ADVERTISEMENT

ಸಿಎಂ ಎದುರು ತೀವ್ರ ಅಸಮಾಧಾನ ತೋಡಿಕೊಂಡ ಕೆ.ಎಸ್‌.ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2023, 12:33 IST
Last Updated 3 ಫೆಬ್ರುವರಿ 2023, 12:33 IST
   

ಬೆಂಗಳೂರು: ತಮಗೆ ಇನ್ನೂ ಸಚಿವ ಸ್ಥಾನ ನೀಡದೇ ಇರುವ ಬಗ್ಗೆ ಶಾಸಕ ಕೆ.ಎಸ್‌.ಈಶ್ವರಪ್ಪ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಳಿ ತೀವ್ರ ಅಸಮಾಧಾನ ತೋಡಿಕೊಂಡಿದ್ದಾರೆ.

‘ಪಕ್ಷ ಮತ್ತು ಸರ್ಕಾರಕ್ಕೆ ಏನು ಸಮಸ್ಯೆಗಳಿವೆಯೋ ಗೊತ್ತಿಲ್ಲ. ನನಗೆ ಸಚಿವ ಸ್ಥಾನ ನೀಡದೇ ಇದ್ದರೂ ಪರವಾಗಿಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲಿ’ ಎಂದು ಅವರು ವ್ಯಂಗ್ಯವಾಗಿ ನುಡಿದಿದ್ದಾರೆ. ಶುಕ್ರವಾರ ಮುಖ್ಯಮಂತ್ರಿಯವರ ಭೇಟಿಯ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.

‘ಗುತ್ತಿಗೆದಾರ ಸಂತೋಷ್‌ ಆತ್ಮಹತ್ಯೆ ಪ್ರಕರಣದಲ್ಲಿ ನಿರ್ದೋಷಿ ಎಂದು ತನಿಖೆ ಹೇಳಿದೆ. ಮತ್ತೆ ಸಂಪುಟಕ್ಕೆ ತೆಗೆದುಕೊಳ್ಳುವುದಾಗಿಯೂ ಮುಖ್ಯಮಂತ್ರಿ ಹೇಳಿದ್ದರು. ಆದರೆ ಸಂಪುಟಕ್ಕೆ ತೆಗೆದುಕೊಳ್ಳಲಿಲ್ಲ. ರಾಜಕೀಯದಲ್ಲಿ ಏನೆಲ್ಲ ಆಗುತ್ತದೆ ಗೊತ್ತಿಲ್ಲ? ಸಂತೋಷ್ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆಂದು ಕನಸು ಬಿದ್ದಿತ್ತಾ? ನನ್ನ ಮೇಲೆ ಆರೋಪ ಬಂದಿದ್ದರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ನನ್ನನ್ನು ಮತ್ತೆ ಮಂತ್ರಿ ಮಾಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿಯವರಿಗೆ ನೇರವಾಗಿ ಹೇಳಿದ್ದೇನೆ’ ಎಂದರು.

ADVERTISEMENT

ಸಿ.ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸಬೇಕು ಎಂದು ಶಾಸಕ ರಮೇಶ ಜಾರಕಿಹೊಳಿ ಒತ್ತಾಯಿಸಿದ್ದಾರೆ. ಸರ್ಕಾರ ಈ ಕುರಿತು ತನಿಖೆ ನಡೆಸುವುದು ಸೂಕ್ತ ಎಂದೂ ಈಶ್ವರಪ್ಪ ಹೇಳಿದರು.

ಶಿವಮೊಗ್ಗಕ್ಕೆ ಬೆಂಕಿ ಹಚ್ಚೊದು ಬೇಡ:

ಶಿವಮೊಗ್ಗ ಈಗ ತಣ್ಣಗಿದೆ. ಅಲ್ಲಿ ಬೆಂಕಿ ಹಚ್ಚುವ ಕೆಲಸ ಡಿ.ಕೆ.ಶಿವಕುಮಾರ್‌ ಮಾಡುವುದು ಬೇಡ ಎಂದು ಅವರು ಹೇಳಿದರು.

ಶಿವಮೊಗ್ಗದಲ್ಲಿ ಶಾಂತಿ ನೆಲೆಸಬೇಕು ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಹರ್ಷನ ಕೊಲೆ ಆದಾಗ ಬಿಜೆಪಿ ಕಾರ್ಯಕರ್ತರು ಮತ್ತು ಹಿಂದೂಗಳು ಸುಮ್ಮನೇ ಇರಬೇಕಿತ್ತೇ? ಈ ಬಗ್ಗೆ ಶಿವಕುಮಾರ್‌ ಉತ್ತರ ಕೊಡಲಿ. ಪಿಎಫ್‌ಐ ಗೂಂಡಾಗಳು ಹಿಂದುಗಳನ್ನು ಕೊಲೆ ಮಾಡಿದರೆ ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಅವರಿಗೆ ಖುಷಿ ಆಗುತ್ತದೆ. ಮುಸ್ಲಿಮರ ಕೊಲೆಯಾದರೆ ಬಿಜೆಪಿ ಕಾರ್ಯಕರ್ತ ಮೇಲೆ ಆರೋಪ ಮಾಡುತ್ತಾರೆ ಎಂದು ಈಶ್ವರಪ್ಪ ಹರಿಹಾಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.