ಡಿ.ಕೆ. ಶಿವಕುಮಾರ್ ಮತ್ತು ಕೆ.ಎಸ್. ಈಶ್ವರಪ್ಪ
ಹುಬ್ಬಳ್ಳಿ: ಹಿಂದುತ್ವದ ಪರ ನಿಲುವು ಪ್ರಕಟಿಸುವ ಮೂಲಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇತರರಿಗೆ ಮಾದರಿಯಾಗಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿರಾರರೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಅವರಿಗೆ ಈಗಾಲಾದರೂ ಬುದ್ಧಿ ಬಂದಿದೆ. ಸಿಎಂ ಸಿದ್ದರಾಮಯ್ಯ ಅವರಿಗೂ ಬುದ್ಧಿ ಬರಲಿ. ಡಿ.ಕೆ. ಶಿವಕುಮಾರ್ ಅವರ ಹಿಂದುತ್ವದ ನಿಲುವು ನಾಟಕವೋ, ನಿಜವೋ ದೇವರು ತೀರ್ಮಾನ ಮಾಡುತ್ತಾನೆ ಎಂದರು.
ಸ್ವಾಂತಂತ್ರ್ಯ ಪೂರ್ವದ ಕಾಂಗ್ರೆಸ್ಸಿಗರು ಹೋರಾಟ ಮಾಡಿದ್ದೇ ಹಿಂದುತ್ವವನ್ನು ಮತ್ತೆ ವೈಭವೀಕರಿಸುವ ಉದ್ದೇಶದಿಂದ, ಹಳೇ ಕಾಂಗ್ರೆಸ್ಸಿಗರ ರಕ್ತದಲ್ಲಿ ಹಿಂದುತ್ವ ಈಗಲೂ ಇದೆ. ಎಲ್ಲರೂ ಧರ್ಮದ್ರೋಹಿಗಳಲ್ಲ. ಕೆಲವರು ನಾಟಕೀಯವಾಗಿ ಮತಬ್ಯಾಂಕ್‌ಗಾಗಿ ಮುಸ್ಲಿಮರನ್ನು ಓಲೈಸುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಡಿ.ಕೆ. ಶಿವಕುಮಾರ್ ಕುಂಭಮೇಳದಲ್ಲೂ ಪಾಲ್ಗೊಂಡಿದ್ದರು. ಅವರಿಗೆ ಹಿಂದುತ್ವದ ಜಾಗೃತಿ ಉಂಟಾಗಿದೆ. ಮಹಾತ್ಮ ಗಾಂಧಿ ಸಹ ಹಿಂದುತ್ವ ಪ್ರತಿಪಾದಿಸಿದ್ದರು. ಅವರ ಸಮಾಧಿ ಮೇಲೆ ಹೇ ರಾಮ್ ಎಂದು ಬರೆಯಲಾಗಿದೆಯೇ ಹೊರತು ಹೇ ಅಲ್ಲ, ಹೇ ಯೇಸು ಎಂದು ಬರೆದಿಲ್ಲ. ಹಿಂದುತ್ವ ಬಿಜೆಪಿ ಸ್ವತ್ತೂ ಅಲ್ಲ. ಸರ್ವ ಜನರ ಸುಖ ಬಯಸುವುದೇ ಹಿಂದುತ್ವ ಎಂದರು.
ಹಿಂದುತ್ವ ನಾಶಮಾಡಲು ಯತ್ನಿಸಿದ ವ್ಯಕ್ತಿ, ಪಕ್ಷ ದೇಶದಲ್ಲಿ ನಿರ್ನಾಮ ಆಗುತ್ತಿದೆ. ರಾಜಕಾರಣಿಗಳ ಮಗಳನ್ನು ಮುಸ್ಲಿಮರು ಆಸೆ ತೋರಿಸಿ, ಅನ್ಯಾಯ ಮಾಡಿದಾಗ ಲವ್ ಜಿಹಾದ್ ವಿರುದ್ಧದ ಕಾನೂನು ಸರಿ ಎಂದು ಅವರಿಗೆ ಗೊತ್ತಾಗುತ್ತದೆ. ಯಾರನ್ನೋ ತೃಪ್ತಿಪಡಿಸಲು ಪ್ರಮೋದ್ ಮುತಾಲಿಕ ಅವರಂಥ ರಾಷ್ಟ್ರಭಕ್ತರಿಗೆ ತೊಂದರೆ ಕೊಡುವುದು ಸರಿಯಲ್ಲ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.