ADVERTISEMENT

ನಟ ಆಲಿ, ವಿಜಿಗೆ ಕೃಷ್ಣದೇವರಾಯ ಪುರಸ್ಕಾರ

ಇದೇ 8ರಂದು ಪ್ರದಾನ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2022, 19:57 IST
Last Updated 4 ಏಪ್ರಿಲ್ 2022, 19:57 IST
ಸರಿಗಮ ವಿಜಿ
ಸರಿಗಮ ವಿಜಿ   

ಬೆಂಗಳೂರು: ತೆಲುಗು ವಿಜ್ಞಾನ ಸಮಿತಿ ವತಿಯಿಂದ ನೀಡಲಾಗುವ 2022ನೇ ಸಾಲಿನ ‘ಶ್ರೀಕೃಷ್ಣದೇವರಾಯ ಪುರಸ್ಕಾರ’ಕ್ಕೆ ತೆಲುಗು ಹಾಸ್ಯನಟ ಆಲಿ ಹಾಗೂ ಕನ್ನಡ ನಟ ಸರಿಗಮ ವಿಜಿ ಅವರನ್ನು ಆಯ್ಕೆ ಮಾಡಲಾಗಿದೆ.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಎ.ರಾಧಾಕೃಷ್ಣ ರಾಜು,‘ಶಿಕ್ಷಣ, ಸಾಹಿತ್ಯ, ಸಂಸ್ಕೃತಿ, ಲಲಿತ ಕಲೆಗಳಲ್ಲಿ ಅಪ್ರತಿಮ ಸೇವೆ ಸಲ್ಲಿಸಿದವರನ್ನು ಸಮಿತಿ ಹಿಂದಿನಿಂದಲೂ ಗುರುತಿಸಿ, ಗೌರವಿಸುವ ಕೆಲಸ ಮಾಡುತ್ತಾ ಬಂದಿದೆ. ಅದರಂತೆ ಈ ಸಾಲಿನ ಪುರಸ್ಕಾರಕ್ಕೆ ನಟರಾದ ಆಲಿ ಮತ್ತು ವಿಜಿ ಅವರನ್ನು ಆಯ್ಕೆ ಮಾಡಿದ್ದೇವೆ’ ಎಂದರು.

‘ಪ್ರಶಸ್ತಿ ತಲಾ ₹25 ಸಾವಿರ ನಗದು, ಸ್ಮರಣಿಕೆ ಒಳಗೊಂಡಿವೆ. ವೈಯಾಲಿಕಾವಲ್‌ನಲ್ಲಿರುವತೆಲುಗು ವಿಜ್ಞಾನ ಸಮಿತಿ ಆವರಣದ ಶ್ರೀಕೃಷ್ಣದೇವರಾಯ ಕಲಾಮಂದಿರದಲ್ಲಿ ಏ.8ರಂದು ಸಂಜೆ 4.30ಕ್ಕೆ ‘ಯುಗಾದಿ ಉತ್ಸವ’ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ವಿವರಿಸಿದರು.

ADVERTISEMENT

‘ಕಾರ್ಯಕ್ರಮವನ್ನು ಎಂ.ಎಸ್.ರಾಮಯ್ಯ ಶಿಕ್ಷಣ ಸಂಸ್ಥೆ ಮತ್ತು ಗೋಕುಲ ಫೌಂಡೇಷನ್‌ನ ಅಧ್ಯಕ್ಷ ಎಂ.ಆರ್.ಜಯರಾಮ್‌ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವತ್ಥನಾರಾಯಣ, ಶಾಸಕ ಕೆ.ಆರ್‌.ರಮೇಶ್‌ ಕುಮಾರ್ ಹಾಗೂ ಸಮಿತಿಯ ಶಿಕ್ಷಣ ಟ್ರಸ್ಟ್‌ನ ಅಧ್ಯಕ್ಷ ಮುನಿಸ್ವಾಮಿ ರಾಜು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪ್ರಿನ್ಸ್‌ ರಾಮವರ್ಮ ಮತ್ತು ತಂಡದಿಂದ ವಿಶೇಷ ಸಂಗೀತ ಕಾರ್ಯಕ್ರಮ ಇರಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.