ADVERTISEMENT

ಕೃಷ್ಣಾ ಮೇಲ್ದಂಡೆ ಯೋಜನೆ- 3ನೇ ಹಂತ: ಸೆ.16 ಕ್ಕೆ ಸಂಪುಟ ವಿಶೇಷ ಸಭೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 15:42 IST
Last Updated 11 ಸೆಪ್ಟೆಂಬರ್ 2025, 15:42 IST
<div class="paragraphs"><p>ವಿಧಾನಸೌಧ</p></div>

ವಿಧಾನಸೌಧ

   

ಬೆಂಗಳೂರು: ಕೃಷ್ಣಾ ಮೇಲ್ದಂಡೆ ಯೋಜನೆ- 3 ನೇ ಹಂತದ ಕಾಮಗಾರಿಗಳಿಗೆ ಅಗತ್ಯವಿರುವ ಜಮೀನಿಗೆ ಪರಿಹಾರ ನೀಡುವ ವಿಚಾರವಾಗಿ ಅಂತಿಮ ತೀರ್ಮಾನ ತೆಗೆದುಕೊಳ್ಳಲು ಇದೇ 16ರಂದು ಸಚಿವ ಸಂಪುಟದ ವಿಶೇಷ ಸಭೆ ಕರೆಯಲು ಗುರುವಾರ ನಡೆದ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

ಕಾನೂನು ಸಚಿವ ಎಚ್‌.ಕೆ.ಪಾಟೀಲ ಅವರು ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ADVERTISEMENT

ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ–3ರ ಭೂಸ್ವಾಧೀನ ಪ್ರಕ್ರಿಯೆಯನ್ನು ಒಂದೇ ಹಂತದಲ್ಲಿ ತ್ವರಿತವಾಗಿ ಕೈಗೊಳ್ಳುವುದರ ಜತೆಗೆ, ಏಕರೂಪದ ದರ ನಿಗದಿಪಡಿಸಲು ಮತ್ತು ಇತರ ಆಡಳಿತಾತ್ಮಕ ವಿಷಯಗಳಿಗೆ ಅನುಮೋದನೆ ನೀಡುವ ಕುರಿತು ವಿಸ್ತೃತ ಚರ್ಚೆ ನಡೆಯಿತು ಎಂದು ಅವರು ತಿಳಿಸಿದರು.

‘ಸುಮಾರು ಒಂದು ಗಂಟೆಗೂ ಹೆಚ್ಚು ಈ ಕುರಿತು ಚರ್ಚೆ ನಡೆಯಿತು. ಸ್ವಾಧೀನಗೊಳ್ಳುವ ಪ್ರತಿ ಎಕರೆಗೆ ಪರಿಹಾರ ಮೊತ್ತ ಎಷ್ಟು ನಿಗದಿ ಮಾಡಬಹುದು ಎಂಬ ಬಗ್ಗೆ ಹಲವು ಸಚಿವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಯೋಜನೆ ಪೂರ್ಣಗೊಳಿಸಲು 75,000 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಬೇಕಾಗುತ್ತದೆ. ಇದಕ್ಕೆ ಪರಿಹಾರದ ಮೊತ್ತ ಭಾರಿ ಪ್ರಮಾಣವಾಗುತ್ತದೆ. ಇದಕ್ಕೆ ಎಲ್ಲಿಂದ ಹಣ ಹೊಂದಿಸಬಹುದು ಎಂಬ ಚರ್ಚೆಯೂ ನಡೆಯಿತು. ಬಾಂಡ್‌ ಬಿಡುಗಡೆ ಮೂಲಕ ಹಣ ಸಂಗ್ರಹಿಸುವ ಬಗ್ಗೆಯೂ ಗಂಭೀರ ಚರ್ಚೆ ನಡೆಯಿತು’ ಎಂದು ಮೂಲಗಳು ಹೇಳಿವೆ.

ಹೊರಗುತ್ತಿಗೆ ನೇಮಕಕ್ಕೆ ಸಹಕಾರ ಸೊಸೈಟಿ

ವಿವಿಧ ಇಲಾಖೆಗಳು ಮತ್ತು ನಿಗಮ, ಮಂಡಳಿಗಳಿಗೆ ಹೊರಗುತ್ತಿಗೆ ನೌಕರರನ್ನು ಖಾಸಗಿ ಸಂಸ್ಥೆಗಳ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಅದರ ಬದಲು, ಸಹಕಾರ ಸೊಸೈಟಿ ರಚಿಸಿ ಆ ಮೂಲಕ ನೇಮಕಾತಿ ಮಾಡುವ ಕುರಿತು ಸಾಧಕ–ಬಾಧಕಗಳನ್ನು ಅಧ್ಯಯನ ಮಾಡಿ ಸಚಿವ ಸಂಪುಟಕ್ಕೆ ಶಿಫಾರಸು ಮಾಡಲು ಸಂಪುಟ ಉಪಸಮಿತಿ ರಚಿಸಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.

ಲಕ್ಷಾಂತರ ನೌಕರರು ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಈ ನೌಕರರಿಗೆ ಸೇವಾ ಭದ್ರತೆ ಮತ್ತು ಎಲ್ಲ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಸಮಿತಿ ಶಿಫಾರಸುಗಳನ್ನು ಮಾಡಲಿದೆ. ಅಲ್ಲದೇ, ಹೊರಗುತ್ತಿಗೆ ನೌಕರರು ಶೋಷಣೆಗೆ ಒಳಗಾಗುವುದನ್ನು ತಪ್ಪಿಸಲು ಹಾಗೂ ಅಪಾಯಕಾರಿ ಸೇವೆ ಸಲ್ಲಿಸುವ ನೌಕರರ ಹಿತರಕ್ಷಣೆ ಮಾಡುವ ದೃಷ್ಟಿಯಿಂದ ಉಪಸಮಿತಿ ಶಿಫಾರಸಿನ ಆಧಾರದ ಮೇಲೆ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.