ಜಿ. ಪರಮೇಶ್ವರ
ಬೆಂಗಳೂರು: ‘ಮಾರ್ಚ್ ತಿಂಗಳಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯಗಳು ನಡೆಯಲಿವೆ. ಅಷ್ಟರಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು (ಕೆಎಸ್‌ಸಿಎ) ಅಲ್ಪಾವಧಿ ಷರತ್ತು ಪೂರೈಸಬೇಕು. ಅದಕ್ಕೆ ಬದ್ಧವಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳ ಆಯೋಜನೆಗೆ ಅನುಮತಿ ನೀಡಲಾಗಿದೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಸ್ಪಷ್ಟಪಡಿಸಿದರು.
ಚಿನ್ನಸ್ವಾಮಿ ಮೈದಾನದಲ್ಲಿ ಕ್ರಿಕೆಟ್ ಪಂದ್ಯ ಆಯೋಜನೆಗೆ ಗೃಹ ಇಲಾಖೆ ಅನುಮತಿ ನೀಡಿದ ಕುರಿತು ಸುದ್ದಿಗಾರರಿಗೆ ಭಾನುವಾರ ಪ್ರತಿಕ್ರಿಯಿಸಿದ ಅವರು, ‘ಕ್ರೀಡಾಂಗಣದ ಪರಿಶೀಲನೆಗೆ ಸರ್ಕಾರ ರಚಿಸಿದ್ದ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹ ನೇತೃತ್ವದ ವಿಚಾರಣಾ ಆಯೋಗವು ಹಲವು ಶಿಫಾರಸುಗಳನ್ನು ಮಾಡಿದೆ. ಆ ಶಿಫಾರಸುಗಳ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿದ ನಂತರ ಕೆಎಸ್ಸಿಎಗೆ ಕಳುಹಿಸಿ ಪಾಲಿಸುವಂತೆ ಸೂಚಿಸಲಾಗಿತ್ತು’ ಎಂದರು.
‘ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಸಲು ಅನುಮತಿ ಕೇಳಿ ಕೆಎಸ್‌ಸಿಎ ಹೊಸ ಸಮಿತಿಯು ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಈ ಕುರಿತು ಪರಿಶೀಲಿಸಿ ವರದಿ ನೀಡಲು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ ರಾವ್ ನೇತೃತ್ವದಲ್ಲಿ ಸಮಿತಿ ಮಾಡಿದ್ದೆವು. ಆ ಸಮಿತಿಯೂ ವರದಿ ನೀಡಿದೆ. ದೀರ್ಘಾವಧಿ ಹಾಗೂ ಅಲ್ಪಾವಧಿಯಲ್ಲಿ ಷರತ್ತು ಪೂರೈಸುವುದಾಗಿ ಕೆಎಸ್‌ಸಿಎ ಲಿಖಿತವಾಗಿ ಭರವಸೆ ನೀಡಿದೆ. ನಾವು ಅವರ ಮೇಲೆ ವಿಶ್ವಾಸ ಇಟ್ಟಿದ್ದೇವೆ. ಈಗಾಗಲೇ ಕ್ರೀಡಾಂಗಣದ ಗೇಟ್ ಕಿತ್ತು ಕೆಲಸ ಮಾಡುತ್ತಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.