ಬೆಂಗಳೂರು: ಗೆಜೆಟೆಡ್ ಪ್ರೊಬೆಷನರಿ ಅಧಿಕಾರಿಗಳ 384 ಗ್ರೂಪ್ ‘ಎ’ ಮತ್ತು ‘ಬಿ’ ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ ಪೂರ್ವಭಾವಿ ಮರು ಪರೀಕ್ಷೆಗೆ ಆದೇಶಿಸಲು, ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ (ಕೆಎಸ್‌ಎಟಿ) ನಿರಾಕರಿಸಿದೆ.
ಈ ಸಂಬಂಧ ಮಾಯಗಾನಹಳ್ಳಿಯ ಎಂ.ಕೃಷ್ಣ, ಕೋಲಾರದ ಡಿ.ಪವಿತ್ರಾ ಹಾಗೂ ಚಳ್ಳಕೆರೆಯ ಎಸ್.ರಮೇಶ್ ಸೇರಿದಂತೆ ಒಟ್ಟು 80 ಅಭ್ಯರ್ಥಿಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಾಂಗ ಸದಸ್ಯ ಎಸ್.ವೈ.ವಟವಟಿ ಮತ್ತು ಆಡಳಿತ ಸದಸ್ಯೆ ಅಮಿತಾ ಪ್ರಸಾದ್ ಅವರಿದ್ದ ದ್ವಿಸದಸ್ಯ ಪೀಠ ಪ್ರಕಟಿಸಿದೆ.
‘ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಸಲ್ಲಿಸಿರುವ ಎಲ್ಲಾ ಅಂಶಗಳನ್ನು ಪರಿಶೀಲಿಸಿದ ಬಳಿಕ ಈಗಾಗಲೇ ಒಮ್ಮೆ ಪರೀಕ್ಷೆ ರದ್ದುಗೊಳಿಸಿ, ಮರು ಪೂರ್ವಭಾವಿ ಪರೀಕ್ಷೆ ನಡೆಸಲಾಗಿದೆ. ಈ ಹಂತದಲ್ಲಿ ಮರು ಪ್ರಾಥಮಿಕ ಪರೀಕ್ಷೆಗೆ ಆದೇಶಿಸಲು ಸಾಧ್ಯವಿಲ್ಲ. ಪ್ರಶ್ನೆಪತ್ರಿಕೆಯ ಅನುವಾದದಲ್ಲಿ ಆಗಿರುವ ಲೋಪಗಳ ಬಗ್ಗೆ ತಜ್ಞರ ಸಮಿತಿ ಮರು ಪರಿಶೀಲನೆ ನಡೆಸಿ ತೀರ್ಮಾನಿಸಬಹುದು’ ಎಂದು ಪೀಠವು ಆದೇಶದಲ್ಲಿ ವಿವರಿಸಿದೆ. ಈಗಾಗಲೇ ಕೆಪಿಎಸ್‌ಸಿ ನಿಗದಿಪಡಿಸಿರುವಂತೆ ಮುಖ್ಯ ಪರೀಕ್ಷೆಗಳು ಇದೇ 28ರಿಂದ ಆರಂಭವಾಗಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.