ADVERTISEMENT

ರಸ್ತೆ ನಿಯಂತ್ರಣ ಪ್ರಾಧಿಕಾರದ ಸಿಇಒ ಆಗಿ ಕೃಷ್ಣ ರೆಡ್ಡಿ: ರಾಜ್ಯಪಾಲರಿಗೆ ದೂರು

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2023, 1:28 IST
Last Updated 11 ಆಗಸ್ಟ್ 2023, 1:28 IST
ರಾಜಭವನ-ಸಂಗ್ರಹ ಚಿತ್ರ
ರಾಜಭವನ-ಸಂಗ್ರಹ ಚಿತ್ರ   

ಬೆಂಗಳೂರು: ‘ಲೋಕೋಪಯೋಗಿ ಇಲಾಖೆಯಲ್ಲಿ ಮೂರು ವರ್ಷ ಕಾರ್ಯದರ್ಶಿಯಾಗಿ ಕೆಲಸ ಮಾಡಿ ಇತ್ತೀಚೆಗೆ ನಿವೃತ್ತರಾಗಿರುವ ಕೆ.ಎಸ್‌. ಕೃಷ್ಣ ರೆಡ್ಡಿ ಅವರನ್ನು ಕರ್ನಾಟಕ ರಾಜ್ಯ ರಸ್ತೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಹುದ್ದೆಗೆ ನೇಮಕಾತಿ ಮಾಡಿರುವುದನ್ನು ರದ್ದು ಮಾಡಬೇಕು’ ಎಂದು ಆಗ್ರಹಿಸಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರಿಗೆ ಸಾಮಾಜಿಕ ಹೋರಾಟಗಾರ ಮರಿಲಿಂಗಗೌಡ ಮಾಲಿಪಾಟೀಲ್‌ ದೂರು ನೀಡಿದ್ದಾರೆ.

‘ತಮ್ಮ ಅವಧಿಯಲ್ಲಿ ಕೃಷ್ಣ ರೆಡ್ಡಿಯವರು ಅಧಿಕಾರ ದುರುಪಯೋಗಪಡಿಸಿಕೊಂಡು ಉದ್ದೇಶಪೂರ್ವಕವಾಗಿ ಕೆಟಿಪಿಪಿ ಕಾಯ್ದೆ ಉಲ್ಲಂಘಿಸಿ, ಯಾವುದೇ ಟೆಂಡರ್‌ ಕರೆಯದೆ ₹ 250 ಕೋಟಿಗೂ ಹೆಚ್ಚು ಮೊತ್ತದ ಕಾಮಗಾರಿಗೆ ಅನುಮೋದನೆ ನೀಡಿರುವುದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಪ್ರಾಧಿಕಾರಕ್ಕೆ ಜುಲೈ 26ರಂದು ನಡೆದ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದು, ಸಿಇಒ ಹುದ್ದೆ ಸೃಷ್ಟಿಸಿ ಇದೇ 7ರಂದು ಕೃಷ್ಣ ರೆಡ್ಡಿ ಅವರನ್ನು ನೇಮಿಸಿರುವುದು ಪೂರ್ವಯೋಜಿತ ಎನಿಸುತ್ತಿದೆ’ ಎಂದೂ ದೂರಿನಲ್ಲಿ ಆರೋಪಿಸಿದ್ದಾರೆ.

‘ಸಿಇಒ ಹುದ್ದೆಗೆ ನೇಮಕಾತಿ ಮಾಡುವ ಮೊದಲು ಸರ್ಕಾರ ಯಾವುದೇ ಜಾಹೀರಾತು ನೀಡಿಲ್ಲ. ನೇಮಕಾತಿ ಬಗ್ಗೆ ಅಧಿಸೂಚನೆಯನ್ನೂ ಹೊರಡಿಸಿಲ್ಲ. ನೇರವಾಗಿ ಕೃಷ್ಣ ರೆಡ್ಡಿ ಅವರನ್ನು ನೇಮಿಸಿರುವುದು ಏಕಪಕ್ಷೀಯ ಆಯ್ಕೆ. ಈ ರೀತಿಯ ನೇಮಕಾತಿಯು ಸಾರ್ವಜನಿಕ ಹಿತದೃಷ್ಟಿಯಿಂದ ಸರಿಯಲ್ಲ ಎನ್ನುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ.‌ ನಿವೃತ್ತಿ ಹೊಂದಿದ ಅಧಿಕಾರಿಗೆ ಪಿಂಚಣಿ ಸೌಲಭ್ಯದ ಜೊತೆಗೆ ಹೊಸ ಹುದ್ದೆ ಸೃಷ್ಟಿಸಿ ಸಂಬಳ, ಸರ್ಕಾರಿ ಕಚೇರಿ, ವಾಹನ, ಭತ್ಯೆ, ನೌಕರರು ಮತ್ತು ಇತರ ಸೌಲಭ್ಯಗಳನ್ನು ನೀಡಿರುವುದು ಜನರ ತೆರಿಗೆ ಹಣದ ದುರುಪಯೋಗವಾಗಿದೆ. ಈ ಎಲ್ಲ ಅಂಶಗಳನ್ನು ತಾವು ಗಮನಿಸಿ, ಕೃಷ್ಣ ರೆಡ್ಡಿ ಅವರ ನೇಮಕಾತಿಯನ್ನು ರದ್ದುಪಡಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು’ ಎಂದೂ ದೂರಿನಲ್ಲಿ ಅವರು ಆಗ್ರಹಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.