ADVERTISEMENT

‘ಎಡಪಂಥೀಯ ಚಿಂತನೆ ತಿರಸ್ಕೃತ’

‘ಕೃಷ್ಣಾನುಗ್ರಹ’ ಪ್ರಶಸ್ತಿ ಸ್ವೀಕರಿಸಿ ಭೈರಪ್ಪ ಅಭಿಮತ

​ಪ್ರಜಾವಾಣಿ ವಾರ್ತೆ
Published 31 ಮೇ 2019, 20:00 IST
Last Updated 31 ಮೇ 2019, 20:00 IST
ಮೈಸೂರಿನ ಕೃಷ್ಣಧಾಮದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಸಾಹಿತಿ ‍ಪ್ರೊ.ಎಸ್.ಎಲ್‌.ಭೈರಪ್ಪ ಅವರಿಗೆ ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ‘ಕೃಷ್ಣಾನುಗ್ರಹ’ ಪ್ರಶಸ್ತಿ ಪ್ರದಾನ ಮಾಡಿದರು. ಮಂತ್ರಾಲಯದ ಸುಬುಧೇಂದ್ರ ತೀರ್ಥ ಸ್ವಾಮೀಜಿ, ಶ್ರೀಕೃಷ್ಣ ಟ್ರಸ್ಟ್‌ನ ಉಪಾಧ್ಯಕ್ಷರಾದ ಪಿ.ಜಯರಾಮ ಭಟ್ಟ, ಕಾರ್ಯದರ್ಶಿ ಎಚ್‌.ವಿ.ರಾಘವೇಂದ್ರ ಭಟ್‌, ಶ್ರೀಕೃಷ್ಣ ಮಿತ್ರಮಂಡಳಿ ಅಧ್ಯಕ್ಷ ರವಿಶಾಸ್ತ್ರಿ, ಉಪಾಧ್ಯಕ್ಷ ಪಿ.ಎಸ್.ಚಂದ್ರಶೇಖರ್‌, ಗ.ನಾ.ಭಟ್ ಇದ್ದಾರೆ

ಮೈಸೂರು: ‘ಎಡಪಂಥೀಯ ಹಾಗೂ ಮಾರ್ಕ್ಸ್ ಚಿಂತನೆಗಳನ್ನು ಭಾರತೀಯರು ಈಗ ತಿರಸ್ಕರಿಸಿದ್ದಾರೆ. ಏಕೆಂದರೆ ಭಾರತೀಯತೆ ಇಲ್ಲದ ವಿಚಾರಗಳನ್ನು ಅವರು ಒಪ್ಪಿಕೊಳ್ಳುವುದಿಲ್ಲ’ ಎಂದು ಸಾಹಿತಿ ಪ್ರೊ. ಎಸ್‌.ಎಲ್‌.ಭೈರಪ್ಪ ವಿಶ್ಲೇಷಿಸಿದರು.

ಕೃಷ್ಣಧಾಮ ರಜತ ಮಹೋತ್ಸವ ಅಂಗವಾಗಿ ಶುಕ್ರವಾರ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ‘ಕೃಷ್ಣಾನುಗ್ರಹ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದ ಅವರು, ‘ನವ್ಯದ ಸಾಹಿತಿಗಳು, ಎಡಪಂಥೀಯರು ಹಾಗೂ ಮಾರ್ಕ್ಸ್‌ವಾದಿಗಳಿಂದಾಗಿ ಭಾರತೀಯತೆಯ ಬಗ್ಗೆ ಸಮಾಜದಲ್ಲಿ ತಿರಸ್ಕಾರ ಭಾವ ಬೆಳೆಯಿತು’ ಎಂದು ಆರೋಪಿಸಿದರು.

‘ನವೋದಯದ ಸಾಹಿತಿಗಳು ಪಾಶ್ಚಿಮಾತ್ಯ ಸಾಹಿತ್ಯ ಸ್ವರೂಪವನ್ನು ಮಾತ್ರ ಸ್ವೀಕರಿಸಿ, ಭಾರತೀಯ ತತ್ವಶಾಸ್ತ್ರದ ಹೂರಣವನ್ನು ಪ್ರಧಾನವಾಗಿ ಚಿತ್ರಿಸಿದರು. ಆದರೆ, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಹೊಸತರಲ್ಲಿ ಜವಾಹರಲಾಲ್‌ ನೆಹರೂ ಮಾರ್ಕ್ಸ್‌ವಾದ ಬಿತ್ತಿದರು. ಇದರ ಪ್ರಭಾವ ನವ್ಯರ ಮೇಲೆ ಹೆಚ್ಚಾಯಿತು. ಅವರು ಪಾಶ್ಚಿಮಾತ್ಯ ಸಾಹಿತ್ಯ ಸ್ವರೂಪದ ಜತೆಗೆ ಅಲ್ಲಿನ ತತ್ವಶಾಸ್ತ್ರವನ್ನೂ ಹೂರಣವಾಗಿಸಿದರು. ಬಳಿಕ ಎಡಪಂಥೀಯರು ತಮ್ಮ ವಾದವನ್ನು ಎಲ್ಲೆಡೆ ಬಿತ್ತಿದರು. ವಿಶ್ವವಿದ್ಯಾಲಯಗಳನ್ನು ಆಕ್ರಮಿಸಿಕೊಂಡರು. ಇದರಿಂದಾಗಿ ಭಾರತೀಯತೆಯ ಬಗ್ಗೆ ಸಮಾಜದಲ್ಲಿ ತಿರಸ್ಕಾರ ಭಾವ ಮೂಡಿತು’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ನಾನು ಇದೇ ಕಾಲಮಾನದಲ್ಲಿ ಕಾದಂಬರಿ ರಚಿಸುತ್ತಿದ್ದೆ. ಆಗ, ಭೈರಪ್ಪ ಕಾದಂಬರಿಕಾರನೇ ಅಲ್ಲ. ಆತ ಕೇವಲ ಚರ್ಚಾಪಟು, ಗೊಡ್ಡು ಭಾರತೀಯ ಎಂದೆಲ್ಲಾ ನವ್ಯರು ಹೀಯಾಳಿಸಿದರು. ಅಲ್ಲದೇ, ಪತ್ರಿಕೆಗಳೂ ನನ್ನನ್ನು ಬೆಂಬಲಿಸಲಿಲ್ಲ. ಒಂದೇ ಒಂದು ವಿಮರ್ಶೆ ಪ್ರಕಟಿಸಲಿಲ್ಲ. ಕೃತಿ ಬಿಡುಗಡೆಯಾದರೆ ಒಂದು ವಾಕ್ಯ ಬರೆಯಲಿಲ್ಲ. ಆದರೂ, ನಾನು ನವ್ಯ ಸಾಹಿತಿಗಳನ್ನು ಹಿಂದಿಕ್ಕಿ ದೇಶದ ಅತ್ಯುತ್ತಮ ಕಾದಂಬರಿಕಾರನಾಗಿ ಬೆಳೆದೆ. ಓದುಗರು ನನ್ನನ್ನು ಬೆಳೆಸಿದರು. ದೇಶದ ವಿವಿಧ ಭಾಷೆಗಳಿಗೆ ನನ್ನ ಕೃತಿಗಳು ಭಾಷಾಂತರಗೊಂಡವು’ ಎಂದು ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.