ADVERTISEMENT

‍ಪ್ರಚೋದನಕಾರಿ ಭಾಷಣ: ರಿಟ್‌ ಅರ್ಜಿ ವಾಪಸು ಪಡೆದ ಕೆ.ಎಸ್.ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2025, 23:57 IST
Last Updated 23 ಅಕ್ಟೋಬರ್ 2025, 23:57 IST
ಕೆ.ಎಸ್.ಈಶ್ವರಪ್ಪ
ಕೆ.ಎಸ್.ಈಶ್ವರಪ್ಪ   

ಬೆಂಗಳೂರು: ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಡಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವಾಪಸು ಪಡೆದುಕೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಯನ್ನು ರದ್ದುಪಡಿಸುವಂತೆ ಕೋರಿ ಈಶ್ವರಪ್ಪ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಈಶ್ವರಪ್ಪ ಪರ ಹೈಕೋರ್ಟ್ ವಕೀಲ ಎಂ.ವಿನೋದ್ ಕುಮಾರ್, ‘ಪ್ರಕರಣ ರದ್ದುಪಡಿಸುವಂತೆ ಕೋರಿ ಈ ಅರ್ಜಿ ಸಲ್ಲಿಸಲಾಗಿದೆ. ಆದರೆ, ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆಯಾದ ಬಳಿಕ ಕಾನೂನಿನಲ್ಲಿ ಇರುವ ಅವಕಾಶಗಳಡಿ ಸೂಕ್ತ ರೀತಿಯಲ್ಲಿ ಹೈಕೋರ್ಟ್‌ಗೆ ಪುನಃ ಅರ್ಜಿ ಸಲ್ಲಿಸಲಾಗುವುದು. ಆದ್ದರಿಂದ, ಈ ಮೊದಲು ಸಲ್ಲಿಸಲಾಗಿರುವ ಅರ್ಜಿಯನ್ನು ವಾಪಸು ಪಡೆದುಕೊಳ್ಳಲಾಗುವುದು’ ಎಂದು ನ್ಯಾಯಪೀಠಕ್ಕೆ ವಿವರಿಸಿದರು. ಈ ಹೇಳಿಕೆಯನ್ನು ದಾಖಲಿಸಿಕೊಂಡ ನ್ಯಾಯಪೀಠ ಅರ್ಜಿ ವಜಾಗೊಳಿಸಿ ಆದೇಶಿಸಿತು. 

ADVERTISEMENT

ಪ್ರಕರಣವೇನು?:

‘ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದಿದ್ದ ಈದ್ ಮಿಲಾದ್ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆದಿದೆ’ ಎಂಬ ಕಾರಣಕ್ಕೆ ಗಲಭೆ ನಡೆದಿತ್ತು. ಈ ಸಂಬಂಧ 2023ರ ಅಕ್ಟೋಬರ್ 12ರಂದು ಬಿಜೆಪಿ ಪ್ರತಿಭಟನೆ ನಡೆಸಿತ್ತು. ಇದರಲ್ಲಿ ಭಾಗಿಯಾಗಿ ಭಾಷಣ ಮಾಡಿದ್ದ ಕೆ.ಎಸ್.ಈಶ್ವರಪ್ಪ, ‘ಈತನಕ ಹಿಂದೂ ಸಮಾಜ ಕಾನೂನು ಕೈಗೆತ್ತಿಕೊಂಡಿಲ್ಲ. ಹರ್ಷನ ಕೊಲೆಯಾದಾಗ ನಾವು ಲಾಂಗು, ಮಚ್ಚು ಹಿಡಿದುಕೊಂಡು ಮುಸ್ಲಿಮರ ಬೀದಿಗೆ ಹೋಗಿದ್ದರೆ ಮಾರಿ ಜಾತ್ರೆಯಲ್ಲಿ ಕುರಿ ಕಡದಂಗೆ ಕಡಿದು ಹಾಕಿ ಬಿಡುತ್ತಿದ್ದೆವು’ ಎಂದು ಹೇಳಿದ್ದರು. ಈ ಹೇಳಿಕೆಯ ವಿರುದ್ಧ ಜಯನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.