ADVERTISEMENT

ಕೆಎಸ್‌ಒಯು: ವಿದ್ಯಾರ್ಥಿಗಳಿಗೆ ಸಿಗದ ಅಂಕಪಟ್ಟಿ

ಆರು ಸಾವಿರ ಮಂದಿ ಪರದಾಟ

ನೇಸರ ಕಾಡನಕುಪ್ಪೆ
Published 12 ಜೂನ್ 2019, 19:45 IST
Last Updated 12 ಜೂನ್ 2019, 19:45 IST
ಪ್ರೊ.ಎಸ್‌.ವಿದ್ಯಾಶಂಕರ್‌
ಪ್ರೊ.ಎಸ್‌.ವಿದ್ಯಾಶಂಕರ್‌   

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ (ಕೆಎಸ್‌ಒಯು) 2010–11 ರಿಂದ 2012–13ನೇ ಸಾಲಿನವರೆಗೆ ವ್ಯಾಸಂಗ ಮಾಡಿರುವ ಆರು ಸಾವಿರ ವಿದ್ಯಾರ್ಥಿಗಳಿಗೆ ಇದುವರೆಗೆ ಅಂಕಪಟ್ಟಿ ನೀಡದೇ ಲೋಪ ಎಸಗಿರುವುದು ತಿಳಿದು ಬಂದಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿರುವ ಯೋಧ, ಚಾಮರಾಜನಗರದ ರಾಚಪ್ಪ ಅವರು ಆರು ತಿಂಗಳ ಹಿಂದೆ ವಿಶ್ವವಿದ್ಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. 2010–11ನೇ ಸಾಲಿನಲ್ಲಿ ಬಿ.ಎ ಕೋರ್ಸಿಗೆ ಸೇರಿದ್ದ ತಮಗೆ ಇದುವರೆಗೂ ಅಂಕಪಟ್ಟಿ ನೀಡಿಲ್ಲ ಎಂದು ದೂರಿದ್ದರು. ಇದನ್ನು ಗಮನಿಸಿದ ಪರೀಕ್ಷಾಂಗ ವಿಭಾಗವು ಪರಿಶೀಲನೆ ನಡೆಸಿದಾಗ ಅಂಕಪಟ್ಟಿ ವಿತರಣೆ ಆಗದಿರುವುದು ಗೊತ್ತಾಗಿದೆ.

ಪದವಿ, ಸ್ನಾತಕೋತ್ತರ ಪದವಿಗೆ ಸೇರಿದ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ದೊರೆತಿಲ್ಲ. 2010–11ನೇ ಸಾಲಿನ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 2012–13ನೇ ಸಾಲಿನ ಪದವೀಧರರಿಗಾಗಿ ಈಚೆಗಷ್ಟೇ ಘಟಿಕೋತ್ಸವ ನಡೆಸಲಾಗಿತ್ತು. ಆದರೆ, ಅವರಲ್ಲೂ ಕೆಲವರಿಗೆ ಅಂಕಪಟ್ಟಿ ಹಾಗೂ ಪದವಿ ಪ್ರಮಾಣಪತ್ರ ನೀಡಿಲ್ಲ ಎಂದು ಸಾವಿರಕ್ಕೂ ಹೆಚ್ಚು ದೂರುಗಳು ಬಂದಿವೆ.

ADVERTISEMENT

‘ವಿಶ್ವವಿದ್ಯಾಲಯಕ್ಕೆ 2013–14ನೇ ಸಾಲಿನಿಂದ ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ಮಾನ್ಯತೆ ರದ್ದು ಮಾಡಿತ್ತು. ಮತ್ತೆ ಮಾನ್ಯತೆ ಪಡೆಯಲು ಹೋರಾಟವೂ ನಡೆದಿತ್ತು. ಹಾಗೆಂದು, ಹಿಂದಿನ ಸಾಲಿನ ವಿದ್ಯಾರ್ಥಿಗಳಿಗೆ ಅಂಕಪಟ್ಟಿ, ಪದವಿ ಪ್ರಮಾಣಪತ್ರ ನೀಡದಿದ್ದರೆ ಹೇಗೆ? ಈಗ ದಾಖಲಾತಿಗಳ ಪರಿಶೀಲನೆ ನಡೆಯುತ್ತಿದೆ. ಅಂಕಪಟ್ಟಿ, ಪ್ರಮಾಣಪತ್ರ ಒದಗಿಸಲು ಸಿದ್ಧತೆ ನಡೆದಿದೆ’ ಎಂದು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್‌ ತಿಳಿಸಿದರು.

ಸಂಶೋಧನೆಗೂ ತೊಂದರೆ

‘ಪಿಎಚ್‌.ಡಿ ಪದವಿ ಪಡೆಯಲು ಬಯಸುವವರಿಗೂ ತೊಂದರೆಯಾಗಿದೆ. 2002ರಲ್ಲಿ ಎಂ.ಎ ಇಂಗ್ಲಿಷ್ ಕೋರ್ಸ್‌ ಮಾಡಿರುವ ಜೆ.ಶಿವಕುಮಾರ ಅವರು ಪ್ರಮಾಣಪತ್ರದಲ್ಲಿ ಹೆಸರು ತಿದ್ದುಪಡಿ ಕೋರಿ 2018ರಲ್ಲಿ ಅರ್ಜಿ ಸಲ್ಲಿಸಿದ್ದರು. ಈ ನಡುವೆ ಅವರಿಗೆ ಕೆನಡಾದ ಎಡ್ಮಾಂಟನ್ ಆಲ್ಬರ್ಟಾ ವಿ.ವಿಯಲ್ಲಿ ಪಿಎಚ್‌.ಡಿ ಪ್ರವೇಶ ಸಿಕ್ಕಿದೆ. ಆದರೆ, ಪ್ರಮಾಣಪತ್ರ ಸಿಗದಿರುವುದರಿಂದ ಸಮಸ್ಯೆಯಾಗಿದೆ. ಈ ರೀತಿಯ ಹಲವು ಪ್ರಕರಣಗಳು ನಮ್ಮ ಬಳಿ ಇವೆ’ ಎಂದು ಮಾಹಿತಿ ನೀಡಿದರು.

ಕೂಡಲೇ ಶೈಕ್ಷಣಿಕ ಅದಾಲತ್

‘ಕೆಎಸ್‌ಒಯು ವಿದ್ಯಾರ್ಥಿಗಳ ಸಮಸ್ಯೆಯನ್ನು ಆಲಿಸಿ, ಪರಿಹಾರ ನೀಡುವ ನಿಟ್ಟಿನಲ್ಲಿ ಕೂಡಲೇ ಶೈಕ್ಷಣಿಕ ಅದಾಲತ್‌ ನಡೆಸುವ ಮೂಲಕ ಸಮಸ್ಯೆ ಬಗೆಹರಿಸುತ್ತೇವೆ’ ಎಂದು ಕುಲಪತಿ ಪ್ರೊ.ವಿದ್ಯಾಶಂಕರ್ ತಿಳಿಸಿದರು.

***

ಈ ವಿದ್ಯಾರ್ಥಿಗಳು ಕಾನೂನುಬದ್ಧವಾಗಿ ಶುಲ್ಕ ಪಾವತಿಸಿ, ಪರೀಕ್ಷೆ ಬರೆದಿದ್ದಾರೆ. ಅವರಿಗೆ ಅಂಕಪಟ್ಟಿ, ಪ್ರಮಾಣಪತ್ರ ನೀಡದೇ ಇದ್ದಲ್ಲಿ ಲೋಪವಾಗುತ್ತದೆ

– ಪ್ರೊ.ಎಸ್‌.ವಿದ್ಯಾಶಂಕರ್‌, ಕುಲಪತಿ, ಕೆಎಸ್ಒಯು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.