ಬೆಂಗಳೂರು: ‘ಕೆಆರ್‌ಎಸ್ ಜಲಾಶಯದ ಬಳಿ ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಾಣ ಯೋಜನೆಯನ್ನು ಪರಿಸರ ರಕ್ಷಣೆಯ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಕೈಬಿಡಬೇಕು’ ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕಾಂಗ್ರೆಸ್ ಮುಖಂಡ ಬಿ.ಕೆ. ಚಂದ್ರಶೇಖರ್ ಮನವಿ ಮಾಡಿದ್ದಾರೆ.
‘ಕೆಆರ್‌ಎಸ್ ಬಳಿ ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಿಸುವ ಸರ್ಕಾರದ ನಡೆ ತೀರಾ ಆಕ್ಷೇಪಣಿಯ. ಸಾರ್ವಜನಿಕ ವಲಯದಲ್ಲಿ ಇದಕ್ಕೆ ಸಾಕಷ್ಟು ವಿರೋಧವಿದೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
‘ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್. ಎಂ.ವಿ. ವಿಶ್ವೇಶ್ವರಯ್ಯನವರು ಕೆಆರ್‌ಎಸ್ ಜಲಾಶಯ ನಿರ್ಮಾಣ ಹಾಗೂ ಕನ್ನಂಬಾಡಿಯ ಸುತ್ತಮುತ್ತಲಿನ ಪರಿಸರವನ್ನು ಉಳಿಸಿಕೊಂಡು ಬಂದಿದ್ದು, ಅದಕ್ಕೆ ಈಗ ಆತಂಕ ಎದುರಾಗಿದೆ. ಅಮ್ಯೂಸ್‌ಮೆಂಟ್ ಪಾರ್ಕ್ ವಿಷಯವು ಜಲಸಂಪನ್ಮೂಲ ಇಲಾಖೆಯ ಜೊತೆಗೆ, ಪರಿಸರ ಮತ್ತು ಉದ್ದೇಶಿತ ಯೋಜನೆಯ ಕಾರಣಕ್ಕೆ ಪ್ರವಾಸೋದ್ಯಮ ಇಲಾಖೆಗೆ ಸಂಬಂಧಿಸಿದ ವಿಷಯ’ ಎಂದು ಪತ್ರದಲ್ಲಿ ಹೇಳಿದ್ದಾರೆ.
‘ಅಮ್ಯೂಸ್‌ಮೆಂಟ್ ಪಾರ್ಕ್ ಅನುಷ್ಠಾನದಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಈಗಾಗಲೇ ಸಮೀಕ್ಷೆ ಮಾಡಿರಬಹುದು. ಕೆಆರ್‌ಎಸ್‌ಗೆ ಭೇಟಿ ನೀಡುವ ಸಾರ್ವಜನಿಕರು ಪ್ಲಾಸ್ಟಿಕ್ ಕವರುಗಳು, ಬಾಟಲಿಗಳು, ಭೂಮಿಯೊಳಗೆ ಕರಗದಿರುವ ವಸ್ತುಗಳನ್ನು ಎಲ್ಲೆಂದರಲ್ಲಿ ಹಾಕುವುದರಿಂದ ಪರಿಸರ ಮತ್ತಷ್ಟು ನಾಶವಾಗುತ್ತದೆ. ನೂರಾರು ಢಾಬಾಗಳು, ಅಸಂಖ್ಯಾತ ಹೊಗೆಸೂಸುವ ವಾಹನಗಳ ದಟ್ಟಣೆಯಿಂದ ಐತಿಹಾಸಿಕ ಶ್ರೀರಂಗಪಟ್ಟಣವೂ ಸೇರಿದಂತೆ, ಮೈಸೂರು ನಗರಕ್ಕೆ ಹಾನಿಯಾಗಲಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್.ಎಂ.ವಿ. ವಿಶ್ವೇಶ್ವರಯ್ಯನವರು ಈ ಯೋಜನೆ ಸಾಕಾರಗೊಳಿಸುವುದಕ್ಕೆ ಒಪ್ಪುತ್ತಿರಲಿಲ್ಲ ಎನ್ನುವುದು ನನ್ನ ವಿಶ್ವಾಸ’ ಎಂದೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.