ADVERTISEMENT

ಜಿ.ಪಂ., ತಾ.ಪಂ. ಚುನಾವಣೆ ಸದ್ಯಕ್ಕೆ ಅನುಮಾನ: ಕೆ.ಎಸ್‌. ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2022, 8:42 IST
Last Updated 11 ಫೆಬ್ರುವರಿ 2022, 8:42 IST
ಸಚಿವ ಕೆ.ಎಸ್‌. ಈಶ್ವರಪ್ಪ
ಸಚಿವ ಕೆ.ಎಸ್‌. ಈಶ್ವರಪ್ಪ   

ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಪ್ರತ್ಯೇಕ ಮೀಸಲಾತಿ ನೀಡದಂತೆ ಸುಪ್ರೀಂಕೋರ್ಟ್‌ ತಡೆಯಾಜ್ಞೆ ನೀಡಿರುವುದರಿಂದ ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಗಳ ಚುನಾವಣೆ ಸದ್ಯಕ್ಕೆ ನಡೆಯುವುದು ಅನುಮಾನ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಅವರು, ಹಿಂದುಳಿದ ವರ್ಗಗಳ ಜನರೂ ಸಾಮಾನ್ಯ ವರ್ಗಕ್ಕೆ ಸೇರುತ್ತಾರೆ ಎಂದು ಸುಪ್ರೀಂಕೋರ್ಟ್‌ ಇತ್ತೀಚೆಗೆ ಹೇಳಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಪ್ರತ್ಯೇಕ ಮೀಸಲಾತಿ ನೀಡಬೇಕಾದರೆ ಜನಸಂಖ್ಯೆ ಮತ್ತು ರಾಜಕೀಯ ಪ್ರಾತಿನಿಧ್ಯದ ಕುರಿತು ನಿಖರ ಅಂಕಿಅಂಶ ಬೇಕು ಎಂದು ನ್ಯಾಯಾಲಯ ತಿಳಿಸಿದೆ. ಇದರಿಂದ ಚುನಾವಣೆ ನಡೆಸುವುದು ಕಷ್ಟವಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಸಲು ಸರ್ಕಾರ ಸಿದ್ಧತೆ ನಡೆಸಿತ್ತು. ಕ್ಷೇತ್ರ ಮರು ವಿಂಗಡಣೆ ಮತ್ತು ಮೀಸಲಾತಿ ನಿಗದಿಗೆ ನಿವೃತ್ತ ಐಎಎಸ್‌ ಅಧಿಕಾರಿ ಲಕ್ಷ್ಮೀನಾರಾಯಣ ಅಧ್ಯಕ್ಷತೆಯಲ್ಲಿ ಆಯೋಗವನ್ನೂ ರಚಿಸಲಾಗಿತ್ತು. ಆದರೆ, ಸುಪ್ರೀಂಕೋರ್ಟ್‌ ತೀರ್ಪಿನಿಂದ ಪ್ರಕ್ರಿಯೆ ಮುಂದುವರಿಸಲು ಆಗುತ್ತಿಲ್ಲ. ಆದ್ದರಿಂದ ಈ ಸರ್ಕಾರದ ಅವಧಿಯಲ್ಲಿ ಚುನಾವಣೆ ನಡೆಸುವುದು ಕಷ್ಟ ಎಂದು ಹೇಳಿದರು.

ADVERTISEMENT

ಹಿಂದುಳಿದ ವರ್ಗಗಳಿಗೆ ಪ್ರತ್ಯೇಕ ಮೀಸಲಾತಿ ನೀಡದಂತೆ ಸುಪ್ರೀಂಕೋರ್ಟ್‌ ನೀಡಿರುವ ಸೂಚನೆ ಕುರಿತು ಪ್ರತಿಪಕ್ಷಗಳು ಚರ್ಚೆ ನಡೆಸಬೇಕು. ಕಾನೂನುಬದ್ಧವಾಗಿಯೇ ಚುನಾವಣೆ ನಡೆಯಬೇಕು. ಈ ಕುರಿತು ಕಾನೂನು ತಜ್ಞರ ಜತೆ ಚರ್ಚಿಸಿದ ಬಳಿಕ ಮುಂದುವರಿಯಬೇಕಿದೆ ಎಂದರು.

ರಾಷ್ಟ್ರ ಧ್ವಜದ ಬಗ್ಗೆ ಮಾತನಾಡುವುದಿಲ್ಲ: ಈಶ್ವರಪ್ಪ ನಾಲಾಯಕ್‌ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ʼಸಿದ್ದರಾಮಯ್ಯ ಹೇಳಿಕೆ ಬಗ್ಗೆ ಮತ್ತೆ ಪ್ರತಿಕ್ರಿಯಿಸುತ್ತೇನೆ. ರಾಷ್ಟ್ರ ಧ್ವಜದ ವಿಚಾರದಲ್ಲಿ ನಾನು ಮಾತನಾಡುವುದಿಲ್ಲ. ಈಗ ಎಲ್ಲವೂ ಶಾಂತವಾಗಿದೆ. ದಯವಿಟ್ಟು ಅದರ ಬಗ್ಗೆ ಮಾತನಾಡಬೇಡಿʼ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.