ADVERTISEMENT

ಕೆಸೆಟ್‌: ಅರ್ಜಿ ಸಲ್ಲಿಕೆಗೆ ತಾಂತ್ರಿಕ ಸಮಸ್ಯೆ

ಕೆಸೆಟ್‌ ಪರೀಕ್ಷಾ ಕೇಂದ್ರಗಳ ಆಯ್ಕೆಯಲ್ಲೂ ತಾರತಮ್ಯ

ಆರ್.ಜಿತೇಂದ್ರ
Published 24 ಆಗಸ್ಟ್ 2024, 23:36 IST
Last Updated 24 ಆಗಸ್ಟ್ 2024, 23:36 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಮೈಸೂರು: ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗೆ (ಕೆಸೆಟ್‌) ಆನ್‌ಲೈನ್ ನೋಂದಣಿ ಪ್ರಕ್ರಿಯೆಯಲ್ಲಿ ತಾಂತ್ರಿಕ ದೋಷ ಉಂಟಾಗಿ ಸಾವಿರಾರು ಅಭ್ಯರ್ಥಿಗಳು ಪರದಾಡುವಂತಾಗಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನವೆಂಬರ್‌ 24ರಂದು ಪರೀಕ್ಷೆ ನಿಗದಿ ಮಾಡಿದ್ದು, 41 ವಿಷಯಗಳಲ್ಲಿ ಪರೀಕ್ಷೆ ಬರೆಯಲು ಅವಕಾಶವಿದೆ. ಆನ್‌ಲೈನ್‌ ಅರ್ಜಿ ಸಲ್ಲಿಸಲು ಆಗಸ್ಟ್‌ 28 ಕೊನೇ ದಿನ. ಆದರೆ ಅರ್ಜಿ ಸಲ್ಲಿಸುವ ವೇಳೆ, ಮೀಸಲಾತಿ ಪ್ರವರ್ಗ ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆಯ್ಕೆ ಬಟನ್‌ ಒತ್ತಿ ಜಾತಿ ಪ್ರಮಾಣಪತ್ರದ ಆರ್‌.ಡಿ. ಸಂಖ್ಯೆ ಸಲ್ಲಿಸುತ್ತಲೇ ವೆಬ್‌ಸೈಟ್ ಚಟುವಟಿಕೆ ನಿಲ್ಲುತ್ತಿದ್ದು, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಳ್ಳುತ್ತಿಲ್ಲ.

ADVERTISEMENT

ಅರ್ಜಿ ಸಲ್ಲಿಸಲು ಸಾಮಾನ್ಯ ವರ್ಗದವರಿಗೆ ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇ 55 ಅಂಕ, ಹಿಂದುಳಿದ ವರ್ಗಗಳು ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶೇ 50 ಅಂಕ ನಿಗದಿಪಡಿಸಲಾಗಿದೆ. ಮೀಸಲಾತಿ ಬೇಕೆನ್ನುವವರು ಜಾತಿ ಪ್ರಮಾಣಪತ್ರದ ಸಂಖ್ಯೆಯನ್ನು ದಾಖಲಿಸುವುದು ಕಡ್ಡಾಯ. ಅದನ್ನು ಆನ್‌ಲೈನ್‌ ಮೂಲಕವೇ ಪರಿಶೀಲಿಸಿ ನೈಜತೆಯನ್ನು ತಿಳಿದುಕೊಳ್ಳಲಾಗುತ್ತದೆ. ಆದರೆ, ‘ಸಂಖ್ಯೆಯನ್ನು ನೋಂದಾಯಿಸಲು ಆಗುತ್ತಿಲ್ಲ’ ಎಂಬುದು ಅಭ್ಯರ್ಥಿಗಳ ಅಳಲು.

ಕೇಂದ್ರದ ಗೊಂದಲ:

ಒಟ್ಟು 41 ವಿಷಯಗಳ ಪೈಕಿ, ಎ–ಭಾಗದಲ್ಲಿರುವ ವಾಣಿಜ್ಯ ಶಾಸ್ತ್ರ, ಕನ್ನಡ, ಅರ್ಥಶಾಸ್ತ್ರ, ಇಂಗ್ಲಿಷ್‌, ರಾಜ್ಯಶಾಸ್ತ್ರ ಸೇರಿದಂತೆ 18 ವಿಷಯಗಳನ್ನು ಆಯ್ಕೆ ಮಾಡಿಕೊಂಡವರಿಗೆ ಮಾತ್ರ ರಾಜ್ಯದ 12 ಪರೀಕ್ಷಾ ಕೇಂದ್ರಗಳಲ್ಲಿ ಯಾವುದನ್ನಾದರೂ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ.

ಆದರೆ, ಭೂಗೋಳ ವಿಜ್ಞಾನ, ಮನೋವಿಜ್ಞಾನ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ, ಕಾನೂನು, ಸಂಸ್ಕೃತ, ಸಾರ್ವಜನಿಕ ಆಡಳಿತ, ಜಾನಪದ ಸಾಹಿತ್ಯ, ಉರ್ದು, ಮರಾಠಿ, ಸಂಗೀತ, ದೃಶ್ಯಕಲೆ ಸೇರಿದಂತೆ ಉಳಿದ 23 ವಿಷಯಗಳ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರಗಳ ಆಯ್ಕೆಯನ್ನೇ ನೀಡಿಲ್ಲ. ಅವರೆಲ್ಲರೂ ಕಡ್ಡಾಯವಾಗಿ ಬೆಂಗಳೂರಿನಲ್ಲೇ ಪರೀಕ್ಷೆ ಬರೆಯಬೇಕು.

‘ಪತಿ–ಪತ್ನಿ, ಸಹಪಾಠಿಗಳು, ಸ್ನೇಹಿತರು ಬೇರೆ ವಿಷಯ ಆಯ್ಕೆ ಮಾಡಿಕೊಂಡಿದ್ದರೆ, ಒಂದೇ ಪರೀಕ್ಷಾ ಕೇಂದ್ರದಲ್ಲಿ ಎಲ್ಲರೂ ಪರೀಕ್ಷೆ ಬರೆಯಲು ಅವಕಾಶ ಇಲ್ಲದಂತಾಗಿದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಬೆಂಗಳೂರಿಗೇ ಬರಬೇಕು. ಎಲ್ಲ 41 ವಿಷಯಗಳಿಗೂ ರಾಜ್ಯದ ಎಲ್ಲ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು’ ಎಂಬುದು ಅಭ್ಯರ್ಥಿಗಳ ಆಗ್ರಹ.

ಈ ಕುರಿತು ಪ್ರತಿಕ್ರಿಯೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ದೂರವಾಣಿ ಸಂಪರ್ಕಕ್ಕೆ ಲಭ್ಯವಾಗಲಿಲ್ಲ.

ಅರ್ಜಿ ಸಲ್ಲಿಕೆ ವೇಳೆ ಜಾತಿ ಪ್ರಮಾಣಪತ್ರ ಸಂಖ್ಯೆ ನಮೂದಿಸಲು ಸಾಧ್ಯವಾಗುತ್ತಿಲ್ಲ. ಕೂಡಲೇ ತಾಂತ್ರಿಕ ದೋಷ ಸರಿಪಡಿಸಬೇಕು.
ಸಮರ್ಥ್‌, ಪರೀಕ್ಷಾಕಾಂಕ್ಷಿ, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.