ADVERTISEMENT

496 ಔಷಧಗಳ ಖರೀದಿ ಪ್ರಕ್ರಿಯೆ ಆರಂಭ: ಕೆಎಸ್‌ಎಂಎಸ್‌ಸಿಎಲ್‌

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 16:24 IST
Last Updated 11 ಫೆಬ್ರುವರಿ 2026, 16:24 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ‘ಔಷಧಗಳ ಕೊರತೆ ನಿವಾರಣೆಗೆ ಸಂಬಂಧಿಸಿದಂತೆ 496 ಔಷಧಗಳ ಖರೀದಿ ಪ್ರಕ್ರಿಯೆ ನಡೆದಿದೆ’ ಎಂದು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ (ಕೆಎಸ್‌ಎಂಎಸ್‌ಸಿಎಲ್‌) ತಿಳಿಸಿದೆ. 

‘ಈಗಾಗಲೇ 99 ಔಷಧಗಳಿಗೆ ಸಂಬಂಧಿಸಿದಂತೆ ಅರ್ಹ ಬಿಡ್‌ದಾರರಿಗೆ ದೃಢೀಕರಣ ಪತ್ರ ನೀಡಲಾಗಿದೆ. ಉಳಿದ 327 ಔಷಧಗಳ ಖರೀದಿಗೆ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈ ಟೆಂಡರ್ ಪ್ರಕ್ರಿಯೆಯನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು. ಮಾರ್ಚ್ ತಿಂಗಳಲ್ಲಿ ಪೂರೈಸುವ ಔಷಧಗಳಲ್ಲಿ ಚಿಕಿತ್ಸೆಗೆ ಅಗತ್ಯವಾಗಿರುವ, 25 ಪ್ರಮುಖ ‘ಆ್ಯಂಟಿಬಯೋಟಿಕ್‌’ಗಳು, ಐವಿ ದ್ರಾವಣಗಳು ಸೇರಿವೆ’ ಎಂದು ಹೇಳಿದೆ. 

ADVERTISEMENT

‘ಖರೀದಿ ಪ್ರಕ್ರಿಯೆ ಪ್ರಗತಿಯಲ್ಲಿರುವ ಅವಧಿಯಲ್ಲಿ, ತುರ್ತು ಅಥವಾ ಅಗತ್ಯ ಔಷಧಗಳು ಕೊರತೆಯಾದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿನ ರೋಗಿಗಳಿಗೆ ತೊಂದರೆಯಾಗಬಾರದು. ಈ ಉದ್ದೇಶದಿಂದಲೇ ‘ಪ್ರಧಾನಮಂತ್ರಿ ಭಾರತೀಯ ಜನೌಷಧಿ ಯೋಜನೆ’ಯಡಿ ಅಧಿಕೃತ ವಿತರಕರ ಮೂಲಕ ಜೆನೆರಿಕ್ ಔಷಧಗಳನ್ನು ಆರೋಗ್ಯ ಸಂಸ್ಥೆಗಳು ತಾತ್ಕಾಲಿಕವಾಗಿ ಖರೀದಿಸುವ ವ್ಯವಸ್ಥೆ ಕಲ್ಪಿಸಲು, ‘ಫಾರ್ಮಾ ಆ್ಯಂಡ್ ಮೆಡಿಕಲ್ ಬ್ಯೂರೊ ಆಫ್ ಇಂಡಿಯಾ’ಗೆ ಪ್ರಸ್ತಾವ ಸಲ್ಲಿಸಲಾಗಿದೆ. ಈ ಸಂಬಂಧ ₹ 50 ಕೋಟಿ ನಿಧಿ ಮೀಸಲಿಡಲು ತೀರ್ಮಾನಿಸಲಾಗಿದೆ. ಆರೋಗ್ಯ ಸಂಸ್ಥೆಗಳು ಅಗತ್ಯವಿದ್ದಲ್ಲಿ ‘ಗವರ್ನ್ಮೆಂಟ್ ಇ ಮಾರ್ಕೇಟ್‌ಪ್ಲೇಸ್‌’ ಪೋರ್ಟಲ್ ಮೂಲಕ ನೇರವಾಗಿ ಔಷಧಗಳನ್ನು ಖರೀದಿಸಲು ಅವಕಾಶ ಕಲ್ಪಿಸಲಾಗಿದೆ’ ಎಂದು ಸ್ಪಷ್ಟಪಡಿಸಿದೆ.

‘ಅಗತ್ಯ ಔಷಧಗಳ ಕೊರತೆ ನೀಗಿಸಲು 4ಜಿ ವಿನಾಯಿತಿಯಡಿ ಈಗಾಗಲೇ 49 ಪ್ರಮುಖ ಔಷಧಗಳನ್ನು ಖರೀದಿ ಮಾಡಿ, ಸರ್ಕಾರಿ ಆರೋಗ್ಯ ಸಂಸ್ಥೆಗಳಿಗೆ ಸರಬರಾಜು ಮಾಡಲಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.