
‘ಯೋಜನಾ ವೆಚ್ಚ ₹75 ಸಾವಿರ ಕೋಟಿಯಿಂದ ₹1 ಲಕ್ಷ ಕೋಟಿಗೆ ಹೆಚ್ಚಳವಾಗಿದೆ. ಎಲ್ಲಾ ಸರ್ಕಾರಗಳು ಭರವಸೆ ನೀಡುತ್ತಲೇ ಬಂದಿವೆ. ಭೂಸ್ವಾಧೀನದ ವೆಚ್ಚಗಳಿಂದ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ’ ಎಂದು ಮಾಹಿತಿ ನೀಡಿದರು.
ಡಿಕೆಶಿ–ತಿಮ್ಮಾಪುರ ಮಾತಿನ ಚಕಮಕಿ
ಕೃಷ್ಣಾ ಮೇಲ್ದಂಡೆ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರ ನಡುವೆ ಮಾತಿನ ಚಕಮಕಿ ನಡೆಯಿತು.
ಭೂ ಪರಿಹಾರ, ನ್ಯಾಯಾಲಯಗಳಲ್ಲಿ ಹೆಚ್ಚುವರಿ ಪರಿಹಾರ ಕೋರಿ ದಾಖಲಿಸಿರುವ ಪ್ರಕರಣಗಳ ಕುರಿತು ಚರ್ಚೆ ನಡೆಯುವಾಗ, ಪ್ರತಿ ಎಕರೆಗೆ ₹40 ಲಕ್ಷದಿಂದ ₹50 ಲಕ್ಷದವರೆಗೆ ನೀಡುವಂತೆ ಸಚಿವ ತಿಮ್ಮಾಪುರ ಕೋರಿದರು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಡಿ.ಕೆ.ಶಿವಕುಮಾರ್, ‘ಸಂಪುಟ ಸಚಿವರಾಗಿ ಈ ರೀತಿ ಹೇಳುವುದು ಸರಿಯಲ್ಲ. ಹಿಂದಿನ ಸರ್ಕಾರ ನಿಗದಿ ಮಾಡಿದ ದರ, ನ್ಯಾಯಾಲಯದ ತೀರ್ಪುಗಳನ್ನು ನೋಡಿಕೊಂಡು ನ್ಯಾಯಯುತ ದರ ನಿಗದಿ ಮಾಡೋಣ’ ಎಂದರು.
‘ಜನರ ಅಭಿಪ್ರಾಯಗಳನ್ನು ಗಮನಕ್ಕೆ ತರುವುದು ನನ್ನ ಜವಾಬ್ದಾರಿ. ಆ ಕೆಲಸ ಮಾಡಿದ್ದೇನೆ. ನಿಮ್ಮ ಅನುಭವ ಹಾಗೂ ಸರ್ವಸಮ್ಮತದ ಆಧಾರದಲ್ಲಿ ನಿರ್ಧಾರ ತೆಗೆದುಕೊಳ್ಳಿ’ ಎಂದು ತಿಮ್ಮಾಪುರ ಪ್ರತಿಕ್ರಿಯಿಸಿದರು.
‘ನೀವು ಸಚಿವರಾಗಿ ಇಂತಹ ವೇದಿಕೆಯಲ್ಲಿ ಈ ರೀತಿ ಮಾತನಾಡಬಾರದು. ಯೋಜನಾ ವೆಚ್ಚ ಏರಿಕೆಯಾಗುತ್ತಲೇ ಇದೆ’ ಎಂದು ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.